ಗಡಿಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರ ಬದ್ಧ: ರಾಜನಾಥ್ ಸಿಂಗ್

Update: 2020-07-09 17:42 GMT

ಗಡಿಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರ ಬದ್ಧ: ರಾಜನಾಥ್ ಸಿಂಗ್

 ಜಮ್ಮು-ಕಾಶ್ಮೀರದಲ್ಲಿ 6 ಸೇತುವೆಗಳ ಉದ್ಘಾಟನೆ

ಹೊಸದಿಲ್ಲಿ, ಜು.9: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ 6 ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ವಲಯದಲ್ಲಿರುವ ದುರ್ಗಮ ಪ್ರದೇಶಗಳ ಅಭಿವೃದ್ಧಿ ಸರಕಾರದ ಪ್ರಮುಖ ಆದ್ಯತೆಯಾಗಿದೆ ಎಂದವರು ಈ ಸಂದರ್ಭ ಹೇಳಿದರು.

 ಗಡಿಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದ್ದು ಇದಕ್ಕೆ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸಲಾಗುವುದು. ಜಮ್ಮು-ಕಾಶ್ಮೀರದ ಅಭಿವೃದ್ಧಿ ಕಾರ್ಯದ ವಿಷಯದಲ್ಲಿ ಸರಕಾರ ಹೆಚ್ಚಿನ ಆಸಕ್ತಿ ಹೊಂದಿದೆ. ಜನರ ಹಾಗೂ ಸಶಸ್ತ್ರ ಪಡೆಗಳ ಅಗತ್ಯವನ್ನು ಗಮನಿಸಿ ಇನ್ನೂ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಅಂತಿಮಗೊಳಿಸಲಾಗಿದ್ದು ಈ ಕುರಿತ ವಿವರವನ್ನು ಮುಂದಿನ ದಿನದಲ್ಲಿ ಘೋಷಿಸಲಾಗುವುದು. ಜಮ್ಮು ವಲಯದಲ್ಲಿ ಸುಮಾರು 1,000 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಕಾರ್ಯ ಈಗ ಪ್ರಗತಿಯಲ್ಲಿದೆ ಎಂದು ರಾಜನಾಥ್ ಹೇಳಿದರು.

 ದಾಖಲೆ ಸಮಯದಲ್ಲಿ ಸೇತುವೆ ನಿರ್ಮಿಸಿರುವ ಬಾರ್ಡರ್ ರೋಡ್ ಆರ್ಗನೈಝೇಷನ್ (ಬಿಆರ್ಒ)ಗೆ ಅಭಿನಂದನೆ ಸಲ್ಲಿಸಿದ ಸಿಂಗ್, ರಸ್ತೆ ಮತ್ತು ಸೇತುವೆಗಳು ಯಾವುದೇ ದೇಶದ ಜೀವನಾಡಿಗಳಾಗಿದ್ದು ಆಯಾ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಕೊರೋನ ಪಿಡುಗಿನ ಹೊರತಾಗಿಯೂ, ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸಿನ ಕೊರತೆಯಾಗದಂತೆ ಸರಕಾರ ಎಚ್ಚರ ವಹಿಸಿದೆ. 2008ರಿಂದ 2016ರ ಅವಧಿಯಲ್ಲಿ ಬಿಆರ್ ಒಗೆ ವಾರ್ಷಿಕ ಬಜೆಟ್ ನಲ್ಲಿ 3,300 ಕೋಟಿ ರೂ.ನಿಂದ 4,600 ಕೋಟಿ ರೂ.ವರೆಗೆ ಅನುದಾನ ನೀಡಲಾಗುತ್ತಿತ್ತು. 2019-20ರಲ್ಲಿ ಇದನ್ನು 8,050 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

 ಅಖ್ನೂರ್ - ಪಲ್ಲನವಾಲಾ ರಸ್ತೆಯ ಅಖ್ನೂರ್ನಲ್ಲಿ 4 ಸೇತುವೆ, ಕಥುವಾ ಜಿಲ್ಲೆಯ ತರ್ನಾ ನಲಾಹ್ ರಸ್ತೆಯಲ್ಲಿ 2 ಸೇತುವೆಗಳನ್ನು ಬಿಆರ್ಒ ನಿರ್ಮಿಸಿದೆ. ಸೇತುವೆಗಳ ಉದ್ಘಾಟನೆ ಸಂದರ್ಭ ಸೇನಾ ಸಿಬಂದಿ ಮುಖ್ಯಸ್ಥ ಜನರಲ್ ಎಂಎಂ ನರವಾಣೆ, ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್, ಬಿಆರ್ಒ ಮಹಾನಿರ್ದೇಶಕ ಲೆಜ ಹರ್ಪಾಲ್ ಸಿಂಗ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News