ರಾಜ್ಯ ರಾಜಧಾನಿಯಲ್ಲಿ ಕೊರೋನ ಕೋಲಾಹಲ: ಒಂದೇ ದಿನ 1,447 ಮಂದಿಗೆ ಪಾಸಿಟಿವ್, 29 ಸಾವು

Update: 2020-07-10 16:32 GMT

ಬೆಂಗಳೂರು, ಜು.10: ನಗರದಲ್ಲಿ ಶುಕ್ರವಾರ 1,447 ಕೊರೋನ ಪ್ರಕರಣ ದೃಢಪಟ್ಟಿದ್ದು, 29 ಮಂದಿ ಮೃತಪಟ್ಟಿದ್ದಾರೆ.

ನಗರದಲ್ಲಿ ಸೋಂಕಿತರ ಸಂಖ್ಯೆ 15,329 ಏರಿಕೆಯಾಗಿದ್ದು, 301 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 11,687 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿಯವರೆಗೆ 206 ಜನರು ಕೊರೋನ ಸೋಂಕಿಗೆ ಬಲಿಯಾಗಿದ್ದು, ಶುಕ್ರವಾರ 601 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 21,423 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ನರಳಾಡಿ ಮೃತಪಟ್ಟ ಕೊರೋನ ಸೋಂಕಿತ

ಚಿಕಿತ್ಸೆ ಸಿಗದೆ ಕೊರೋನ ಸೋಂಕಿತರೊಬ್ಬರು ನರಳಾಡಿ ಪ್ರಾಣಬಿಟ್ಟ ಘಟನೆ ಯಶವಂತಪುರದ ಮಾಲ್ ಒಂದರ ಹಿಂಭಾಗದಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ ಎನ್ನಲಾಗಿದೆ.

ತುಮಕೂರು ರಸ್ತೆಯಲ್ಲಿ ಎರಡು ಪೆಟ್ರೋಲ್ ಬಂಕ್ ಮಾಲಕನಾಗಿದ್ದ ಸೋಂಕಿತನಿಗೆ ರೋಗ ಲಕ್ಷಣಗಳಿಲ್ಲದ ಹಿನ್ನೆಲೆ ತಮ್ಮ ಫ್ಲಾಟ್‍ನಲ್ಲಿ ಕ್ವಾರಂಟೈನ್ ಆಗಿದ್ದರು. ಈ ಸಮಯದಲ್ಲಿ ಕುಟುಂಬಸ್ಥರನ್ನು ಸೋಂಕಿತ ಉದ್ಯಮಿ ಬೇರೆಡೆಗೆ ಕಳುಹಿಸಿದ್ದರು. ಹೀಗಾಗಿ ಒಂದು ವಾರದಿಂದ ಫ್ಲಾಟ್‍ನಲ್ಲಿ ಒಬ್ಬರೇ ಇದ್ದರು.

ಗುರುವಾರ ರಾತ್ರಿ ಉದ್ಯಮಿಯ ಸಹೋದರ ಊಟ ನೀಡಿ ಹೋಗಿದ್ದಾರೆ. ಆದರೆ, ತಡರಾತ್ರಿ ಉಸಿರಾಟದ ಸಮಸ್ಯೆಯಾಗಿದ್ದರಿಂದ ನಗರದ ಆಸ್ಪತ್ರೆಗೆ ತೆರಳಿದ್ದರು. ಆದರೆ ಅಲ್ಲಿನ ಸಿಬ್ಬಂದಿ ಬೆಡ್ ಖಾಲಿಯಿಲ್ಲ, ನಿಮಗೇನು ಆಗಲ್ಲವೆಂದು ಸೋಂಕಿತನಿಗೆ ಹೇಳಿ ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಸೋಂಕಿತ ಮನೆಗೆ ಹಿಂದಿರುಗಿದ ನಂತರ ಮತ್ತಷ್ಟು ಸಮಸ್ಯೆಯಾಗಿದೆ. ನಂತರ ತೀವ್ರ ಉಸಿರಾಟದ ಸಮಸ್ಯೆಯಿಂದ ರಾತ್ರಿ ಸೋಂಕಿತ ಉದ್ಯಮಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ

ನಗರದ ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಹೆಚ್ಚಾಗಿದ್ದು, ಸೋಂಕಿತರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಆ್ಯಂಬುಲನ್ಸ್ ಸಿಬ್ಬಂದಿ ಕೂಡ ಸೋಂಕಿತರು ಹೇಳಿದ ಕಡೆ ಹೋಗುತ್ತಿದ್ದು, ಇದೀಗ ಆಸ್ಪತ್ರೆಗಳಲ್ಲಿ ಬೆಡ್‍ಗಳ ಲಭ್ಯತೆ ಇದ್ದರೆ ಮಾತ್ರ ಸೋಂಕಿತರನ್ನು ಕರೆದುಕೊಂಡು ಹೋಗಲಾಗುವುದು ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.

ಅತ್ತಿಬೆಲೆಯ ವೃದ್ಧೆಯೊಬ್ಬರು ಸೋಂಕಿನಿಂದ ಬಳಲುತ್ತಿದ್ದು, ಶುಕ್ರವಾರ ಬೆಳಗ್ಗೆ ವೃದ್ಧೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ವೃದ್ಧೆಯ ಕುಟುಂಬಸ್ಥರು ಆ್ಯಂಬುಲನ್ಸ್ ಗೆ ಕರೆ ಮಾಡಿದ್ದಾರೆ. ಸಿಬ್ಬಂದಿಯು, ಮನೆಯಿಂದ ಆಸ್ಪತ್ರೆಗೆ ಸ್ಥಳಾಂತರಿಸುವುದಷ್ಟೇ ನಮ್ಮ ಕೆಲಸ. ಮೊದಲು ಆಸ್ಪತ್ರೆಯಲ್ಲಿ ಬೆಡ್ ಹುಡುಕಿ ನಂತರ ಸ್ಥಳಾಂತರಿಸುತ್ತೇವೆ ಎಂದಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ಸಿಗದೆ ವೃದ್ಧೆ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ವೃದ್ಧೆಗೆ ಸೋಂಕು ಇದ್ದ ಹಿನ್ನೆಲೆ ಅಂತ್ಯಕ್ರಿಯೆ ಮಾಡುವುದು ಸಮಸ್ಯೆಯಾಗಿದೆ. ಇವರ ಒಬ್ಬ ಮಗನಿಗೂ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 'ವೃದ್ಧೆಯ ಅಂತ್ಯಕ್ರಿಯೆ ಪಾಲಿಕೆ ಅಧಿಕಾರಿಗಳೇ ಮಾಡಬೇಕು. ಈ ಸಂಬಂಧ ಅಧಿಕಾರಿಗಳು ಹಾಗೂ ಆ್ಯಂಬುಲನ್ಸ್ ಗೆ ಕರೆ ಮಾಡಿದರೆ ಕ್ಯಾರೇ ಎನ್ನುತ್ತಿಲ್ಲ' ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬೆಡ್‍ಗಾಗಿ ಪರದಾಟ

ಅವೆನ್ಯೂ ರಸ್ತೆಯ ನಿವಾಸಿಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಕರೆ ಮಾಡಿದರೂ ಆ್ಯಂಬುಲನ್ಸ್ ಬಂದಿಲ್ಲ. ಹೀಗಾಗಿ ತಮ್ಮ ವಾಹನದಲ್ಲಿಯೇ ಶುಕ್ರವಾರ ಕೆ.ಸಿ.ಜನರಲ್ ಆಸ್ಪತ್ರೆಗೆ ಬಂದಿದ್ದು, ಅಲ್ಲಿ ಬೆಡ್ ನೀಡಲು ಸಿಬ್ಬಂದಿ ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ

ಈ ವ್ಯಕ್ತಿಗೆ ಸುಮಾರು 10 ದಿನದ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಜ್ವರದ ಮಾತ್ರೆ ತೆಗೆದುಕೊಂಡಿದ್ದಾರೆ. ಆದರೂ, ಜ್ವರ ನಿಲ್ಲದ ಕಾರಣ 4 ದಿನದ ಹಿಂದೆ ಪರೀಕ್ಷೆಗೆ ಒಳಪಟ್ಟಿದ್ದಾರೆ. ಗುರುವಾರ ತಡರಾತ್ರಿ ಪಾಲಿಕೆ ಸಿಬ್ಬಂದಿ ಕರೆ ಮಾಡಿ ಸೋಂಕು ಇರುವುದು ದೃಢಪಡಿಸಿದ್ದು, ಶುಕ್ರವಾರ ಬೆಳಗ್ಗೆವರೆಗೂ ಆ್ಯಂಬುಲನ್ಸ್ ಬಂದಿಲ್ಲ. ಆದ್ದರಿಂದ ಅವರೇ ಕೆ.ಸಿ.ಜನರಲ್ ಆಸ್ಪತ್ರೆಗೆ ಬಂದಿದ್ದು, ಬೆಡ್ ನೀಡಲು ಸಿಬ್ಬಂದಿ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. 

"ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ ಕಿಟ್"

'ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದ್ದು, ನಗರದ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಿಪಿಇ ಕಿಟ್ ನೀಡದೇ ಚಿಕಿತ್ಸೆ ನೀಡಲು ತಿಳಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳ ದುಡ್ಡಿನಲ್ಲಿಯೇ ಪಿಪಿಇ ಕಿಟ್ ಕೊಳ್ಳಬೇಕು ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸುತ್ತಿದ್ದು, ಇಂಟರ್ನ್‍ಶಿಪ್ ವೈದ್ಯರಿಗೆ ಮಾಸಿಕ 4 ಸಾವಿರ ರೂ. ನೀಡುತ್ತಿದ್ದಾರೆ' ಎಂದು ವಿದ್ಯಾರ್ಥಿನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News