ಕೊರೋನ ತಡೆಗೆ ಕೈಗೊಂಡ ಕ್ರಮಗಳ ವರದಿ: ಹೈಕೋರ್ಟ್ ಗೆ ವರದಿ ಸಲ್ಲಿಸಿದ ಬಿಬಿಎಂಪಿ

Update: 2020-07-10 13:12 GMT

ಬೆಂಗಳೂರು, ಜು.10: ಬೆಂಗಳೂರು ನಗರದಲ್ಲಿ ಕೊರೋನ ಹಿನ್ನೆಲೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಬಿಬಿಎಂಪಿ ಹೈಕೋರ್ಟ್ ಗೆ ವರದಿ ಸಲ್ಲಿಸಿದೆ.

ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. ಬಿಬಿಎಂಪಿ ಅಧಿಕಾರಿಗಳು ನಗರದ 16 ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಅಂಶಗಳುಳ್ಳ ಲಿಖಿತ ರೂಪದ ವರದಿಯನ್ನು ಹೈಕೋರ್ಟ್ ಪೀಠಕ್ಕೆ ಸಲ್ಲಿಸಿದರು.

ನಗರದಲ್ಲಿ ಪ್ರತಿ ದಿನ 5 ಸಾವಿರ ಮಂದಿ ಕೊರೋನ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಸೋಂಕಿತರು ಇಚ್ಛೆಪಟ್ಟಲ್ಲಿ ಅವರ ಆಯ್ಕೆಯ ಖಾಸಗಿ ಆಸ್ಪತ್ರೆಗೆ ಸೇರಲು ಅವಕಾಶ ನೀಡುತ್ತಿದ್ದೇವೆ.  ಸರಕಾರದ ಖರ್ಚಿನಲ್ಲಿಯೇ ಖಾಸಗಿ ಆಸ್ಪತ್ರೆಗಳಿಗೆ ಸೋಂಕಿತರನ್ನು ರವಾನೆ ಮಾಡಲಾಗುತ್ತಿದೆ. ಈಗಾಗಲೇ ನಗರದಲ್ಲಿ 313 ಆ್ಯಂಬುಲೆನ್ಸ್ ಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಯಾವುದೇ ತಡೆ ಇಲ್ಲದೆ ಸೋಂಕಿತರ ಸೇವೆಗೆ ದಿನದ 24 ಗಂಟೆಯೂ ಎಲ್ಲ ಆ್ಯಂಬುಲೆನ್ಸ್ ಗಳು ಕೆಲಸ ಮಾಡುತ್ತಿವೆ. ಇನ್ನೂ ಅಧಿಕ 87 ಆ್ಯಂಬುಲೆನ್ಸ್ ಗಳಿಗೆ ಬೇಡಿಕೆ ಇದ್ದು, ಕ್ರಮ ಕೈಗೊಳ್ಳಲಾಗುವುದು.

ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಮೃತದೇಹಗಳ ಅಂತ್ಯಕ್ರಿಯೆ ನಡೆಸುತ್ತಿದ್ದೇವೆ. ನಗರದಲ್ಲಿ ಇಲ್ಲಿ ತನಕ ಕೊರೋನದಿಂದ 155 ಸಾವುಗಳು ವರದಿಯಾಗಿವೆ. ನಗರದ 12 ಚಿತಾಗಾರಗಳಲ್ಲಿ ಸೋಂಕಿತ ಮೃತದೇಹಗಳ ಅಂತ್ಯಕ್ರಿಯೆ ನಡೆಯುತ್ತಿದೆ. ಸೋಂಕಿತರ ಮೃತದೇಹಗಳ ಅಂತ್ಯಕ್ರಿಯೆಗೆ 35 ಎಕರೆ ಭೂಮಿ ನಿಗದಿ ಮಾಡಲಾಗಿದೆ ಎಂಬ ಅಂಶಗಳುಳ್ಳ ವರದಿಯನ್ನು ಬಿಬಿಎಂಪಿ ಹೈಕೋರ್ಟ್ ಗೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News