ಗುತ್ತಿಗೆ ವೈದರ ಸೇವೆ ಖಾಯಂ ಮಾಡುವ ಕುರಿತು ಸಿಎಂ ಜೊತೆ ಚರ್ಚೆ: ಸಚಿವ ಶ್ರೀರಾಮುಲು

Update: 2020-07-07 15:17 GMT

ಬೆಂಗಳೂರು, ಜು.7: ಗುತ್ತಿಗೆ ವೈದ್ಯರು ಸೇವೆ ಕಾಯಂ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮುಖ್ಯಕಾರ್ಯದರ್ಶಿ ಜೊತೆ ಸಭೆ ನಡೆಸಿ, ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಸರಕಾರ ಗುತ್ತಿಗೆ ವೈದ್ಯರ ಬೇಡಿಕೆಗಳನ್ನು ಈಡೇರಿಸಿದೆ. ಈಗಲೂ ಸೂಕ್ತವಾಗಿ ಸ್ಪಂದಿಸಲಾಗುವುದು ಎಂದರು.

ಗುತ್ತಿಗೆ ವೈದ್ಯರ ಸಿಬ್ಬಂದಿ ಖಾಯಂ ಮಾಡೋದಕ್ಕೆ ಮತ್ತು ಸಂಬಳ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರು. ಗುತ್ತಿಗೆ ವೈದ್ಯರಿಗೆ ಸರಕಾರ 45 ಸಾವಿರ ರೂ.ಇದ್ದ ವೇತನ 60 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿ ಆದೇಶಿಸಿದೆ. ಈಗ ಹುದ್ದೆ ಖಾಯಮಾತಿಗೆ ಒತ್ತಾಯಿಸಿ ಮುಷ್ಕರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

2008-09ರಲ್ಲಿ ನಾನು ಆರೋಗ್ಯ ಸಚಿವನಾಗಿದ್ದಾಗ 1944 ಗುತ್ತಿಗೆ ವೈದ್ಯರನ್ನು ಖಾಯಂ ಮಾಡಲಾಗಿತ್ತು. ಇದೀಗ ಈ 600 ಜನ ಗುತ್ತಿಗೆ ವೈದ್ಯರಿಗೂ ಖಾಯಂ ಮಾಡಲು ಮುಖ್ಯಮಂತ್ರಿ ಒಪ್ಪಿದ್ದಾರೆ. ಇಂದು ವಿಧಾನಸೌಧದಲ್ಲಿ ನಡೆಯುವ ಗುತ್ತಿಗೆ ವೈದ್ಯರ ಜೊತೆಗಿನ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಶ್ರೀರಾಮುಲು ತಿಳಿಸಿದರು.

ಕೋವಿಡ್-19 ನಿಯಂತ್ರಣಕ್ಕಾಗಿ ಅವಿರತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಗೌರವ ಧನ ಹೆಚ್ಚಿಸುವಂತೆ ಮಾಡಿದ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು. ಹೀಗಾಗಿ ಪ್ರತಿಭಟನೆಗಿಳಿಯದೆ ಸೇವೆಯಲ್ಲಿ ಮುಂದುವರಿಯಬೇಕೆಂದು ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ ಎಂದು ಶ್ರೀರಾಮುಲು ತಿಳಿಸಿದರು.

ಕೊರೋನದಂತಹ ಸಂಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಪ್ರತಿ ಹಳ್ಳಿಹಳ್ಳಿಗಳಿಗೆ ತೆರಳಿ ಅವಿರತವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು.

ನಕ್ಸಲ್ ಪೀಡಿತ ಪ್ರದೇಶವಾದ ಬೆಳ್ತಂಗಡಿ ತಾಲೂಕಿನ ಕೊರಗ ಕಾಲನಿಯಲ್ಲಿ ವಾಸಿಸುವ ಸುಮಾರು 40ಕ್ಕೂ ಹೆಚ್ಚಿನ ಕುಟುಂಬಗಳಲ್ಲಿ ಕೆಲವರಿಗೆ ಡೆಂಗ್ ಸೇರಿದಂತೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಶ್ರೀರಾಮುಲು ತಿಳಿಸಿದರು.

ಆ ಭಾಗದಲ್ಲಿ ಸುರಿಯುತ್ತಿರುವ ಮಳೆಯ ನಡುವೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ, ರಭಸವಾಗಿ ಹರಿಯುವ ನದಿಯನ್ನು ಕಿರಿದಾದ ಕಾಲು ಸೇತುವೆಯ ಮೂಲಕ ಜೀವ ಕೈಯಲ್ಲಿ ಹಿಡಿದುಕೊಂಡು ದಾಟಿ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಅಲ್ಲದೆ, ರೋಗಗಳ ಕುರಿತು ಮುಂಜಾಗ್ರತೆ ವಹಿಸುವಂತೆ ಅರಿವು ಮೂಡಿಸಿ ಬಂದಿದ್ದಾರೆ. ಅವರ ಕರ್ತವ್ಯ ನಿಷ್ಠೆ, ನಿಸ್ವಾರ್ಥ ಸೇವೆ ನಿಜಕ್ಕೂ ಮೆಚ್ಚುವಂಥದ್ದು ಎಂದು ಶ್ರೀರಾಮುಲು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News