ಪುತ್ರಿಯರ ನಷ್ಟದ ಉದ್ಯಮಗಳಿಗೆ ಕೋಟ್ಯಂತರ ರೂ. ಹಣ ಒದಗಿಸಿತ್ತು ಬಿ.ಆರ್. ಶೆಟ್ಟಿಯವರ ಎನ್ಎಂಸಿ

Update: 2020-07-07 16:44 GMT

ದುಬೈ (ಯುಎಇ), ಜು. 7: ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿ ಯುಎಇಯಲ್ಲಿ ನಡೆಸುತ್ತಿದ್ದ ಉದ್ಯಮವು ಈ ವರ್ಷ ಕುಸಿಯುವ ಮೊದಲು, ಅವರ ಕಂಪೆನಿಯು ಅವರ ಕುಟುಂಬ ಸದಸ್ಯರ ನಷ್ಟ ಅನುಭವಿಸುತ್ತಿದ್ದ ಉದ್ಯಮಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಹರಿಸಿತ್ತು ಎಂದು ಯುಎಇಯ ಸುದ್ದಿ ಸಂಸ್ಥೆಗಳನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶೆಟ್ಟಿಯವರ ಕಂಪೆನಿ ಎನ್ಎಂಸಿ ಹೆಲ್ತ್ ತನ್ನಲ್ಲಿರುವ ನಗದು ಮೊತ್ತವನ್ನು ಉತ್ಪ್ರೇಕ್ಷಿಸಿ ಹಾಗೂ ಸಾಲದ ಮೊತ್ತವನ್ನು ಕಡಿಮೆ ನಮೂದಿಸಿ ಸುಳ್ಳು ಹೇಳಿಕೆಯನ್ನು ನೀಡಿದೆ ಎಂಬುದಾಗಿ ಅಮೆರಿಕದ ಹೂಡಿಕೆ ಸಂಸ್ಥೆಯೊಂದು ಆರೋಪಿಸಿದ ಬಳಿಕ, ಕಳೆದ ವರ್ಷದ ಡಿಸೆಂಬರ್ ನಲ್ಲಿ ಶೆಟ್ಟಿ ಮತ್ತು ಎನ್ಎಂಸಿ ಹೆಲ್ತ್ ಅನ್ನು ನಿಗಾದಲ್ಲಿಡಲಾಗಿದೆ.

ಎನ್ಎಂಸಿಯ ಶೇರುಗಳು 70 ಶೇಕಡಕ್ಕೂ ಅಧಿಕ ಮೌಲ್ಯವನ್ನು ಕಳೆದುಕೊಂಡ ಬಳಿಕ, ಈ ವರ್ಷದ ಫೆಬ್ರವರಿಯಲ್ಲಿ ಕಂಪೆನಿಯ ಸಹ-ಅಧ್ಯಕ್ಷ ಬಿ.ಆರ್. ಶೆಟ್ಟಿ ರಾಜೀನಾಮೆ ನೀಡಿದ್ದಾರೆ. ಎನ್ಎಂಸಿ ಹೆಲ್ತ್ ತನ್ನ 6.6 ಬಿಲಿಯ ಡಾಲರ್ (ಸುಮಾರು 49,400 ಕೋಟಿ ರೂಪಾಯಿ) ಸಾಲವನ್ನು ಮರೆಮಾಚಿದೆ ಎಂದು ಆರೋಪಿಸಲಾಗಿದೆ.

ಎನ್ಎಂಸಿಯು ಒಂದು ಕಾಲದಲ್ಲಿ ಯುಎಇಯ ಅತಿ ದೊಡ್ಡ ಆರೋಗ್ಯ ಸೇವೆಗಳನ್ನು ಒದಗಿಸುವ ಕಂಪೆನಿಯಾಗಿತ್ತು. ಅಲ್ಲಿ 2,000 ವೈದ್ಯರು ಸೇರಿದಂತೆ ಸುಮಾರು 20,000 ಮಂದಿ ಕೆಲಸ ಮಾಡುತ್ತಿದ್ದರು.

‘‘ಬಿ.ಆರ್. ಶೆಟ್ಟಿಯವರ ಪುತ್ರಿಯರು ನಷ್ಟ ಅನುಭವಿಸುತ್ತಿದ್ದ ಆಹಾರ ಮತ್ತು ಪಾನೀಯ ಉದ್ಯಮ, ಆಭರಣ ಉದ್ಯಮ ಮತ್ತು ಪುಷ್ಪವಿನ್ಯಾಸ ಉದ್ಯಮಗಳಿಗೆ ಸುಮಾರು 2 ಮಿಲಿಯ ದಿರ್ಹಮ್ (ಸುಮಾರು 4.07 ಕೋಟಿ ರೂಪಾಯಿ) ಮೊತ್ತವನ್ನು ಬ್ಯಾಂಕ್ ಟ್ರಾನ್ಸ್ ಫರ್ ಮೂಲಕ ನೀಡಲಾಗಿತ್ತು’’ ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.

ಬಿ.ಆರ್. ಶೆಟ್ಟಿಗೆ ಮೂವರು ಪುತ್ರಿಯರು ಮತ್ತು ಒಬ್ಬ ಮಗ ಇದ್ದಾರೆ. ಶೆಟ್ಟಿಯವರ ಪುತ್ರ ಮತ್ತು ಪತ್ನಿ ಅವರೇ (ಬಿ.ಆರ್. ಶೆಟ್ಟಿ) ಸ್ಥಾಪಿಸಿದ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

‘‘ಬಿ.ಆರ್. ಶೆಟ್ಟಿ ಕುಟುಂಬದ ಪ್ರತಿ ಉದ್ಯಮವನ್ನು ಎನ್ಎಂಸಿ ಹೆಲ್ತ್ ಹೇಗೆ ಬೆಂಬಲಿಸಿತು ಎನ್ನುವುದು ಹೊಸ ಮಾಹಿತಿಗಳಿಂದ ಬಹಿರಂಗವಾಗಿದೆ. ಅವರ ಕುಟುಂಬ ಸದಸ್ಯರು ಅರ್ಧ ಡಝನ್ ಗಿಂತಲೂ ಅಧಿಕ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ, ಈ ಮಾಹಿತಿಯು ತೀರಾ ಅಲ್ಪವಾಗಿರಲೂಬಹುದು. ಅವರ ಕುಟುಂಬದ ಎಲ್ಲ ಉದ್ಯಮಗಳು ಒಂದೋ ಮುಚ್ಚಿವೆ ಅಥವಾ ಹೆಚ್ಚಿನ ಮುನ್ನಡೆಯನ್ನು ಗಳಿಸಲು ವಿಫಲವಾಗಿವೆ. ಈ ಪೈಕಿ ಹೆಚ್ಚಿನ ವಂಚನೆಗಳು ಅಥವಾ ವಂಚನೆಯ ಆರಂಭವು ಶೆಟ್ಟಿ ಕಂಪೆನಿಯ ಸಿಇಒ ಆಗಿದ್ದಾಗ 2017ಕ್ಕಿಂತ ಮುಂಚೆಯೇ ಸಂಭವಿಸಿದೆ’’ ಎಂದು ಮೂಲಗಳನ್ನು ಉಲ್ಲೇಖಿಸಿ ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.

ಶೆಟ್ಟಿಯವರ ಮಗಳು ರೀಮಾ ಮತ್ತು ಅವರ ಗಂಡ ಮುಹಮ್ಮದ್ ಬಿತರ್ ಆರಂಭಿಸಿದ ‘ಜಸ್ಟ್ ಫಲಾಫೆಲ್’ ಎಂಬ ರೆಸ್ಟೋರೆಂಟ್ ಸಮೂಹಕ್ಕೆ 2015ರಲ್ಲಿ ಎರಡು ಬಾರಿ ತಲಾ ಒಂದು ಮಿಲಿಯಮ್ ದಿರ್ಹಮ್ (ಸುಮಾರು 2.03 ಕೋಟಿ ರೂಪಾಯಿ)ನಂತೆ ಎನ್ಎಂಸಿ ಹೆಲ್ತ್ ಪಾವತಿಸಿತ್ತು ಎಂದು ಅಬುಧಾಬಿಯ ಮಾಧ್ಯಮ ಸಂಸ್ಥೆ ‘ದ ನ್ಯಾಶನಲ್’ ವರದಿ ಮಾಡಿದೆ.

‘‘ಲಂಡನ್ ನಲ್ಲಿದ್ದ ‘ಜಸ್ಟ್ ಫಲಾಫೆಲ್’ನ ನಾಲ್ಕು ಮಳಿಗೆಗಳು ಆರ್ಥಿಕ ಸಮಸ್ಯೆಗಳಿಂದಾಗಿ ಮುಚ್ಚಿದ ಬಳಿಕ, 2015ರ ಜುಲೈನಲ್ಲಿ ಮೊದಲ ಕಂತಿನ ಹಣಪಾವತಿಗಾಗಿ ಕೋರಿಕೆ ಸಲ್ಲಿಸಲಾಗಿತ್ತು’’ ಎಂದು ಅದು ಹೇಳಿದೆ.

ಮೊದಲ ಒಂದು ಮಿಲಿಯ ದಿರ್ಹಮ್ ಪಾವತಿಯನ್ನು ಎನ್ಎಂಸಿ ಗುಂಪಿನೊಳಗಿನ ‘ಆಂತರಿಕ ಹಣ ವರ್ಗಾವಣೆ’ ಎಂಬುದಾಗಿ ನಮೂದಿಸಲಾಗಿದೆ ಎಂದು ‘ದ ನ್ಯಾಶನಲ್’ ಹೇಳಿದೆ. ‘‘ಆದರೆ, 2015 ಡಿಸೆಂಬರ್ ನಲ್ಲಿ ಸಲ್ಲಿಸಿದ ಲೆಕ್ಕಪತ್ರದಲ್ಲಿ, ‘ಜಸ್ಟ್ ಫಲಾಫೆಲ್’ ಸಂಸ್ಥೆಯನ್ನು ತನ್ನ ಸಹಸಂಸ್ಥೆ ಎಂಬುದಾಗಿ ಎನ್ಎಂಸಿ ನಮೂದಿಸಿಲ್ಲ ಹಾಗೂ ಬಿ.ಆರ್. ಶೆಟ್ಟಿಯವರ ಯುಎಇಯಲ್ಲಿರುವ ಹೋಲ್ಡಿಂಗ್ ಕಂಪೆನಿ ಬಿಆರ್ ಎಸ್ ವೆಂಚರ್ಸ್ ನಲ್ಲಿಯೂ ಅದು ಸ್ಥಾನ ಪಡೆದಿಲ್ಲ’’ ಎಂದು ಅದು ವರದಿ ಮಾಡಿದೆ.

ಎನ್ಎಂಸಿ ಈಗ ಆಡಳಿತಾಧಿಕಾರಿಯ ಅಧೀನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News