ಕೊರೋನ ಸೋಂಕಿತರ ಸಂಪರ್ಕ ಪತ್ತೆಗೆ ವಿಶೇಷ ತಂಡ ರಚನೆ

Update: 2020-07-07 16:45 GMT

ಬೆಂಗಳೂರು, ಜು. 7: ಮಾರಕ ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬೆಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 1,013 ನೌಕರರನ್ನು ಸಂಪರ್ಕ ತಂಡದ ಸದಸ್ಯರನ್ನಾಗಿ ನೇಮಿಸಿದ್ದು, ಎ, ಬಿ, ಸಿ ವರ್ಗದ ನೌಕರರು ತಮ್ಮ ದೈನಂದಿನ ಕೆಲಸ-ಕಾರ್ಯಗಳ ಜೊತೆ ಕೊರೋನ ವೈರಸ್ ಸೋಂಕು ಪೀಡಿತರ ಪತ್ತೆ ಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕು ಎಂದು ವಿಜಯ ಭಾಸ್ಕರ್ ಆದೇಶದಲ್ಲಿ ಸೂಚನೆ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ ದಿನೇ ದಿನೇ ಕೊರೋನ ಸೋಂಕಿತರ ಸಂಖ್ಯೆ ಏರುತ್ತಿದ್ದು, ಸೋಂಕಿತರೊಂದಿಗಿನ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಪತ್ತೆ ಮಾಡುವುದು ನಿಜಕ್ಕೂ ಸವಾಲೇ ಸರಿ. ಆಡಳಿತ ತರಬೇತಿ ಸಂಸ್ಥೆಯ ಮುಖ್ಯಸ್ಥರೂ ಅಬಕಾರಿ ಇಲಾಖೆ ಆಯುಕ್ತ ಡಾ.ಲೋಕೇಶ್, ಭೂ ಸಾರಿಗೆ ಇಲಾಖೆ ಆಯುಕ್ತೆ ಮಂಜುಳಾ ಅವರು ಸೋಂಕಿತರ ಸಂಪರ್ಕ ಪತ್ತೆ ತಂಡ ಮುಖ್ಯಸ್ಥರಾಗಿದ್ದಾರೆ.

ಕಠಿಣ ಕ್ರಮದ ಎಚ್ಚರಿಕೆ: ನಿಯೋಜನೆ ಆಗಿರುವವರು ವರದಿ ಮಾಡಿಕೊಳ್ಳದಿದ್ದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ 1 ವರ್ಷದ ವರೆಗೂ ಕಾರಗೃಹ ಶಿಕ್ಷೆ ವಿಧಿಸಬಹುದು. ಕೂಡಲೇ ನಿಯೋಜಿತ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು. ಎಲ್ಲ ಅಧಿಕಾರಿಗಳು ಮತ್ತು ನೌಕರರು ಕೂಡಲೇ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ ಆಯುಕ್ತರ ಕಚೇರಿಗೆ ವರದಿ ಮಾಡಿಕೊಳ್ಳತಕ್ಕದ್ದು ಎಂದು ಸೂಚನೆ ನೀಡಲಾಗಿದೆ.

`ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಸಂಪರ್ಕ ಪತ್ತೆ ಅತೀ ಪ್ರಮುಖವಾಗಿದ್ದು, ಇದಕ್ಕಾಗಿ ಹೆಚ್ಚುವರಿ ಮಾನವ ಸಂಪನ್ಮೂಲ ಒದಗಿಸಲು ವಿವಿಧ ಇಲಾಖೆಗಳ 1,013 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಇವರು ಸಂಪರ್ಕ ಪತ್ತೆ ಕಾರ್ಯ ತಂಡದ ನಾಯಕತ್ವ ವಹಿಸಿರುವ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ್ದಾರೆ'

-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News