ಬೆಂಗಳೂರು ನಗರದಲ್ಲಿ 800 ಹೊಸ ಕೊರೋನ ಪ್ರಕರಣ ದೃಢ

Update: 2020-07-07 17:18 GMT

ಬೆಂಗಳೂರು, ಜು.7: ನಗರದಲ್ಲಿ ಮಂಗಳವಾರ 800 ಹೊಸ ಕೊರೋನ ಪ್ರಕರಣ ದೃಢಪಟ್ಟಿದೆ. ನಗರದಲ್ಲಿ ಈವರೆಗೆ ಒಟ್ಟು 11,361 ಕೊರೋನ ಸೋಂಕಿತರು ಪತ್ತೆಯಾಗಿದ್ದು, ಇದರಲ್ಲಿ ಮಂಗಳವಾರ 265 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಈವರೆಗೆ ಒಟ್ಟು 1,810 ಜನ ಗುಣಮುಖರಾಗಿದ್ದಾರೆ. ಇನ್ನು ನಗರದಲ್ಲಿರುವ ನಿಗದಿತ ಆಸ್ಪತ್ರೆಯ ಐಸಿಯುನಲ್ಲಿ 175 ಜನ ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ನಗರದಲ್ಲಿ ಒಟ್ಟು 9,395 ಸಕ್ರಿಯ ಪ್ರಕರಣಗಳಿವೆ. ಬಿಬಿಎಂಪಿ ವ್ಯಾಪ್ತಿಯ 31 ಜ್ವರ ತಪಾಸಣೆ ಕೇಂದ್ರದಲ್ಲಿ 492 ವ್ಯಕ್ತಿಗಳು ಸೇರಿದಂತೆ ಒಟ್ಟು 19,920 ವ್ಯಕ್ತಿಗಳ ತಪಾಸಣೆ ನಡೆಸಲಾಗಿದೆ.

ಕಳೆದ ಒಂದು ವಾರದಿಂದ ಪ್ರತಿದಿನ ಸಾವಿರಕ್ಕೂ ಹೆಚ್ಚು ಸೋಂಕಿತರ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಮಂಗಳವಾರ ಕೊಂಚ ಕಡಿಮೆಯಾಗಿದ್ದು, ಬೆಂಗಳೂರು ಜನತೆಗೆ ಆತಂಕ ಕಡಿಮೆಯಾಗಿದೆ.

ಇಂದಿನ ವರದಿಯಲ್ಲಿ ಮೂರು ವರ್ಷದ ಮಕ್ಕಳಿಂದ ಹಿಡಿದು 90 ವರ್ಷದ ವಯೋವೃದ್ಧರಿಗೂ ಕೊರೋನ ಸೋಂಕು ತಗಲಿದೆ. ಆದರೆ, ಅವರಿಗೆ ಹೇಗೆ ಕೊರೋನ ಬಂದಿದೆ ಎಂಬುದೇ ಈಗ ವೈದ್ಯರಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಯಾವುದೇ ಸಂಪರ್ಕಿತರಿಂದ ಬಂದಿಲ್ಲ. ಎಲ್ಲವೂ ಹೊಸ ಸೋಂಕಿತರೆ ಪತ್ತೆಯಾಗಿದ್ದಾರೆ.

ಮೇಯರ್ ಆಪ್ತನಿಗೆ ಕೊರೋನ

ಪಾಲಿಕೆ ಮೇಯರ್ ಗೌತಮ್‍ಕುಮಾರ್ ಅವರ ಆಪ್ತ ಸಹಾಯಕರಿಗೂ ಕೊರೋನ ಸೋಂಕು ಕಾಣಿಸಿಕೊಂಡಿದೆ. ಸೋಂಕಿತ ಈ ವ್ಯಕ್ತಿ ಮೇಯರ್ ಅವರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಹಾಗಾಗಿ ಮೇಯರ್ ಅವರೂ ಕ್ವಾರಂಟೈನ್‍ಗೆ ಒಳಪಡುವ ಸಾಧ್ಯತೆಯಿದೆ. ಅಲ್ಲದೇ ಮೇಯರ್ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

36 ಗಂಟೆಯಾದರೂ ಸೋಂಕಿತ ಮನೆಯಲ್ಲೇ

ಶಿವಾಜಿನಗರ ಬಳಿಯ ಭಾರತಿನಗರದಲ್ಲಿ ಒಂದೂವರೆ ದಿನವಾದರೂ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿಬ್ಬಂದಿ ಬಂದಿಲ್ಲ ಎಂದು ತಿಳಿದುಬಂದಿದೆ.

ಸೋಂಕಿತ ವ್ಯಕ್ತಿಯ ಮನೆಯಲ್ಲಿ ಆರು ಜನ ಇದ್ದಾರೆ. ಅವರಲ್ಲಿ ಇಬ್ಬರು ಹಿರಿಯ ನಾಗರಿಕರು, ಇಬ್ಬರು ಮಕ್ಕಳೂ ಇದ್ದಾರೆ. ನೋಡಲ್ ಅಧಿಕಾರಿಗಳಾರೂ ಕರೆ ಸ್ವೀಕರಿಸುತ್ತಿಲ್ಲ. 108ಗೆ ಕರೆ ಮಾಡಿದರೆ, ಮೊದಲು ಆಸ್ಪತ್ರೆಯಲ್ಲಿ ಹಾಸಿಗೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳಿ. ನಂತರ ಬರುತ್ತೇವೆ ಎಂದು ಒಂದೂವರೆ ದಿನವಾದರೂ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿಬ್ಬಂದಿ ಬಂದಿಲ್ಲ ಎನ್ನಲಾಗಿದೆ.

ಸೀಲ್‍ಡೌನ್ ಪ್ರದೇಶದಲ್ಲಿ ಅಡ್ಡಾದಿಡ್ಡಿ ಓಡಾಟ

ಚಾಮರಾಜಪೇಟೆ, ಕಲಾಸಿಪಾಳ್ಯ ಪ್ರದೇಶದಲ್ಲಿ ಸೋಂತರ ಸಂಖ್ಯೆ ಹೆಚ್ಚಳ ಹಿನ್ನೆಲೆ ಸೀಲ್‍ಡೌನ್ ಮಾಡಲಾಗಿದ್ದು, ಜನರು ಬ್ಯಾರಿಕೇಡ್, ಶೀಟ್‍ಗಳನ್ನು ಪಕ್ಕಕ್ಕೆ ತಳ್ಳಿ, ಮಾಸ್ಕ್ ಧರಿಸದೇ ಅಡ್ಡಾದಿಡ್ಡಿ ಓಡಾಡುತ್ತಿದ್ದಾರೆ. ಕಳ್ಳಮಾರ್ಗದಲ್ಲಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಾಲಿಕೆ ಎಡವಟ್ಟಿನಿಂದ ಗರ್ಭಿಣಿ ಪರದಾಟ

ಹೊಸಗುಡ್ಡದಹಳ್ಳಿಯ ಗರ್ಭಿಣಿ ಕೊರೋನ ಪರೀಕ್ಷೆಗೆ ಒಳಗಾಗಿದ್ದು, ಸೋಮವಾರ ತಡರಾತ್ರಿ ಪಾಲಿಕೆ ಅಧಿಕಾರಿಗಳು ಕರೆ ಮಾಡಿ ಗರ್ಭಿಣಿಗೆ ಸೋಂಕು ದೃಢಪಟ್ಟಿದೆ, ಮಂಗಳವಾರ 10 ಗಂಟೆಗೆ ಆಂಬುಲೆನ್ಸ್ ಬರಲಿದೆ ಎಂದು ತಿಳಿಸಿದ್ದಾರೆ. ಬೆಳಗ್ಗೆ ಆಂಬುಲೆನ್ಸ್ ನಲ್ಲಿ ಹೊಸಕೋಟೆ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಹೋಗಿದ್ದು, ವೈದ್ಯರು ನಿಮಗೆ ಸೋಂಕು ತಗುಲಿಲ್ಲ ಎಂದು ಮನೆಗೆ ಕಳುಹಿಸಿದ್ದಾರೆ. ಮನೆಗೆ ಬಂದ ನಂತರ ಮತ್ತೊಬ್ಬ ಆಂಬುಲೆನ್ಸ್ ಚಾಲಕ ಕರೆ ಮಾಡಿ ನಿಮಗೆ ಸೋಂಕು ದೃಢಪಟ್ಟಿದ್ದು, ನಿಮ್ಮ ಮನೆ ಬಳಿ ಇದ್ದೇನೆ ಎಂದು ತಿಳಿಸಿದ್ದಾನೆ. ವರದಿ ಬಂದಿದೆಯೇ? ಇಲ್ಲವೇ? ಎಂಬುದೇ ಸರಿಯಾಗಿ ತಿಳಿಯುತ್ತಿಲ್ಲ ಎಂದು ಗರ್ಭಿಣಿ ಕುಟುಂಬಸ್ಥರು ದೂರಿದ್ದಾರೆ.

ಒಂದು ವಾರ ಲ್ಯಾಬ್ ಬಂದ್

ಜಯನಗರದಲ್ಲಿರುವ ರಾಷ್ಟ್ರೀಯ ಸಂಸ್ಥೆ(ಎನ್‍ಐವಿ)ಯಲ್ಲಿನ ಕೊರೋನ ಪ್ರಯೋಗಾಲಯದ ಸಿಬ್ಬಂದಿಗೆ ಸೋಂಕು ತಗಲಿದ್ದರಿಂದ ಲ್ಯಾಬ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕೊರೋನ ವೈರಸ್ ಸೋಂಕು ದೃಢಪಟ್ಟ ವ್ಯಕ್ತಿಯ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಲ್ಯಾಬ್ ಅನ್ನು 7 ದಿನಗಳನ್ನು ಬಂದ್ ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಯಂ ಲಾಕ್‍ಡೌನ್‍ಗೆ ಶಾಸಕರ ಕರೆ

ಕೊರೋನ ವೈರಸ್ ಸಮುದಾಯಕ್ಕೆ ಹರಡುತ್ತಿದ್ದು, ಸ್ವಯಂ ನಿರ್ಬಂಧ ಹಾಕಿಕೊಳ್ಳುವಂತೆ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ. ಹಾರೀಸ್ ಕರೆ ನೀಡಿದ್ದಾರೆ. ಜೀವವಿದ್ದರೆ ಜೀವನ ಎಂಬ ಟ್ಯಾಗ್‍ಲೈನ್ ಮುಖಾಂತರ ಪ್ರಚಾರ ಆರಂಭಿಸಿದ್ದು, ಕ್ಷೇತ್ರದ ನಾಗರಿಕರು ಹಾಗೂ ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News