ಅಮೆರಿಕ ನಡೆಸಿದ ಇರಾನ್ ಜನರಲ್ ಹತ್ಯೆ ‘ಕಾನೂನುಬಾಹಿರ’: ವಿಶ್ವಸಂಸ್ಥೆಯ ಮಾನವಹಕ್ಕುಗಳ ತನಿಖಾಧಿಕಾರಿ

Update: 2020-07-07 17:57 GMT

ಜಿನೀವ (ಸ್ವಿಟ್ಸರ್ಲ್ಯಾಂಡ್), ಜು. 7: ಇರಾನ್ ಸೇನಾಧಿಕಾರಿ ಖಾಸಿಮ್ ಸುಲೈಮಾನಿ ಮತ್ತು ಇತರ ಒಂಭತ್ತು ಮಂದಿಯ ಸಾವಿಗೆ ಕಾರಣವಾದ ಅಮೆರಿಕ ಡ್ರೋನ್ ದಾಳಿಯು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ತನಿಖಾಧಿಕಾರಿ ಸೋಮವಾರ ಹೇಳಿದ್ದಾರೆ.

ಜನವರಿ 3ರಂದು ಇರಾಕ್ ರಾಜಧಾನಿ ಬಗ್ದಾದ್ ನಲ್ಲಿರುವ ವಿಮಾನ ನಿಲ್ದಾಣದ ಹೊರಗೆ ಸುಲೈಮಾನಿಯವರ ವಾಹನಗಳ ಸಾಲಿನ ಮೇಲೆ ದಾಳಿ ನಡೆದಿತ್ತು. ಈ ದಾಳಿಯಿಂದ ಆಕ್ರೋಶಗೊಂಡ ಇರಾನ್ ಇರಾಕ್ ನಲ್ಲಿರುವ ಅಮೆರಿಕ ಸೇನೆಯ ನೆಲೆಗಳ ಮೇಲೆ ಸರಣಿ ದಾಳಿ ನಡೆಸಿತ್ತು. ಆದರೆ, ಆ ದಾಳಿಗಳಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಸುಲೈಮಾನಿ ಮೇಲಿನ ದಾಳಿಯನ್ನು ಸಮರ್ಥಿಸಲು, ಅಮೆರಿಕ ಸಾಕಷ್ಟು ಪುರಾವೆಗಳನ್ನು ಒದಗಿಸಿಲ್ಲ. ತನ್ನ ಹಿತಾಸಕ್ತಿಗಳ ಮೇಲೆ ದಾಳಿ ನಡೆಯುತ್ತಿದೆ ಅಥವಾ ದಾಳಿ ಸನ್ನಿಹಿತವಾಗಿದೆ ಎನ್ನುವುದನ್ನು ಸಾಬೀತುಪಡಿಸಲು ಅಮೆರಿಕ ವಿಫಲವಾಗಿದೆ ಎಂದು ವಿಶ್ವಸಂಸ್ಥೆಯ ನ್ಯಾಯಾಂಗೇತರ, ವಿಚಾರಣಾರಹಿತ ಅಥವಾ ಸ್ವೇಚ್ಛಾನುಸಾರ ಹತ್ಯೆಗಳ ಕುರಿತ ವಿಶೇಷ ರಾಯಭಾರಿ ಆಗ್ನೆಸ್ ಕ್ಯಾಲಮಾರ್ಡ್ ಹೇಳಿದ್ದಾರೆ.

ಈ ದಾಳಿಯು ವಿಶ್ವಸಂಸ್ಥೆಯ ಸನ್ನದನ್ನು ಉಲ್ಲಂಘಿಸಿದೆ ಎಂದು ಅವರು ತನ್ನ ವರದಿಯಲ್ಲಿ ಬರೆದಿದ್ದಾರೆ. ಡ್ರೋನ್ ಗಳ ಮೂಲಕ ನಡೆಸುವ ನಿರ್ದೇಶಿತ ಹತ್ಯೆಗಳಿಗೆ ಉತ್ತರದಾಯಿತ್ವ ನಿಗದಿಪಡಿಸಬೇಕು ಹಾಗೂ ಶಸ್ತ್ರಗಳನ್ನು ಹೆಚ್ಚಿನ ನಿಯಂತ್ರಣಗಳಿಗೆ ಒಳಪಡಿಸಬೇಕು ಎಂದು ಅವರು ತನ್ನ ವರದಿಯಲ್ಲಿ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News