ದುಷ್ಕರ್ಮಿಗಳ ದಾಳಿಗೆ ಗುರಿಯಾದ ಅಂಬೇಡ್ಕರ್ ಮನೆ

Update: 2020-07-09 10:04 GMT

ಶತಮಾನಗಳಿಂದ ಕತ್ತಲ ಕೂಪದಲ್ಲಿದ್ದ ಭಾರತಕ್ಕೆ ಬೆಳಕು ನೀಡುವ ಸಂವಿಧಾನವನ್ನು ನೀಡಿದ ಡಾ. ಬಿ. ಆರ್. ಅಂಬೇಡ್ಕರ್ ಅವರ ಮುಂಬೈನ ಮನೆ ರಾಜಗೃಹ ಮನುವಾದಿ ದುಷ್ಕರ್ಮಿಗಳ ದಾಳಿಗೆ ಗುರಿಯಾಗಿದೆ. ಮಂಗಳವಾರ ರಾತ್ರಿ ಮುಂಬೈನ ದಾದರ್‌ನಲ್ಲಿರುವ ಬಾಬಾಸಾಹೇಬರ ನಿವಾಸದ ಆವರಣದ ಒಳಗೆ ನುಗ್ಗಿದ ಕಿಡಿಗೇಡಿಗಳು ಸಿಸಿಟಿವಿಯನ್ನು ಧ್ವಂಸಗೊಳಿಸಿದ್ದಾರೆ. ಪುಟ್ಟ ಉದ್ಯಾನದೊಳಗಿದ್ದ ಹೂವಿನ ಕುಂಡಗಳನ್ನು ಒಡೆದು ಹಾಕಿದ್ದಾರೆ. ರಾತ್ರೋರಾತ್ರಿ ನಡೆದ ಈ ಘಟನೆಯನ್ನು ಆಕಸ್ಮಿಕವೆಂದು ತಳ್ಳಿ ಹಾಕಲು ಬರುವುದಿಲ್ಲ. ಇದು ಯಾರೋ ದಾರಿಹೋಕರ, ಉಡಾಳ ಹುಡುಗರ ಕೆಲಸವಲ್ಲ. ಇದು ಗುರಿಯಿಟ್ಟು ಮಾಡಿದ ದಾಳಿ. ಮನೆಯಲ್ಲಿ ಇದ್ದವರನ್ನು ಬೆದರಿಸುವ ಕುತಂತ್ರ ಎಂದು ಹೇಳಿದರೆ ಅದು ಅತಿಶಯೋಕ್ತಿಯಾಗುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತ ಬಂದ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೋಡಿದರೆ ಈ ದಾಳಿಯ ಹಿಂದೆ ಭಾರೀ ಒಳಸಂಚಿದೆ.

 ಬಾಬಾಸಾಹೇಬರ ಮೇಲಿನ ಮನುವಾದಿ ಫ್ಯಾಶಿಸ್ಟರ ದ್ವೇಷಕ್ಕೆ ದಶಕಗಳ ಇತಿಹಾಸವಿದೆ. ಸ್ವಾತಂತ್ರಾನಂತರ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡಲು ಹೊಂಚು ಹಾಕಿದವರಿಗೆ ಅಡ್ಡಿಯಾಗಿದ್ದು ಬಾಬಾ ಸಾಹೇಬರು ಮತ್ತು ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ. ಆಗಿನಿಂದ ಈ ದ್ವೇಷದ ದಾಳಿ ನಡೆಯುತ್ತಲೇ ಇದೆ.ಬಹಿರಂಗವಾಗಿ ನೆಹರೂ, ಗಾಂಧಿಯವರನ್ನು ಟೀಕಿಸಿದರೂ ಹಿಂದುತ್ವವಾದಿ ಕೋಮು ಶಕ್ತಿಗಳಿಗೆ ನಿಜವಾದ ಆಕ್ರೋಶವಿರುವುದು ಬಾಬಾಸಾಹೇಬರ ಮೇಲೆ. ಅಂತಲೇ ಸಂವಿಧಾನ ರಚನೆಯಾದಾಗ ಆರೆಸ್ಸೆಸ್ ಸರಸಂಘಚಾಲಕ ಮಾಧವ ಸದಾಶಿವ ಗೊಳ್ವಲ್ಕರ್ ಅದರ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಸಕಲರಿಗೂ ಸಮಾನಾವಕಾಶ ನೀಡುವ ಸಂವಿಧಾನ, ಸಂಘದ ಗುರೂಜಿಗೆ ಅಪಥ್ಯವಾಗಿತ್ತು. ಆದರೆ ದಲಿತ ಶೋಷಿತ ಸಮುದಾಯಗಳ ಜನರು ಬಾಬಾಸಾಹೇಬರ ಪರವಾಗಿ, ಸಂವಿಧಾನದ ಪರವಾಗಿ ಗಟ್ಟಿಯಾಗಿ ನಿಂತಿದ್ದರಿಂದ ಈ ಶಕ್ತಿಗಳು ಬಾಲ ಮುದುಡಿ ತೆಪ್ಪಗಿದ್ದವು. ಆದರೆ ತೊಂಬತ್ತರ ದಶಕದ ನಂತರ ಅದರಲ್ಲೂ ಅಯೋಧ್ಯೆಯ ಘಟನೆಯ ನಂತರ ಮತ್ತೆ ಬಾಲ ಬಿಚ್ಚತೊಡಗಿದ ಈ ಫ್ಯಾಶಿಸ್ಟ್ ಸಂಘಟನೆಗಳು ಮೊದಲು ಅಲ್ಪಸಂಖ್ಯಾತರ ಮೇಲೆ ನಂಜು ಕಾರಿದರೂ ಅವರ ಗುರಿ ಬರೀ ಅವರಷ್ಟೇ ಆಗಿರಲಿಲ್ಲ. ದಮನಿತ ದಲಿತ ಸಮುದಾಯ ಅವರ ದಾಳಿಯ ನಿಜವಾದ ಗುರಿಯಾಗಿತ್ತು. ಅಂತಲೇ ಸಂವಿಧಾನ ಮತ್ತು ಮೀಸಲು ವ್ಯವಸ್ಥೆಯ ವಿರುದ್ಧ ಮಸಲತ್ತು ನಡೆಸುತ್ತಲೇ ಬಂದರು.

ಕೇಂದ್ರದಲ್ಲಿ ಬಿಜೆಪಿಗೆ ಮೊದಲ ಬಾರಿ ಅಧಿಕಾರ ಸಿಕ್ಕಾಗ (ವಾಜಪೇಯಿ ಪ್ರಧಾನಿಯಾಗಿದ್ದಾಗ) ಸಂವಿಧಾನದ ಪರಾಮರ್ಶೆಯ ಹೆಸರಿನಲ್ಲಿ ಅದನ್ನು ಬದಲಿಸುವ ಸಂಚು ನಡೆದಿತ್ತು. ಈ ಸಂವಿಧಾನಕ್ಕೆ ಬದಲಾಗಿ ಪರ್ಯಾಯ ಸಂವಿಧಾನವನ್ನು ರಚಿಸಲು ವಿಶ್ವ ಹಿಂದೂ ಪರಿಷತ್ತಿನ ಧರ್ಮ ಸಂಸತ್ತು ತೀರ್ಮಾನಿಸಿತ್ತು. ಆದರೆ ಅದು ಜನರ ತೀವ್ರ ಪ್ರತಿರೋಧದಿಂದಾಗಿ ಸಾಧ್ಯವಾಗಿರಲಿಲ್ಲ.

2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಮತ್ತೆ ಸಂವಿಧಾನದ ವಿರುದ್ಧ ಸಂಚು ನಡೆಯಿತು. ಸಂವಿಧಾನ ಬದಲಿಸಲು ತಾವು ಬಂದಿರುವುದಾಗಿ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಹೆಗಡೆ ಬಹಿರಂಗವಾಗಿ ಹೇಳುತ್ತಲೇ ಬಂದರು. ಈ ಬಗ್ಗೆ ಆಕ್ಷೇಪಗಳು ಬಂದಾಗ ಮೋದಿ ಮೌನವನ್ನು ತಾಳಿದರು. ಆರೆಸ್ಸೆಸ್‌ನ ಈಗಿನ ಸರಸಂಘ ಚಾಲಕ ಮೋಹನ ಭಾಗವತ್ ಮೀಸಲಾತಿಯನ್ನು ರದ್ದುಗೊಳಿಸಬೇಕೆಂದು ಬಹಿರಂಗವಾಗಿ ಹೇಳಿದರು. ಆದರೆ ಇದರ ಪರಿಣಾಮವಾಗಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡಾಗ ಮೌನ ತಾಳಿದರು. ಆದರೂ ತಮ್ಮ ಹಿಂಬಾಲಕರಿಂದ ಆಗಾಗ ಮಾತಾಡಿಸುತ್ತಲೇ ಇದ್ದರು.

ಸಂವಿಧಾನದ ಮೇಲಿನ ದಾಳಿ ಇಲ್ಲಿಗೆ ನಿಲ್ಲಲಿಲ್ಲ. 2018ರಲ್ಲಿ ದೇಶದ ರಾಜಧಾನಿ ದಿಲ್ಲಿಯಲ್ಲಿ ಜಂತರ್ ಮಂತರ್‌ನಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿ ರಣ ಕೇಕೆ ಹಾಕಿದರು. ಸಂಸತ್ ಭವನದ ಸಮೀಪದಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕುತ್ತಾರೆಂದರೆ ಅದು ಸಾಮಾನ್ಯ ಸಂಗತಿಯಲ್ಲ. ಮುಂದುವರಿದು, ಮಹಾರಾಷ್ಟ್ರ ದಲ್ಲಿ ಬಿಜೆಪಿ ಸರಕಾರವಿದ್ದಾಗ ಮುಂಬೈನ ಅಂಬೇಡ್ಕರ್ ಮನೆಯ ಸಮೀಪದಲ್ಲಿದ್ದ, ಬಾಬಾಸಾಹೇಬರು ತಮ್ಮ ವಕೀಲಿ ಹಣದಿಂದ ಆರಂಭಿಸಿದ್ದ ಮುದ್ರಣಾಲಯದ ಕಟ್ಟಡವನ್ನು ಇದೇ ಶಕ್ತಿಗಳು ಧ್ವಂಸಗೊಳಿಸಿದವು. ಈ ಮುದ್ರಣಾಲಯದಲ್ಲಿ ಬಾಬಾಸಾಹೇಬರ ಸಂಪಾದಕತ್ವದ ‘ಪ್ರಬುದ್ಧ ಭಾರತ’ ಪತ್ರಿಕೆ ಮುದ್ರಿಸಲ್ಪಡುತ್ತಿತ್ತು.

ಇದು ಇಲ್ಲಿಗೆ ನಿಲ್ಲಲಿಲ್ಲ. 1-1-2018ರಂದು ಪುಣೆಯ ಬಳಿಯ ಭೀಮಾ ಕೋರೆಗಾಂವ್‌ನಲ್ಲಿ ವಿಜಯ ಸ್ತಂಭಕ್ಕೆ ಗೌರವ ಸಲ್ಲಿಸಲು ಬಂದಿದ್ದ ಸಹಸ್ರಾರು ದಲಿತ ಕಾರ್ಯಕರ್ತರ ಮೇಲೆ ಭಾರೀ ಹಿಂಸಾಚಾರ ನಡೆಯಿತು. ಈ ಪ್ರಕರಣದಲ್ಲಿ ನಿಜವಾದ ಅಪರಾಧಿಗಳಾಗಿದ್ದ ಸಂಘಪರಿವಾರದ ಮಿಲಿಂದ್ ಎಕಬೋಟೆ, ಮೋಹನ್ ಭಿಡೆ ಅವರ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳದೆ ಅಮಾಯಕ ಜನರನ್ನು ಬಂಧಿಸಲಾಯಿತು. ಇದಕ್ಕೆ ಸಂಬಂಧಪಡದ ಕವಿ ವರವರರಾವ್, ಅಂಬೇಡ್ಕರ್ ಅವರ ಮೊಮ್ಮಗಳನ್ನು ವಿವಾಹವಾಗಿದ್ದ ಹೆಸರಾಂತ ಲೇಖಕ, ಚಿಂತಕ ಆನಂದ್ ತೇಲ್ತುಂಬ್ಡೆ, ಸುಧಾ ಭಾರದ್ವಾಜ್, ಗೌತಮ್ ನವ್ಲಾಖ ಅವರು ಸೇರಿದಂತೆ ಹತ್ತೊಂಬತ್ತು ಜನರನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಗಿದೆ. ಈ ಪ್ರಕರಣವನ್ನು ವಾಪಸ್ ಪಡೆಯಲು ಮಹಾರಾಷ್ಟ್ರ ರಾಜ್ಯ ಸರಕಾರ ಮುಂದಾದಾಗ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಇದನ್ನು ರಾಷ್ಟ್ರೀಯ ತನಿಖಾ ಆಯೋಗಕ್ಕೆ ಒಪ್ಪಿಸಿ ತನ್ನ ದ್ವೇಷದ ಬುದ್ಧಿಯನ್ನು ತೋರಿಸಿಕೊಂಡಿದೆ.

ಅಂಬೇಡ್ಕರ್ ಕುಟುಂಬದವರನ್ನು ಮುಗಿಸಲು ಕೇಂದ್ರ ಸರಕಾರ ಯತ್ನಿಸುತ್ತಲೇ ಬಂದಿದೆ.ತಮ್ಮ ಕುಟುಂಬದ ವಿರುದ್ಧ ಭಾರೀ ಸಂಚು ನಡೆದಿದೆ ಎಂದು ಅಂಬೇಡ್ಕರ್ ಅವರ ಮೊಮ್ಮಗ, ಖ್ಯಾತ ನ್ಯಾಯವಾದಿ ಪ್ರಕಾಶ ಅಂಬೇಡ್ಕರ್ ಬಹಿರಂಗವಾಗಿ ಆರೋಪಿಸಿದ್ದರು.ಅವರು ಆರೋಪಿಸಿದ ಬೆನ್ನಲ್ಲೇ ಆನಂದ್ ತೇಲ್ತುಂಬ್ಡೆ ಅವರ ಬಂಧನ ನಡೆಯಿತು.ಅರವತ್ತೈದರ ಹೊಸ್ತಿಲಲ್ಲಿರುವ ಅವರು ತೀವ್ರ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದಾರೆ. ಅವರಿಗೆ ಜಾಮೀನು ನೀಡದಂತೆ ಬಿಜೆಪಿ ಸರಕಾರ ಅಡ್ಡಗಾಲು ಹಾಕಿದೆ.

ಈ ಆನಂದ್ ತೇಲ್ತುಂಬ್ಡೆ ತಮ್ಮ ಪತ್ನಿ ರಮಾಬಾಯಿ (ಅಂಬೇಡ್ಕರ್ ಮೊಮ್ಮಗಳು) ಅವರೊಂದಿಗೆ ವಾಸಿಸುತ್ತಿದ್ದ ಮನೆಯ ಮೇಲೆ ಇದೀಗ ದಾಳಿ ನಡೆದಿದೆ. ಈ ದೇಶಕ್ಕೆ ಸಂವಿಧಾನವನ್ನು ಕೊಟ್ಟ ಭಾರತದ ಭಾಗ್ಯವಿಧಾತನ ಕುಟುಂಬ ಪ್ರಾಣ ಭೀತಿಯಲ್ಲಿದೆ. ಈ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕಾದುದು ಸರಕಾರದ ಕರ್ತವ್ಯ. ಆನಂದ್ ತೇಲ್ತುಂಬ್ಡೆ ಸೇರಿದಂತೆ ಅಂಬೇಡ್ಕರ್ ಕುಟುಂಬದ ಸದಸ್ಯರಿಗೆ ಯಾವುದೇ ಧಕ್ಕೆಯಾದರೆ ಅದಕ್ಕೆ ಸರಕಾರವೇ ಹೊಣೆ ಹೊರಬೇಕಾಗುತ್ತದೆ. ಭಾರೀ ಬೆಲೆಯನ್ನು ತೆರಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News