ಕೊರೋನ ವರದಿ ವಿಳಂಬ: ತನಿಖೆ ನಡೆಸಿ ತಪ್ಪಿತಸ್ಥ ಆಸ್ಪತ್ರೆಗಳಿಗೆ ಕಠಿಣ ಸಂದೇಶ ರವಾನಿಸಿ; ಹೈಕೋರ್ಟ್

Update: 2020-07-10 16:13 GMT

ಬೆಂಗಳೂರು, ಜು.10: ಕೊರೋನ ಪರೀಕ್ಷೆ ವರದಿ ವಿಳಂಬದಿಂದಾಗಿ ಕೊರೋನ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆಸ್ಪತ್ರೆಗಳಿಗೆ ಕಠಿಣ ಸಂದೇಶ ರವಾನಿಸಿ ಎಂದು ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಚಿಕಿತ್ಸೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಬೆಂಗಳೂರು ನಗರದಲ್ಲಿ ಕೊರೋನಗೆ ಸೂಕ್ತ ಚಿಕಿತ್ಸೆ ಸಿಗದೆ ಸೋಂಕಿತರು ಸಾಯುತ್ತಿರುವುದರ ಕುರಿತು, ಅದರಲ್ಲೂ ಇತ್ತೀಚೆಗೆ 9 ಆಸ್ಪತ್ರೆಗಳಿಗೆ ತಿರುಗಾಡಿ ಸೋಂಕಿತರೊಬ್ಬರು ಸಾವನ್ನಪ್ಪಿರುವ ಘಟನೆ ಬಗ್ಗೆ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಇತ್ತೀಚೆಗೆ ನ್ಯಾಯಾಧೀಶರೊಬ್ಬರ ತಂದೆಗೆ ಕೊರೋನ ಸೋಂಕು ದೃಢಪಟ್ಟಿತ್ತು. ಪರಿಣಾಮ ವಸತಿ ಸಮುಚ್ಛಯದಲ್ಲಿ ವಾಸಿಸುವ ಹಲವರು ಕ್ವಾರಂಟೈನ್ ಆಗಿದ್ದರು. ಜು.4ರಂದೆ ಪರೀಕ್ಷೆ ಮಾಡಿಸಿದ್ದರೂ ಇನ್ನೂ ವರದಿ ಬಂದಿಲ್ಲ. ಜನಸಾಮಾನ್ಯರು ಪರೀಕ್ಷೆ ಮಾಡಿಸಿದರೆ ವರದಿಗೆ ಎಷ್ಟು ಸಮಯ ಕಾಯಬೇಕು. ಕೊರೋನ ದೃಢವಾದರೆ ಆಸ್ಪತ್ರೆಗೆ ದಾಖಲಿಸಲು ಎಷ್ಟು ಸಮಯ ಬೇಕು. ಈ ಬಗ್ಗೆ ಸಮಗ್ರ ವಿವರ ನೀಡುವಂತೆ ರಾಜ್ಯ ಸರಕಾರಕ್ಕೆ ನ್ಯಾಯಪೀಠವು ಆದೇಶಿಸಿದೆ.

ಅಲ್ಲದೆ, ನ್ಯಾಯಪೀಠವು, ಕೊರೋನ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಲು ಒಂದು ವೆಬ್‍ಸೈಟ್ ಆರಂಭಿಸಲು ಸಲಹೆ ನೀಡಿದೆ. ಇದರಲ್ಲಿ ಖಾಲಿಯಾಗಿರುವ ಬೆಡ್ ಮತ್ತು ಆಸ್ಪತ್ರೆಗಳ ವಿವರ ನೀಡಿ. ಹಾಗೆಯೇ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿ ಎಂದು ಸರಕಾರಕ್ಕೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News