ಕೋವಿಡ್ ಕೇರ್ ಸೆಂಟರ್ ನಲ್ಲಿ 300 ಮಂದಿ ವೈದ್ಯರ ಸಹಿತ 2 ಸಾವಿರ ಸಿಬ್ಬಂದಿ: ಸಚಿವ ಶ್ರೀರಾಮುಲು

Update: 2020-07-10 11:02 GMT

ಬೆಂಗಳೂರು, ಜು. 10: ಬೆಂಗಳೂರಿನ ಅಂತರ್ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆರಂಭಿಸಲಾಗುತ್ತಿರುವ 10,100 ಹಾಸಿಗೆಗಳ ವಿಶ್ವದ ಅತಿದೊಡ್ಡ ಕೋವಿಡ್-19 ಕೇರ್ ಸೆಂಟರ್ ನಲ್ಲಿ 300 ಮಂದಿ ವೈದ್ಯರು ಸೇರಿದಂತೆ ಒಟ್ಟು 2,100 ಮಂದಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಶುಕ್ರವಾರ ಟ್ವೀಟ್ ಮಾಡಿರುವ ಅವರು, 300 ಮಂದಿ ವೈದ್ಯರು, 500 ಮಂದಿ ನರ್ಸ್ ಗಳು, 300 ಮಂದಿ ಸಹಾಯಕರು, 400 ಮಂದಿ ಶುಚ್ಚಿತ್ವ ಸಿಬ್ಬಂದಿ. 300 ಮಂದಿ ಮಾರ್ಷಲ್‍ಗಳು ಹಾಗೂ 300 ಮಂದಿ ಆರಕ್ಷಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಈಗಾಗಲೇ 6,100 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೆ ಇನ್ನೂ 4 ಸಾವಿರ ಹಾಸಿಗೆಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದ್ದಾರೆ.

ಸೋಂಕಿತರಿಗೆ ಬೆಳಗ್ಗೆ 8ಕ್ಕೆ ಇಡ್ಲಿ, ಪೊಂಗಲ್, ದೊಸೆ, ಚೌಚೌಬಾತ್. 10ಕ್ಕೆ ಹಣ್ಣು ಮತ್ತು ಸೂಪ್‍ಗಳು, ಮಧ್ಯಾಹ್ನ 12ಕ್ಕೆ ರೊಟ್ಟಿ, ಚಪಾತಿ, ಸಬ್ಜಿ, ಪಲ್ಯ, ಅನ್ನ, ಸಾಂಬಾರ್, ಮೊಸರು. ಸಂಜೆ 5ಕ್ಕೆ ಲಘು ಉಪಹಾರ ಬಾಳೆಹಣ್ಣು, ಬಿಸ್ಕತ್, ಡ್ರೈಪ್ರೂಟ್ಸ್ ನೀಡಲಾಗುವುದು. ರಾತ್ರಿ 7ಕ್ಕೆ ರೊಟ್ಟಿ/ಚಪಾತಿ, ಸಬ್ಜಿ/ಪಲ್ಯ, ಅನ್ನ/ಸಾಂಬಾರ್, ಮೊಸರು ಹಾಗೂ ಮಲಗುವ ಮುಂಚೆ ಅರಿಶಿಣ ಬೆರೆಸಿದ ಹಾಲು ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.

ಯೋಗ, ಪ್ರೇರಣ ಭಾಷಣ, ಕೇರಂ, ಚೆಸ್, ಗ್ರಂಥಾಲಯ, ದಿನಪತ್ರಿಕೆ, ಮಾಸಪತ್ರಿಕೆ, ಇಂಟರ್ ನೆಟ್ ಸೌಲಭ್ಯ, ಆರೋಗ್ಯ ತಜ್ಞರಿಂದ ವಿಶೇಷ ಭಾಷಣ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಮತ್ತು ಸೋಂಕಿತರು ಆತಂಕಗೊಳ್ಳುವ ಅಗತ್ಯವಿಲ್ಲ. ಕೊರೋನ ಸೋಂಕು ನಿಯಂತ್ರಣಕ್ಕೆ ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಶ್ರೀರಾಮುಲು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News