ಕಝಕಿಸ್ತಾನದಲ್ಲಿ ಕೊರೋನಗಿಂತ ಅಪಾಯಕಾರಿಯಾದ ‘ಅಪರಿಚಿತ ನ್ಯುಮೋನಿಯ’: ಚೀನಾ ಎಚ್ಚರಿಕೆ

Update: 2020-07-10 15:08 GMT

ಹೊಸದಿಲ್ಲಿ: ಕಝಕಿಸ್ತಾನದಲ್ಲಿ ಸ್ಥಳೀಯ ‘ಅಪರಿಚಿತ ನ್ಯುಮೋನಿಯಾ’ ಕೊರೋನ ವೈರಸ್ ಗಿಂತಲೂ ಅಪಾಯಕಾರಿಯಾಗಿದೆ ಎಂದು ಚೀನಾ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.

“ಕಝಕಿಸ್ತಾನದಲ್ಲಿ ಅಪರಿಚಿತ ನ್ಯುಮೋನಿಯಾದಿಂದ 6 ತಿಂಗಳಲ್ಲಿ 1722 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 628 ಮಂದಿ ಜೂನ್ ತಿಂಗಳಲ್ಲಿ ಮೃತಪಟ್ಟಿದ್ದಾರೆ” ಎಂದು ವಿ ಚಾಟ್ ನಲ್ಲಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಚೀನಾ ರಾಯಭಾರ ಕಚೇರಿ ತಿಳಿಸಿದೆ. ಮೃತಪಟ್ಟವರಲ್ಲಿ ಚೀನಾದ ಪ್ರಜೆಗಳೂ ಇದ್ದಾರೆ ಎಂದು ಅದು ಹೇಳಿದೆ.

“ಈ ಅಪರಿಚಿತ ನ್ಯುಮೋನಿಯಾದಿಂದ ಮೃತಪಟ್ಟವರ ಸಂಖ್ಯೆ ಕೊರೋನದಿಂದ ಮೃತಪಟ್ಟವರ ಸಂಖ್ಯೆಗಿಂತಲೂ ಹೆಚ್ಚು” ಎಂದು ರಾಯಭಾರ ಕಚೇರಿ ಹೇಳಿರುವುದಾಗಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಆರೋಪ ನಿರಾಕರಿಸಿದ ಕಝಕಿಸ್ತಾನ

ಕೊರೋನಗಿಂತಲೂ ಅಪಾಯಕಾರಿಯಾದ ನ್ಯುಮೋನಿಯಾದಿಂದ ಹಲವರು ಮೃತಪಟ್ಟಿದ್ದಾರೆ ಎನ್ನುವ ಚೀನಾದ ಆರೋಪಗಳನ್ನು ಕಝಕಿಸ್ತಾನ ನಿರಾಕರಿಸಿದೆ.

ರಾಯಭಾರ ಕಚೇರಿಯನ್ನು ಉಲ್ಲೇಖಿಸಿ ಚೀನಾ ಮಾಧ್ಯಮಗಳು ವರದಿ ಮಾಡಿರುವುದು ಸುಳ್ಳು ಸುದ್ದಿಗಳು ಎಂದು ಕಝಕಿಸ್ತಾನ ಆರೋಗ್ಯ ಸಚಿವಾಲಯ ತಿಳಿಸಿದೆ.

“ಕಝಕಿಸ್ತಾನದಲ್ಲಿ ಹೊಸ ರೀತಿಯ ನ್ಯುಮೋನಿಯಾ ಇದೆ ಎಂದು ಚೀನಿ ಮಾಧ್ಯಮಗಳು ಮಾಡಿದ ವರದಿಗಳು ಸುಳ್ಳು” ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News