ನೇಪಾಳ ಪ್ರಧಾನಿ ನೆರವಿಗೆ ಧಾವಿಸಿದ ಚೀನಾ: ಕೊನೆಯ ಹಂತಕ್ಕೆ ಬಿಕ್ಕಟ್ಟು

Update: 2020-07-08 05:08 GMT

ಹೊಸದಿಲ್ಲಿ, ಜು.8: ಭಾರತ ವಿರೋಧಿ ನಿಲುವಿಗಾಗಿ ಸ್ವಪಕ್ಷೀಯರಿಂದಲೇ ಕೆಂಗಣ್ಣಿಗೆ ಗುರಿಯಾಗಿರುವ ನೇಪಾಳ ಪ್ರಧಾನಿ ಕೆ.ಪಿ.ಓಲಿಯವರ ರಕ್ಷಣೆಗೆ ಚೀನಾ ಧಾವಿಸಿದೆ. ನೇಪಾಳದಲ್ಲಿ ಚೀನಾ ರಾಯಭಾರಿಯಾಗಿರುವ ಹ್ಯೂ ಯಾಂಕಿ ಮತ್ತು ನೇಪಾಳದ ಉನ್ನತ ನಾಯಕರು ಸರಣಿ ಸಭೆಗಳನ್ನು ನಡೆಸಿದ್ದಾರೆ

ಚೀನಾಗೆ ನಿಕಟರಾಗಿರುವ ಓಲಿಯವರ ಪದಚ್ಯುತಿಗೆ ಸ್ವಪಕ್ಷೀಯರಿಂದಲೇ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಈ ಭೇಟಿ ವಿಶೇಷ ಮಹತ್ವ ಪಡೆದಿದೆ. ಅಧಿಕಾರ ಉಳಿಸಿಕೊಳ್ಳುವ ಯತ್ನದಲ್ಲಿ ಓಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎನ್ನುವುದು ಬುಧವಾರ ನಡೆಯುವ ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿ ಸಭೆಯಲ್ಲಿ ಗೊತ್ತಾಗಲಿದೆ.

ಅಧ್ಯಕ್ಷೆ ಬಿಂಧ್ಯಾದೇವಿ ಭಂಡಾರಿ ಅವರನ್ನಲ್ಲದೇ ಪ್ರಭಾವಿ ಮುಖಂಡರಾದ ಮಾಜಿ ಪ್ರಧಾನಿ ಮಾಧವ್ ನೇಪಾಳ ಮತ್ತು ಝಾಲಾನಾಥ್ ಖನಾಲ್ ಅವರನ್ನೂ ಹ್ಯೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಓಲಿ ಪ್ರಧಾನಿ ಹುದ್ದೆಗೆ ಮತ್ತು ಪಕ್ಷಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಈ ಇಬ್ಬರೂ ಒತ್ತಡ ತಂದಿದ್ದರು. ಓಲಿಯವರ ಪ್ರತಿಸ್ಪರ್ಧಿ ಮತ್ತು ಪಕ್ಷದ ಸಹ ಅಧ್ಯಕ್ಷ ಪಿ.ಕೆ.ದಹಲ್ ಪ್ರಚಂಡ ಜತೆ ಕೂಡಾ ಮಾತುಕತೆಗೆ ಸಮಯ ಕೋರಿರುವುದಾಗಿ ಹ್ಯೂ ಪ್ರಕಟಿಸಿದ್ದಾರೆ.

ಸ್ಥಾಯಿ ಸಮಿತಿಯ 44 ಸದಸ್ಯರ ಪೈಕಿ 30 ಮಂದಿ ಓಲಿ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಓಲಿ ರಾಜೀನಾಮೆಗೆ ನಿರಾಕರಿಸಿದರೂ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಪಕ್ಷದಿಂದ ಅವರನ್ನು ಉಚ್ಚಾಟಿಸುವ ಅವಕಾಶವೂ ಇದೆ. ಆದರೆ ಪ್ರಚಂಡ ಮತ್ತು ಇತರ ಮುಖಂಡರು ಅಂಥ ಹೆಜ್ಜೆ ಇಡುತ್ತಾರೆಯೇ ಎನ್ನುವುದು ಕುತೂಹಲ ಮೂಡಿಸಿದೆ.

ಪಕ್ಷವನ್ನು ವಿಭಜಿಸಿದ ಕಳಂಕ ಹೊರಲು ಯಾರೂ ಸಿದ್ಧರಿಲ್ಲ. ಮುಖಂಡರ ನಡುವಿನ ಭಿನ್ನಾಭಿಪ್ರಾಯ ಅಂಥ ಗಂಭೀರವಾದ್ದೇನಲ್ಲ; ಬಗೆಹರಿಸಬಹುದು ಎಂಬ ವಿಶ್ವಾಸವನ್ನು ಪಕ್ಷದ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ ಭಂಡಾರಿಯವರನ್ನು ಹ್ಯೂ ಭೇಟಿ ಮಾಡುವ ಪ್ರಸ್ತಾವಕ್ಕೆ ವಿದೇಶಾಂಗ ಸಚಿವಾಲಯ ಒಪ್ಪಿಗೆ ನೀಡಿರಲಿಲ್ಲ; ಇದು ರಾಜತಾಂತ್ರಿಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ನೇಪಾಳ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News