ಎಪ್ರಿಲ್‍ ನಿಂದಲೇ ಕೊರೋನ ಸಾಮುದಾಯಿಕವಾಗಿ ಹರಡಲು ಆರಂಭಿಸಿತ್ತೆನ್ನುವ ವರದಿ ತೆಗೆದು ಹಾಕಿದ ಆರೋಗ್ಯ ಸಚಿವಾಲಯ

Update: 2020-07-10 11:09 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸಮುದಾಯಕ್ಕೆ ಹಬ್ಬಿಲ್ಲ ಎಂದು ಗುರುವಾರ  ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮತ್ತೊಮ್ಮೆ ಒತ್ತಿ ಹೇಳಿದ್ದರೂ ಭಾರತದಲ್ಲಿ ಎಪ್ರಿಲ್ ತಿಂಗಳಿನಿಂದಲೇ ಸೀಮಿತ ಮಟ್ಟದಲ್ಲಿ ಕೊರೋನ ಸಮುದಾಯಕ್ಕೆ ಹರಡಲು ಆರಂಭಿಸಿತ್ತು ಎಂದು ಹೇಳುವ ಡಾಕ್ಯುಮೆಂಟ್ ಒಂದನ್ನು ಆರೋಗ್ಯ ಸಚಿವಾಲಯ ತನ್ನ ವೆಬ್‍ಸೈಟ್‍ನಿಂದ ತೆಗೆದು ಹಾಕಿದೆ ಎಂದು theprint.in ವರದಿ ಮಾಡಿದೆ.

ಈ ಡಾಕ್ಯುಮೆಂಟ್ ಅನ್ನು ವೆಬ್‍ ಸೈಟ್‍ ನಲ್ಲಿ ಜುಲೈ 4ರಂದು ಅಪ್‍ ಲೋಡ್ ಮಾಡಲಾಗಿತ್ತಲ್ಲದೆ, ಸಚಿವಾಲಯ ಅದರ ಲಿಂಕ್ ಒಂದನ್ನು ಟ್ವಿಟ್ಟರ್‍ ನಲ್ಲೂ ಜುಲೈ 5ರಂದು ಪೋಸ್ಟ್ ಮಾಡಿದ್ದರೂ ಆ ಲಿಂಕ್ ಈಗ ಕೆಲಸ ಮಾಡುತ್ತಿಲ್ಲ.

``ಗೈಡೆನ್ಸ್ ಫಾರ್ ಜನರಲ್ ಮೆಡಿಕಲ್ ಆ್ಯಂಡ್ ಸ್ಪೆಷಲೈಸ್ಡ್ ಮೆಂಟಲ್ ಹೆಲ್ತ್ ಕೇರ್ ಸೆಟ್ಟಿಂಗ್ಸ್' ಇದರ ಹೊಸ ಡಾಕ್ಯುಮೆಂಟ್ ಅನ್ನು ಗುರುವಾರ ರಾತ್ರಿ ಅಪ್‍ಲೋಡ್ ಮಾಡಲಾಗಿದ್ದು, ಸಮುದಾಯ ಹರಡುವಿಕೆ ಕುರಿತಾದ  ನಿರ್ದಿಷ್ಟ ಪ್ಯಾರಾವನ್ನು ಅದರಿಂದ ತೆಗೆದು ಹಾಕಲಾಗಿದೆ.

ಈ ಡಾಕ್ಯುಮೆಂಟ್‍ನ ಅಧ್ಯಾಯ ``ದಿ ಕೋವಿಡ್-19 ಪ್ಯಾಂಡೆಮಿಕ್ ಎಂಡ್ ಮೆಂಟಲ್ ಹೆಲ್ತ್-ಆ್ಯನ್ ಇಂಟ್ರಡಕ್ಷನ್' ಇದರ ಇದೀಗ ಡಿಲೀಟ್ ಮಾಡಲಾಗಿರುವ ಪ್ಯಾರಾದಲ್ಲಿ ಹೀಗೆಂದು ಬರೆಯಲಾಗಿತ್ತು- “ಇದು ಪ್ರಕಟವಾಗುವ ಹೊತ್ತಿಗೆ, ಎಪ್ರಿಲ್ 2020ರ ಆರಂಭದಲ್ಲಿ ಭಾರತ  ಸೀಮಿತ ಸಮುದಾಯ ಹರಡುವಿಕೆ ಹಂತದಲ್ಲಿದೆ ಹಾಗೂ  ಈ ಸಾಂಕ್ರಾಮಿಕ ಯಾವ ರೀತಿ ಹರಡಬಹುದೆಂದು ಕಲ್ಪಿಸಲು ಸಾಧ್ಯವಿಲ್ಲ. ಇತರ ದೇಶಗಳಲ್ಲಿ ಏನು  ನಡೆದಿದೆ, ಮುಂದೇನು ನಡೆಯಬಹುದು ಹಾಗೂ ಲಾಕ್ ಡೌನ್ ಕುರಿತಂತೆ ಹೆಚ್ಚಿನ ಮಾನಸಿಕ ಪ್ರತಿಕ್ರಿಯೆಗಳು ಪ್ರತಿಗಾಮಿಯಾಗಿವೆ'' ಎಂದು ಬರೆಯಲಾಗಿತ್ತು.

ಈ ಒಂದು ಪ್ಯಾರಾ ಡಿಲೀಟ್ ಮಾಡಿರುವ ಹೊರತಾಗಿ ಹೊಸ ಡಾಕ್ಯುಮೆಂಟ್‍ನಲ್ಲಿ ಬೇರೆ ಯಾವುದೇ ಬದಲಾವಣೆಯಿಲ್ಲ. ಈ ವರದಿಯನ್ನು ನಿಮ್ಹಾನ್ಸ್‍ನ ಮಾನಸಿಕ ಆರೋಗ್ಯ ಇಲಾಖೆ ಸಿದ್ಧಪಡಿಸಿತ್ತು.

ಈ ಕುರಿತಂತೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ``ತಪ್ಪೊಂದನ್ನು ಮಾಡಲಾಗಿತ್ತು  ಹಾಗೂ ಅದನ್ನೀಗ ಸರಿಪಡಿಸಲಾಗಿದೆ. ಮತ್ತಿನ್ನೇನೂ ಇಲ್ಲ'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News