ಹಳ್ಳಿಗಳಿಗೆ ತೆರಳಬೇಡಿ, ತಾಳ್ಮೆಯಿಂದ ಸರಕಾರದೊಂದಿಗೆ ಸಹಕರಿಸಿ: ಜನತೆಗೆ ಸಿಎಂ ಯಡಿಯೂರಪ್ಪ ಮನವಿ

Update: 2020-07-09 16:07 GMT

ಬೆಂಗಳೂರು, ಜು. 9: `ಎಲ್ಲ ಶಾಸಕರು ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಆದ್ಯತೆ ನೀಡಬೇಕು. ಜಿಲ್ಲೆ, ತಾಲೂಕು ಆಸ್ಪತ್ರೆ, ಕೋವಿಡ್ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳು ಸರಿಯಿದೆಯೇ ಎಂದು ಪರಿಶೀಲಿಸಿ. ಏನಾದರೂ ಲೋಪದೋಷಗಳಿದ್ದರೆ ನನ್ನ ಗಮನಕ್ಕೆ ತನ್ನಿ, ಸರಿಪಡಿಸಲು ಕ್ರಮ ವಹಿಸಲಾಗುವುದು' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಎಲ್ಲ ಶಾಸಕರಿಗೆ ಮನವಿ ಮಾಡಿದ್ದಾರೆ.

ಗುರುವಾರ ಸಂಪುಟ ಸಭೆ ಬಳಿಕ ತುಮಕೂರು ರಸ್ತೆಯಲ್ಲಿ ಬೆಂಗಳೂರು ಅಂತರ್‍ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಿರುವ 10,100 ಹಾಸಿಗೆಗಳ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಕೊರೋನ ಸೋಂಕು ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಹಾಗೂ ಅಗತ್ಯವುಳ್ಳವರಿಗೆ ಸೂಕ್ತ ಚಿಕಿತ್ಸೆಯನ್ನು ಸಕಾಲದಲ್ಲಿ ಒದಗಿಸಿ, ಜೀವರಕ್ಷಣೆ ಮಾಡುವುದು ಹಾಗೂ ಕೋವಿಡ್ ನಿಯಂತ್ರಿಸುವುದು ನಮ್ಮ ಆದ್ಯತೆ ಆಗಬೇಕು ಎಂದರು.

ಹಳ್ಳಿಗಳಿಗೆ ತೆರಳಬೇಡಿ: ಜನರು ಅನಗತ್ಯವಾಗಿ ಬೆಂಗಳೂರಿನಿಂದ ಹಳ್ಳಿಗಳತ್ತ ತೆರಳಬಾರದು. ಹಳ್ಳಿಗಳಲ್ಲಿ ಸೋಂಕು ಹಬ್ಬದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜನತೆ ಯಾವುದೇ ಕಾರಣಕ್ಕೂ ವಿಶ್ವಾಸ ಕಳೆದುಕೊಳ್ಳಬಾರದು. ಸ್ವಲ್ಪ ತಾಳ್ಮೆಯಿಂದ ಸರಕಾರದೊಂದಿಗೆ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ ಎಂದ ಅವರು, ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟ ಕೂಡಲೇ ಆಂಬ್ಯುಲೆನ್ಸ್ ಬರುವುದು ವಿಳಂಬವಾದಲ್ಲಿ, ಅಥವಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ವಿನಾಕಾರಣ ನಿರಾಕರಿಸಿದಲ್ಲಿ ನಮ್ಮ ಗಮನಕ್ಕೆ ತನ್ನಿ. ಕ್ರಮ ಕೈಗೊಳ್ಳುತ್ತೇವೆ ಎಂದರು.

ಒಗ್ಗಟ್ಟು ಅಗತ್ಯ: ನಾವೆಲ್ಲರೂ ಒಟ್ಟಾಗಿ ಕೋವಿಡ್ ಸೋಂಕು ನಿಯಂತ್ರಿಸೋಣ. ಇದು ಒಂದೆರಡು ದಿನದ ಹೋರಾಟವಲ್ಲ. ಸತತ ಪ್ರಯತ್ನ, ನಿಮ್ಮೆಲ್ಲರ ಸಹಕಾರ, ಬೆಂಬಲ, ಹಾಗೂ ಸಾಮೂಹಿಕ ಇಚ್ಛಾಶಕ್ತಿಯೊಂದಿಗೆ ಕೋವಿಡ್ ವಿರುದ್ಧ ಜಯಿಸೋಣ ಎಂದ ಯಡಿಯೂರಪ್ಪ, ಬೆಂಗಳೂರಿನಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರಕಾರ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದರು.

ಬೆಂಗಳೂರು ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. 10,100 ಹಾಸಿಗೆ ಸಾಮರ್ಥ್ಯದ ಈ ಕೋವಿಡ್ ಕೇರ್ ಸೆಂಟರ್‍ನಲ್ಲಿ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಪ್ರತಿ ನೂರು ಮಂದಿಗೆ ಒಬ್ಬ ವೈದ್ಯ, ಇಬ್ಬರು ನರ್ಸ್ ಗಳು, ಒಬ್ಬ ಸಹಾಯಕ, ಒಬ್ಬರು ಸ್ವಚ್ಛತಾ ಸಿಬ್ಬಂದಿ ಮತ್ತು ಇಬ್ಬರು ಬಿಬಿಎಂಪಿ ಮಾರ್ಷಲ್‍ಗಳನ್ನು ನಿಯೋಜಿಸಲಾಗುತ್ತಿದೆ.

ವೈದ್ಯರು, ನರ್ಸ್, ಸಹಾಯಕರು, ಸ್ವಚ್ಛತಾ ಸಿಬ್ಬಂದಿ, ಬಿಬಿಎಂಪಿ ಮಾರ್ಷಲ್ ಮತ್ತು ಪೊಲೀಸರು ಸೇರಿದಂತೆ ಒಟ್ಟು 2,200 ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. ಸೊಂಕಿತರಿಗೆ ಉತ್ತಮ ಊಟೋಪಚಾರದ ವ್ಯವಸ್ಥೆ, ಮನರಂಜನೆಗಾಗಿ ಟಿವಿ, ಕೇರಂ ಬೋರ್ಡ್, ಚೆಸ್ ಮತ್ತಿತರ ಅನುಕೂಲಗಳನ್ನು ಸಹ ಕಲ್ಪಿಸಲಾಗುತ್ತಿದೆ. ಇವರ ಆರೈಕೆ ಹಾಗೂ ಮೇಲ್ವಿಚಾರಣೆಗೆ ನಿಯೋಜಿಸುವ ಸಿಬ್ಬಂದಿಗೆ ಅಗತ್ಯ ಸುರಕ್ಷತಾ ಸಾಮಗ್ರಿ, ತುರ್ತು ಚಿಕಿತ್ಸಾ ಸೌಲಭ್ಯಗಳು, ಐಸಿಯು ಘಟಕ, ಇಸಿಜಿ, ಆಕ್ಸಿಜನ್ ಸಪೋರ್ಟ್, ಪ್ರಥಮ ಚಿಕಿತ್ಸೆ, ಫಾರ್ಮಸಿ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗುವುದು.

ಜೊತೆಗೆ ಸಮೀಪದ ಆಸ್ಪತ್ರೆಯೊಂದಿಗೆ ಸಂಯೋಜನೆ ಹಾಗೂ ದಿನದ 24 ಗಂಟೆಯೂ ಇವುಗಳನ್ನು ಮೇಲ್ವಿಚಾರಣೆ ನಡೆಸುವ ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗುತ್ತಿದೆ. ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ಸೋಂಕಿತರ ಬೆಡ್ ಶೀಟ್, ಬ್ಲಾಂಕೆಟ್ ತೊಳೆಯಲು ಲಾಂಡ್ರಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಈ ಕೇಂದ್ರದಲ್ಲಿ ಯಾವುದೇ ರೋಗ ಲಕ್ಷಣ ಇಲ್ಲದ ಹಾಗೂ ಅತಿ ಕಡಿಮೆ ಲಕ್ಷಣ ಹೊಂದಿರುವ ಸೋಂಕಿತರ ಆರೈಕೆ ಮಾಡಲಾಗುವುದು ಎಂದರು.

ನಗರದ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಅಗತ್ಯವಿರುವ ವ್ಯಕ್ತಿಗಳಿಗೆ ಹಾಸಿಗೆ ಒದಗಿಸಲು ಅನುವಾಗುವಂತೆ ಈ ವ್ಯವಸ್ಥೆ ರೂಪಿಸಲಾಗಿದೆ. ಅನ್‍ಲಾಕ್ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯ ಸರಕಾರ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಂಡಿದೆ. ಲೋಪದೋಷಗಳು ಗಮನಕ್ಕೆ ಬಂದ ಕೂಡಲೇ ಅವುಗಳನ್ನು ಸರಿಪಡಿಸುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News