ಭೂ ಸುಧಾರಣೆ ಕಾಯ್ದೆ ತಿದ್ದುಪಡಿ: ರಾಜ್ಯ ಸರಕಾರದ ವಿರುದ್ಧ ಬೆಂಗಳೂರಿನಲ್ಲಿ ದಸಂಸ ಧರಣಿ

Update: 2020-07-10 14:52 GMT

ಬೆಂಗಳೂರು, ಜು.10: ಕರ್ನಾಟಕ ಭೂ ಸುಧಾರಣೆ ಕಾಯ್ದೆ ಸುಗ್ರೀವಾಗ್ಞೆ ಮೂಲಕ ತಿದ್ದುಪಡಿ ಮಾಡುವ ಮುನ್ನ ಚರ್ಚೆಗೊಳಪಡಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.

ಶುಕ್ರವಾರ ನಗರದ  ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ದಸಂಸ, ಒಕ್ಕೂಟ ಸಂಘಟನೆಗಳ ಜಂಟಿ ವೇದಿಕೆ ಸದಸ್ಯರು, ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ 79ಎ, ಬಿ, ಸಿ, 80 ಹಾಗೂ 63ರ ಸೆಕ್ಷನ್‍ಗಳನ್ನು ರದ್ದುಗೊಳಿಸಿ ಸುಗ್ರೀವಾಜ್ಞೆ ಮೂಲಕ ಎಸ್ಸಿ, ಎಸ್ಟಿ, ಹಿಂದುಳಿದ ಹಾಗೂ ಶೋಷಿತ ಸಮುದಾಯಗಳು ಭೂಮಿ ಪಡೆಯದ ಹುನ್ನಾರ ಇದೆ ಎಂದು ದೂರಿದರು

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಸಂಸ(ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ತಿದ್ದುಪಡಿಯು ಬಂಡವಾಳಶಾಹಿಗಳಿಗೆ ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ರತ್ನಗಂಬಳಿ ಹಾಸಿ ಆಹ್ವಾನ ನೀಡಿದಂತೆ ಆಗಿದ್ದು, ಕೃಷಿ ಹೆಸರಿನಲ್ಲಿ ಜಮೀನುಗಳನ್ನು ಹಸ್ತಾಂತರಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಇತ್ತೀಚಿನ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಶೇ.65 ಜನರು ಭೂಮಿಯನ್ನು ಆಧರಿಸಿ ಕೃಷಿ ಅವಲಂಬಿತ ಚಟುವಟಿಕೆಗಳನ್ನು ನಂಬಿ ಬದುಕುತ್ತಿದ್ದಾರೆ. ಇಂತಹ ಆದೇಶಗಳಿಂದ ರೈತರು ಬಂಡವಾಳಶಾಹಿಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳು ನೀಡುವ ಆಮಿಷಗಳಿಗೆ ಬಲಿಯಾಗಿ ಭೂಮಿಯನ್ನು ಕಳೆದುಕೊಂಡು ತಬ್ಬಲಿಗಳಾಗಿ ತಮ್ಮ ನೆಲದಲ್ಲಿ ತಾವೇ ಕೂಲಿಕಾರರಾಗಿ ಬದುಕುವ ದುಸ್ಥಿತಿ ನಿರ್ಮಾಣವಾಗುವುದು ನಿಶ್ಚಿತ ಎಂದು ತಿಳಿಸಿದರು.

ಯಾವುದೇ ತಾರತಮ್ಯಗಳಿಲ್ಲದೆ ಸಮಾನ ಭೂ ಹಂಚಿಕೆಯಾಗಬೇಕು. ಸರಕಾರ ನೀಡುವ ಯಾವುದೇ ತರಹದ ಭೂಮಿ ಸ್ವಂತ ಆಸ್ತಿ ಆಗಬಾರದು. ಹಾಗೂ ಆಸ್ತಿಯ ಹಕ್ಕು ರದ್ದಾಗಬೇಕು. ವ್ಯವಸಾಯ ಯೋಗ್ಯ ಭೂಮಿಯನ್ನು ಕೃಷಿಗಾಗಿ ಅಥವಾ ಕೃಷಿ ಚಟುವಟಿಗಳಿಗಾಗಿ ಮಾತ್ರ ಬಳಸುವಂತೆ ಆಗಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ-ವರ್ಗಗಳಿಗೆ ಮೀಸಲಿಟ್ಟ ಭೂಮಿಯನ್ನು ಪರಭಾರೆ ಮಾಡದೆ ಅವರಿಗೆ ಮಂಜೂರು ಮಾಡಬೇಕು. ಕೃಷಿ ಮಾಡಲು ಆಸಕ್ತರಾಗಿದ್ದರೆ. ಅಂತಹ ಕುಟುಂಬಗಳನ್ನು ಗುರುತಿಸಿ ಆ ಜಮೀನುಗಳನ್ನು ಸರಕಾರದ ವಶಕ್ಕೆ ಪಡೆಯಬೇಕು. ಅಂತಹವರ ಪೋಷಣೆಯ ಜವಾಬ್ದಾರಿಯನ್ನು ಸರಕಾರವೇ ನಿರ್ವಹಿಸಬೇಕು ಎಂದು ಮಾವಳ್ಳಿ ಶಂಕರ್ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗಾಯಕ ಗೊಲ್ಲಹಳ್ಳಿ ಶಿವಪ್ರಸಾದ್, ಪ್ರಜಾ ಪರಿವರ್ತನಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಗೋಪಾಲ್, ಕರಾದಸಂಸ ಲಕ್ಷ್ಮೀನಾರಾಯಣ ನಾಗವಾರ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಬೆನ್ನಿಗನಹಳ್ಳಿ ರಾಮಚಂದ್ರ, ಗುರುಪ್ರಸಾದ್ ಕೆರಗೋಡು, ಸಿದ್ದಾರ್ಥ ಶ್ರೀನಿವಾಸ್, ವಿ.ನಾಗರಾಜ್, ಮಣಿಪಾಲ ರಾಜಪ್ಪ, ಜಿಗಳ ಶ್ರೀರಾಂ, ಎಂ.ಸಿ.ಹಳ್ಳಿ ವೇಣು, ಜೀವನಹಳ್ಳಿ ಆರ್.ವೆಂಕಟೇಶ್, ಎಂ.ಲೋಕೇಶ್, ಸಿದ್ದಾಪುರ ಮಂಜು ಸೇರಿದಂತೆ ಪ್ರಮುಖರಿದ್ದರು.

ವ್ಯವಸಾಯ ಭೂಮಿ ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ, ಶ್ರಮಜೀವಿಗಳಿಗೆ ಭೂಮಿಯನ್ನು ನೀಡಬೇಕು. ಅಲ್ಲದೆ, ಸಣ್ಣ ಮತ್ತು ಅತಿ ಸಣ್ಣ ಭೂ ಹಿಡುವಳಿದಾರರು ಪಟ್ಟಭದ್ರರು ಒಡ್ಡುವ ಒತ್ತಡ ಮತ್ತು ಹಣದ ಆಮಿಷಕ್ಕೆ ಬಲಿಯಾಗಿ ಭೂಮಿಯನ್ನು ಕಳೆದುಕೊಂಡು ಭಿಕಾರಿಗಳಾಗುತ್ತಾರೆ. ಆದ್ದರಿಂದ ಸರಕಾರ ಕಾಯ್ದೆ ತಿದ್ದುಪಡಿ ಕೈಬಿಡಬೇಕು.

-ಲಕ್ಷ್ಮೀ ನಾರಾಯಣ ನಾಗವಾರ, ರಾಜ್ಯ ಸಂಚಾಲಕ, ಕರಾದಸಂಸ

1961ರ ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಹಿಂದೆ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಪ್ರಾಂತ್ಯ ಸರಕಾರಗಳು, ರಾಜ್ಯ ಸರಕಾರಗಳು ಜಾರಿಗೊಳಿಸಿದ ಭೂ ನೀತಿಗಳು ಮತ್ತು ಕಾಗೋಡು ಸತ್ಯಾಗ್ರಹದಂತಹ ಗೇಣಿದಾರರ ಹೋರಾಟಗಳ ದೊಡ್ಡ ಚರಿತ್ರೆಯೇ ಇದೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತರುವುದರಿಂದ ಲಕ್ಷಾಂತರ ಭೂರಹಿತರು ಕೃಷಿ ಕಾರ್ಮಿಕರ ಆಸೆಯು ಕನಸಾಗಿಯೇ ಉಳಿಯಲಿದೆ. ಆದ್ದರಿಂದ ಭೂ ಸುಧಾರಣಾ ಕಾಯ್ದೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸರಿಯಲ್ಲ.

-ಮಂಜುನಾಥ ಅಣ್ಣಯ್ಯ, ಬೆಂ.ವಿಭಾಗೀಯ ಸಂಚಾಲಕ, ದಸಂಸ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News