ಬೆಂಗಳೂರು: 198 ವಾರ್ಡ್ ಗಳಲ್ಲಿ ಕೊರೋನ ಚಿಕಿತ್ಸಾ ಕೇಂದ್ರ ಪ್ರಾರಂಭ

Update: 2020-07-07 18:07 GMT

ಬೆಂಗಳೂರು, ಜು.7: ನಗರದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 113 ನಗರ ಆರೋಗ್ಯ ಪ್ರಾಥಮಿಕ ಕೇಂದ್ರ ಹಾಗೂ ಮತ್ತು 6 ರೆಫರಲ್ ಆಸ್ಪತ್ರೆಗಳನ್ನು ಜ್ವರ ಚಿಕಿತ್ಸಾಲಯಗಳನ್ನಾಗಿ ಬಿಬಿಎಂಪಿ ಪರಿವರ್ತಿಸಿದೆ.

ಈ ಜ್ವರ ಚಿಕಿತ್ಸಾಲಯದಲ್ಲಿ ಸಂಶಯಾಸ್ಪದ ಕೊರೋನ ಪ್ರಕರಣಗಳಿಗೆ ಗಂಟಲು ದ್ರವದ ಮಾದರಿ ಸಂಗ್ರಹಣೆ ಮಾಡಲು ನಿರ್ಧರಿಸಲಾಗಿದೆ. ಈ ಗಂಟಲು ದ್ರವ ಪರೀಕ್ಷೆಯ ವೆಚ್ಚವನ್ನು ಸಂಪೂರ್ಣ ಬಿಬಿಎಂಪಿ ಭರಿಸಲಿದೆ.

ಎಲ್ಲ ಜ್ವರ ಚಿಕಿತ್ಸಾಲಯಗಳು ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಕಾರ್ಯನಿರ್ವಹಿಸಲಿವೆ ಹಾಗೂ ಗಂಟಲು ಮಾದರಿಯನ್ನು ಟೋಕನ್ ವಿತರಿಸಿ ಅದರಂತೆ ಬೆಳೆಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಮಾಡಲಾಗುವುದು.

ಈ ಚಿಕಿತ್ಸಾಲಯಗಳಲ್ಲಿ ಜ್ವರ, ಕಫ ಹಾಗೂ ಸ್ಕ್ರೀನಿಂಗ್ ಟೆಸ್ಟ್ ಮಾಡಿಸಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಒಂದೊಂದು ಕ್ಲಿನಿಕ್‍ನಲ್ಲೂ ವೈದ್ಯಾಧಿಕಾರಿ, ಶುಶ್ರೂಶಕಿ, ಹಿರಿಯ ಹಾಗೂ ಕಿರಿಯ ಆರೋಗ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಸ್ಯಾನಿಟೈಸರ್, ಒಬ್ಬರಿಂದ ಒಬ್ಬರು ಸಾಕಷ್ಟು ದೂರದಲ್ಲಿ ನಿಲ್ಲುವುದು, ಮುಂತಾದ ಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಕ್ಲಿನಿಕ್‍ಗೆ ಬರುವ ರೋಗಿಗಳಿಗೆ ಜ್ವರ ಇದ್ದಾಗ ಅವರಿಗೆ ಅಗತ್ಯವಾದ ಪ್ಯಾರಾಸಿಟಮಾಲ್, ಓಆರ್‍ಎಸ್ ಮತ್ತು ನೆಗಡಿಯ ಔಷಧಗಳನ್ನು ಸಿದ್ದ ಮಾಡಿಟ್ಟುಕೊಳ್ಳಲಾಗಿದೆ. ಸಾಮಾನ್ಯ ಜ್ವರವಾದರೆ ಈ ಔಷಧಗಳನ್ನು ನೀಡಿ ಸ್ವಲ್ಪ ಸಮಯ ಕಾದು ನೋಡುವಂತೆ ತಿಳಿಸಲಾಗುತ್ತದೆ. ಪ್ರತಿಯೊಬ್ಬ ರೋಗಿಯ ಸಂಪೂರ್ಣ ವಿವರ ಪಡೆಯಲಾಗುತ್ತದೆ.

ಕೊರೋನ ಶಂಕಿತರಿಗೆ ಜ್ವರ ತಪಸಣಾ ಕೇಂದ್ರದಲ್ಲಿ ಸ್ವಾಬ್ ಶೇಖರಣೆ ಮಾಡಿ ನಂತರ ಅದನ್ನು ಕೊರೋನ ಟೆಸ್ಟಿಂಗ್ ಲ್ಯಾಬ್‍ಗೆ ಕಳಿಸಿಕೊಡಲಾಗುವುದು. ಇದಾದ ಬಳಿಕ ಶಂಕಿತ ರೋಗಿಯ ಕೋವಿಡ್-19 ರಿಪೋರ್ಟ್ ಬರಲಿದೆ. ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಸಾವಿರಕ್ಕೂ ಅಧಿಕ ಮಂದಿಗೆ ಈ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News