ಏಶ್ಯದ ಅತ್ಯಂತ ದೊಡ್ಡ ಸೌರ ಸ್ಥಾವರ ಉದ್ಘಾಟಿಸಿದ ಪ್ರಧಾನಿ ಮೋದಿ

Update: 2020-07-10 18:35 GMT

ಭೋಪಾಲ್: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ 750 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ರೇವಾ ಜಿಲ್ಲೆಯಲ್ಲಿ ಉದ್ಘಾಟಿಸಿದರು.

ರೇವಾ ಅಲ್ಟ್ರಾ ಮೆಗಾ ಸೋಲಾರ್ ಪವರ್ ಪ್ರಾಜೆಕ್ಟ್ ಏಷ್ಯಾದ ಅತಿದೊಡ್ಡ ಸೌರವಿದ್ಯುತ್ ಘಟಕವಾಗಿದ್ದು, ಪ್ರತಿ ವರ್ಷ 15 ಲಕ್ಷ ಟನ್ ಇಂಗಾಲದ ಡೈಆಕ್ಸೈಡ್ ಉಗುಳುವಿಕೆಯನ್ನು ಇದು ಕಡಿಮೆ ಮಾಡಲಿದೆ.

“ಸೌರವಿದ್ಯುತ್ ಇಂದಿನ ವಿದ್ಯುತ್ ಅಗತ್ಯತೆಯನ್ನು ಮಾತ್ರವಲ್ಲದೇ 21ನೇ ಶತಮಾನದ ವಿದ್ಯುತ್ ಅಗತ್ಯತೆಯನ್ನು ಪೂರೈಸುವ ಪ್ರಮುಖ ಸಾಧನ” ಎಂದು ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಘಟಕವನ್ನು ಉದ್ಘಾಟಿಸಿ ಅಭಿಪ್ರಾಯಪಟ್ಟರು.

“ಸೌರವಿದ್ಯುತ್ ಖಚಿತ, ಶುದ್ಧ ಹಾಗೂ ಸುರಕ್ಷಿತ” ಎಂದು ಬಣ್ಣಿಸಿದ ಮೋದಿ, ಗರಿಷ್ಠ ಸೌರ ವಿದ್ಯುತ್ ಉತ್ಪಾದಿಸುವ ದೇಶಗಳ ಪೈಕಿ ಭಾರತ ಐದನೇ ಸ್ಥಾನದಲ್ಲಿದೆ ಎಂದು ವಿವರಿಸಿದರು.

ಘಟಕವನ್ನು ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದರು. “ಇಂದು ರೇವಾ ನಿಜಕ್ಕೂ ಇತಿಹಾಸ ಬರೆದಿದೆ. ರೇವಾವನ್ನು ತಾಯಿ ನರ್ಮದೆ ಮತ್ತು ಬಿಳಿ ಹುಲಿಯ ಕಾರಣದಿಂದ ಗುರುತಿಸಲಾಗುತ್ತದೆ. ಇದೀಗ ಏಷ್ಯಾದ ಅತಿದೊಡ್ಡ ಸೌರಶಕ್ತಿ ಇದಕ್ಕೆ ಸೇರ್ಪಡೆಯಾಗಿದೆ. ಈ ಘಟಕದೊಂದಿಗೆ ರೇವಾ ಜಿಲ್ಲೆ ಇಡೀ ದಶಕದ ಅತಿದೊಡ್ಡ ವಿದ್ಯುತ್ ಕೇಂದ್ರವಾಗಲಿದೆ” ಎಂದು ವಿವರಿಸಿದರು.

ಸರ್ಕಾರಿ ಸ್ವಾಮ್ಯದ ಭಾರತೀಯ ಸೌರ ವಿದ್ಯುತ್ ನಿಗಮ ಮತ್ತು ಮಧ್ಯಪ್ರದೇಶ ಊರ್ಜಾ ವಿಕಾಸ ನಿಗಮ ನಿಯಮಿತದ ಜಂಟಿ ಸಹಭಾಗಿತ್ವದ ಯೋಜನೆ ಇದಾಗಿದೆ. ಇದು ತಲಾ 250 ಮೆಗಾವ್ಯಾಟ್ ಉತ್ಪಾದಿಸುವ ಮೂರು ಘಟಕಗಳನ್ನು ಹೊಂದಿದೆ.

ರಾಜ್ಯದ ಹೊರಗಿನ ಸಾಂಸ್ಥಿಕ ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡುವ ಮೊಟ್ಟಮೊದಲ ಸೌರವಿದ್ಯುತ್ ಘಟಕ ಇದಾಗಿದೆ. ದೆಹಲಿ ಮೆಟ್ರೊ ರೈಲು ನಿಗಮ ಈ ಯೋಜನೆಯಿಂದ ಶೇಕಡ 24ರಷ್ಟು ವಿದ್ಯುತ್ ಪಡೆಯಲಿದೆ. ಉಳಿದ ಶೇಕಡ 25ರಷ್ಟು ವಿದ್ಯುತ್ತನ್ನು ಮಧ್ಯಪ್ರದೇಶ ಡಿಸ್ಕಾಂಗಳಿಗೆ ಪೂರೈಸಲಿದೆ.

ಶಾಜಾಪುರ, ನೀಮುಚ್ ಮತ್ತು ಛಾತರ್ಪುರದಲ್ಲೂ ಸೌರ ವಿದ್ಯುತ್ ಘಟಕಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಮೋದಿ ವಿವರಿಸಿದರು.

ರಾಜ್ಯದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ನವೀಕರಿಸಬಹುದಾದ ವಿದ್ಯುತ್ ಖಾತೆ ಸಚಿವ ಆರ್.ಕೆ.ಸಿಂಗ್, ಇಂಧನ ಖಾತೆ ಸಚಿವ ಧರ್ಮೇಂಧ್ರ ಪ್ರಧಾನ್ ವರ್ಚುವಲ್ ಉದ್ಘಾಟನೆ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News