ದಿಲ್ಲಿ ಹಿಂಸಾಚಾರ: ಸಂತ್ರಸ್ತರೇ ಕಟಕಟೆಯಲ್ಲಿ!

Update: 2020-07-10 05:18 GMT

ಫೆಬ್ರವರಿಯಲ್ಲಿ ನಡೆದ ದಿಲ್ಲಿ ಹಿಂಸಾಚಾರದ ಹಿಂದಿರುವವರು ಯಾರು? ಎನ್ನುವುದನ್ನು ತನಿಖೆ ನಡೆಸುವುದಕ್ಕೆ ವಿಶೇಷ ‘ಪತ್ತೇದಾರಿಕೆ’ಯ ಅಗತ್ಯವೇನೂ ಇಲ್ಲ. ಇದನ್ನು ‘ಗಲಭೆ’ ಎಂದು ಚಿತ್ರಿಸುವುದರ ಹಿಂದೆಯೇ ಕೆಲವು ಹುನ್ನಾರಗಳಿವೆ. ಯಾಕೆಂದರೆ ಇಲ್ಲಿ ನಡೆದಿರುವುದು ಗಲಭೆಯಲ್ಲ, ಇದು ದಿಲ್ಲಿಯ ಅಮಾಯಕ ಮುಸ್ಲಿಮರ ಮೇಲೆ ನಡೆದ ಏಕಮುಖ ದಾಳಿ. ಈ ಗಲಭೆ ನಡೆಸುವ ಮುನ್ನ, ಸಾರ್ವಜನಿಕವಾಗಿ ಗಲಭೆಗೆ ಕರೆಕೊಟ್ಟವರು ಯಾರು? ಉದ್ವಿಗ್ನಕಾರಿಯಾದ ಭಾಷಣವನ್ನು ಮಾಡಿದ ಬಿಜೆಪಿ ಮುಖಂಡನ ಹೆಸರೇನು? ಈ ಗಲಭೆ ಯಾರಿಗೆ ಅಗತ್ಯವಿತ್ತು? ಅವರ ಉದ್ದೇಶವೇನಿತ್ತು? ಇವೆಲ್ಲ ದಿಲ್ಲಿಯ ಪೊಲೀಸರಿಗೆ ತಿಳಿಯದೇ ಇರುವುದೇನೂ ಅಲ್ಲ. ದಿಲ್ಲಿ ಪೊಲೀಸರ ಸಂಪೂರ್ಣ ನಿಯಂತ್ರಣ ಕೇಂದ್ರ ಸರಕಾರದ ಕೈಯಲ್ಲಿದೆ. ಗಲಭೆ ನಡೆದ ಬಳಿಕ ಹಿಂಸಾಚಾರ ಪೀಡಿತ ದಿಲ್ಲಿಗೆ ಗೃಹ ಸಚಿವರು ಒಮ್ಮೆಯೂ ಭೇಟಿ ನೀಡದೆ ಇರುವುದಕ್ಕೆ ಕಾರಣಗಳನ್ನು ಹುಡುಕುವುದೂ ಕಷ್ಟವಿಲ್ಲ. ಯಾಕೆಂದರೆ, ಸಂತ್ರಸ್ತ ದಿಲ್ಲಿಗೆ ಮುಖಕೊಟ್ಟು ನೋಡುವ ನೈತಿಕತೆ ಈ ದೇಶದ ಗೃಹ ಸಚಿವರ ಬಳಿ ಇರಲಿಲ್ಲ. ಕೇಂದ್ರ ಸರಕಾರದ ಕೆಲವು ಶಕ್ತಿಗಳು ಪೊಲೀಸರ ಮೂಲಕವೇ ಗಲಭೆಯನ್ನು ಪ್ರಾಯೋಜಿಸಿತು ಎಂಬ ಆರೋಪಗಳಿರುವಾಗ, ಅದೇ ಪೊಲೀಸರು ಇದೀಗ ಸಂತ್ರಸ್ತರಿಗೆ ತನಿಖೆಯ ಮೂಲಕ ನ್ಯಾಯ ನೀಡುತ್ತಾರೆ ಎಂದು ನಿರೀಕ್ಷಿಸುವುದು ಹಾಸ್ಯಾಸ್ಪದವಾಗುತ್ತದೆ.

ಸಿಎಎ ಕಾಯ್ದೆಯ ವಿರುದ್ಧ ದಿಲ್ಲಿಯಲ್ಲಿ ಮೊಳಗಿದ ಪ್ರತಿಭಟನೆಗಳನ್ನು ದಮನಿಸುವುದಕ್ಕಾಗಿಯೇ ದಿಲ್ಲಿ ಹಿಂಸಾಚಾರವನ್ನು ಪ್ರಾಯೋಜಿಸಲಾಯಿತು. ಒಂದೆಡೆ ಸಿಎಎ ವಿರುದ್ಧ ಧರಣಿ ಕೂತ ಪ್ರತಿಭಟನಾಕಾರರಿಗೆ ಈ ಮೂಲಕ ಎಚ್ಚರಿಕೆಯನ್ನು ನೀಡುವುದು. ಅಂದರೆ, ಅವರನ್ನು ಬೆದರಿಸಿ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾಡುವುದು. ಇದೇ ಸಂದರ್ಭದಲ್ಲಿ, ಪ್ರತಿಭಟನಾಕಾರರ ತಲೆಗೆ ಈ ಹಿಂಸಾಚಾರವನ್ನು ಕಟ್ಟಿ ಅವರನ್ನು ಜೈಲಿಗೆ ತಳ್ಳುವುದು. ದಿಲ್ಲಿ ಹಿಂಸಾಚಾರದಲ್ಲಿ ಅಮಾಯಕ ಮುಸ್ಲಿಮರ ಮೇಲೆ ಬರ್ಬರ ಹಲ್ಲೆಗಳು ನಡೆದವು. 40ಕ್ಕೂ ಅಧಿಕ ಮಂದಿ ಈ ಹಿಂಸಾಚಾರದಲ್ಲಿ ಸತ್ತರು. ಇದೀಗ ಸಂತ್ರಸ್ತರನ್ನೇ ಹಿಡಿದು ಬಂಧಿಸುವ ಕೆಲಸ ನಡೆಯುತ್ತಿದೆ. ತನಿಖೆಯ ಹೆಸರಿನಲ್ಲಿ ಮತ್ತೊಮ್ಮೆ ಅವರು ದೌರ್ಜನ್ಯಕ್ಕೀಡಾಗುತ್ತಿದ್ದಾರೆ. ಈಗಾಗಲೇ ನೂರಾರು ಮುಸ್ಲಿಮ್ ತರುಣರನ್ನು ಗುರುತಿಸಿ ಅವರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಷ್ಟೇ ಅಲ್ಲ, ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಪಾಲುಗೊಂಡ ವಿದ್ಯಾರ್ಥಿಗಳು, ವೈದ್ಯರು, ಸಾಮಾಜಿಕ ಹೋರಾಟಗಾರರನ್ನೂ ಈ ಹಿಂಸಾಚಾರಕ್ಕೆ ಸಂಬಂಧಿಸಿ ಬಂಧಿಸಲಾಗುತ್ತಿದೆ.

ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದವರು ಸಮಾಜದಲ್ಲಿ ಗಣ್ಯರಾಗಿ ಓಡಾಡುತ್ತಿದ್ದರೆ, ತನಿಖೆಯ ಹೆಸರಿನಲ್ಲಿ ಮತ್ತೆ ಸಂತ್ರಸ್ತರೇ ಆರೋಪಿಗಳಾಗಿ ಸಮಾಜದ ಮುಂದೆ ನಿಲ್ಲುತ್ತಿದ್ದಾರೆ. ತನಿಖೆ ನಡೆಸುತ್ತಿರುವ ಪೊಲೀಸರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಉರುಳಿಸುವ ಯೋಜನೆಯಲ್ಲಿದ್ದಾರೆ. ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ ಹೋರಾಟಗಾರರು, ವಿದ್ಯಾರ್ಥಿಗಳನ್ನು ಗುರುತಿಸಿ ಅವರ ತಲೆಯ ಮೇಲೆ ಹಿಂಸಾಚಾರದ ಆರೋಪವನ್ನು ಕಟ್ಟಿ ಸೇಡು ತೀರಿಸಿಕೊಳ್ಳುವುದು ಪೊಲೀಸರ ಮೊದಲ ಉದ್ದೇಶ. ಈ ಮೂಲಕ ಸರಕಾರ ಸಿಎಎ ಹೋರಾಟವನ್ನು ಸಂಪೂರ್ಣ ದಮನಿಸಲು ಹೊರಟಿದೆ. ಇದೇ ಸಂದರ್ಭದಲ್ಲಿ, ನಿಜವಾದ ಆರೋಪಿಗಳನ್ನು ರಕ್ಷಿಸುವ ಪ್ರಯತ್ನವೂ ನಡೆಯುತ್ತಿದೆ. ಮೇ ತಿಂಗಳಲ್ಲಿ ಹೊಸದಿಲ್ಲಿಯ ನ್ಯಾಯಾಲಯವೊಂದು ತನಿಖೆ ತಪ್ಪು ದಾರಿಯಲ್ಲಿ ಸಾಗುತ್ತಿರುವುದನ್ನು ಗುರುತಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು. ಗಲಭೆಗೆ ಸಂಬಂಧಿಸಿ ಬಂಧಿತರಾದವರಲ್ಲಿ ಹೆಚ್ಚಿನವರು ಸಿಎಎ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಎನ್ನುವುದನ್ನು ಉಲ್ಲೇಖಿಸಿರುವ ನ್ಯಾಯಾಲಯ, ‘‘ತನಿಖೆ ಒಂದು ದಿಕ್ಕನ್ನಷ್ಟೇ ಗುರಿಯಾಗಿಸಿಕೊಂಡಿದೆ’’ ಎಂದು ಎಚ್ಚರಿಸಿತ್ತು.

ದಿಲ್ಲಿ ಹಿಂಸಾಚಾರದ ಸಂದರ್ಭ ಫೆಬ್ರವರಿ 26ರಂದು ದಿಲ್ಬರ್ ನೇಗಿ ಎಂಬವರ ಹತ್ಯೆಗೆ ಸಂಬಂಧಿಸಿ ಪೊಲೀಸರು 12 ತಪ್ಪೊಪ್ಪಿಗೆ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ವಿಪರ್ಯಾಸವೆಂದರೆ ಇದರಲ್ಲಿ 9 ಹೇಳಿಕೆಗಳು ಝೆರಾಕ್ಸ್ ಪ್ರತಿಗಳಂತಿವೆ. ಪೊಲೀಸರು ಬರೆದುಕೊಟ್ಟಿರುವುದಕ್ಕೆ ಆರೋಪಿಗಳಿಂದ ಕೇವಲ ಸಹಿಯನ್ನಷ್ಟೇ ಹಾಕಿಸಿಕೊಳ್ಳಲಾಗಿದೆ ಮತ್ತು ಈ ತಪ್ಪೊಪ್ಪಿಗೆ ಹೇಳಿಕೆಗಳು ಕೂಡ ಪೂರ್ವಾಗ್ರಹ ಪೀಡಿತವಾಗಿವೆ ಮತ್ತು ಇಡೀ ಗಲಭೆಯನ್ನು ನಿರ್ದಿಷ್ಟ ಸಮುದಾಯದ ಜನರ ಸಂತ್ರಸ್ತರ ತಲೆಗೆ ಕಟ್ಟುವ ಪೊಲೀಸರ ಪ್ರಯತ್ನ ಎದ್ದು ಕಾಣುತ್ತಿದೆ. ಸಿಎಎ ಕಾಯ್ದೆಯನ್ನು ಜಾರಿಗೆ ತಂದುದಕ್ಕಾಗಿ ಸೇಡು ತೀರಿಸಲು ದಿಲ್ಲಿ ಹಿಂಸಾಚಾರವನ್ನು ಪ್ರಾಯೋಜಿಸಲಾಗಿದೆ ಎನ್ನುವ ಕತೆಯೊಂದನ್ನು ತಮ್ಮ ತನಿಖೆಯ ಮೂಲಕ ಪೊಲೀಸರು ಸೃಷ್ಟಿಸಿದ್ದಾರೆ. ಗಲಭೆಯಲ್ಲಿ ಮೃತಪಟ್ಟವರು ಯಾವ ಧರ್ಮಕ್ಕೇ ಸೇರಿರಲಿ, ಅವರಿಗೂ ಗಲಭೆಗೂ ಯಾವ ಸಂಬಂಧವೂ ಇಲ್ಲ. ದಿಲ್ಲಿಯ ಹಿಂಸಾಚಾರದಲ್ಲಿ ಅಮಾಯಕರನ್ನು ಅತ್ಯಂತ ಬರ್ಬರವಾಗಿ ಕೊಂದು ಹಾಕಲಾಗಿದೆ. ಹಲವು ಮೃತದೇಹಗಳು ನಿಗೂಢವಾಗಿ ಚರಂಡಿಗಳಲ್ಲಿ ಪತ್ತೆಯಾದವು. ಪತ್ತೆಯಾದ ಮೃತದೇಹಗಳಲ್ಲಿ ಬಹುತೇಕ ಮುಸ್ಲಿಮ್ ಸಮುದಾಯಕ್ಕೆ ಸೇರಿದವುಗಳು. ಹಾಗೆಯೇ ಹಿಂದೂಗಳ ಮೃತದೇಹಗಳೂ ಪತ್ತೆಯಾಗಿವೆ.

ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಬೇಕಾದರೆ ಮೊದಲು ಬಹುಸಂಖ್ಯಾತನೊಬ್ಬ ಬಲಿಯಾಗುವುದು ದುಷ್ಕರ್ಮಿಗಳಿಗೆ ಅತ್ಯಗತ್ಯ ಮತ್ತು ಆ ಮೃತದೇಹಗಳನ್ನು ಮುಂದಿಟ್ಟುಕೊಂಡು ಅಮಾಯಕರ ಮನೆಮಠಗಳನ್ನು ಸುಡಲಾಗುತ್ತದೆ. ಈ ಹಿಂದೆ ಕೋಮುಗಲಭೆಗಳು ಸೃಷ್ಟಿಯಾಗಿರುವುದು ಇದೇ ಮಾದರಿಯಲ್ಲಿ. ಫೆಬ್ರವರಿಯಲ್ಲಿ ನಡೆದ ಹಿಂಸಾಚಾರ ಆರಂಭವೂ ಇದೇ ದಾಟಿಯಲ್ಲಾಯಿತು. ಗಲಭೆಯಲ್ಲಿ ಯಾರು ಬೇಕಾದರೂ ಸಾಯಲಿ, ದುಷ್ಕರ್ಮಿಗಳ ಉದ್ದೇಶ ಮಾತ್ರ ಈಡೇರಿ ಬಿಡುತ್ತದೆ. ಆದುದರಿಂದಲೇ, ದಿಲ್ಲಿಯಲ್ಲಿ ಗಲಭೆ ನಡೆಸುತ್ತೇವೆ ಎಂದು ಬೆದರಿಕೆ ಹಾಕಿದ ನಾಯಕರನ್ನು ಬಂಧಿಸಿ ವಿಚಾರಣೆ ನಡೆಸದೇ ಇದ್ದರೆ ದಿಲ್ಲಿಯ ತನಿಖೆಯೂ ಸಂತ್ರಸ್ತರ ಪಾಲಿಗೆ ಹಿಂಸಾಚಾರದ ಮುಂದುವರಿದ ಭಾಗವೇ ಆಗಿರುತ್ತದೆ.

ಸದ್ಯ ಇಡೀ ದೇಶದ ಗಮನ ಕೊರೋನ ಕಡೆಗೆ ಕೇಂದ್ರೀಕೃತವಾಗಿರುವ ಸಂದರ್ಭದಲ್ಲಿ ಪ್ರಭುತ್ವ ಜನ ವಿರೋಧಿ ನಿಲುವುಗಳನ್ನು ಹಂತ ಹಂತವಾಗಿ ಜನರ ಮೇಲೆ ಹೇರುವುದಕ್ಕೆ ಮುಂದಾಗಿದೆ. ಕೊರೋನ ಮತ್ತು ಲಾಕ್‌ಡೌನ್ ಸಂದರ್ಭವನ್ನು ಸರಕಾರ ದುರುಪಯೋಗಗೊಳಿಸುತ್ತಿದೆ ಎನ್ನುವುದು ಸ್ಪಷ್ಟ. ಕೊರೋನವನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲಗೊಂಡಿರುವ ಸರಕಾರ ಒಂದೆಡೆ ತಳಸ್ತರದ ಜನರನ್ನು ಹಸಿವಿನಿಂದ ಸಾಯಿಸುತ್ತಿದ್ದರೆ, ಇನ್ನೊಂದೆಡೆ ಕಾನೂನುಗಳನ್ನು ದುರುಪಯೋಗಗೊಳಿಸಿ ಅಳಿದುಳಿದ ಪ್ರತಿಭಟನೆಯ ಧ್ವನಿಗಳನ್ನು ದಮನಿಸಲು ಹೊರಟಿದೆ. ದಿಲ್ಲಿಯಲ್ಲಿ ನಡೆಯುತ್ತಿರುವ ಈ ಅನ್ಯಾಯವನ್ನು ದೇಶ ಒಕ್ಕೊರಲಿನಲ್ಲಿ ಪ್ರತಿಭಟಿಸದೇ ಇದ್ದರೆ, ಕೊರೋನದ ಹೆಸರಲ್ಲೇ ಈ ದೇಶದ ಪ್ರಜಾಸತ್ತೆ ತನ್ನ ಉಸಿರನ್ನು ನಿಲ್ಲಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News