ಒಂದೇ ದಿನ 27 ಸಾವಿರ ಕೊರೋನ ಸೋಂಕಿನ ದಾಖಲೆ

Update: 2020-07-11 03:27 GMT

ಹೊಸದಿಲ್ಲಿ ಜು.11: ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಶುಕ್ರವಾರ ಒಂದೇ ದಿನ 27 ಸಾವಿರಕ್ಕೂ ಅಧಿಕ ಕೊರೋನ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿವೆ. ಸತತ ಮೂರನೇ ದಿನ ಸಾವಿನ ಸಂಖ್ಯೆಯೂ ಹೆಚ್ಚಿದ್ದು, ಕಳೆದ 24 ಗಂಟೆಗಳಲ್ಲಿ 520 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 22 ಸಾವಿರದ ಸನಿಹ ತಲುಪಿದೆ.

ಜುಲೈ 4ರಂದು 608 ಸಾವು ಸಂಭವಿಸಿದ್ದನ್ನು ಹೊರತುಪಡಿಸಿದರೆ ಶುಕ್ರವಾರ ದಾಖಲಾದ 520 ಎರಡನೇ ಗರಿಷ್ಠ ಸಾವಿನ ಸಂಖ್ಯೆಯಾಗಿದೆ. ಶುಕ್ರವಾರ ದೇಶದಲ್ಲಿ ದಾಖಲೆ 27,449 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 8,21,722ಕ್ಕೇರಿದೆ ಎನ್ನುವುದು ರಾಜ್ಯ ಸರ್ಕಾರಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳಿಂದ ದೃಢಪಟ್ಟಿದೆ.

ಇಡೀ ಜೂನ್ ತಿಂಗಳಲ್ಲಿ 4 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿದ್ದರೆ ಜುಲೈ ತಿಂಗಳ ಮೊದಲ 10 ದಿನದಲ್ಲೇ 2.36 ಲಕ್ಷ ಮಂದಿಗೆ ಸೋಂಕು ತಗುಲಿದೆ. ಅಂತೆಯೇ ಇಡೀ ಜೂನ್ ತಿಂಗಳಲ್ಲಿ 12 ಸಾವಿರ ಮಂದಿ ಸೋಂಕಿತರು ಮೃತಪಟ್ಟಿದ್ದರೆ ಜುಲೈ ತಿಂಗಳ ಮೊದಲ 10 ದಿನಗಳಲ್ಲೇ 4,733 ಮಂದಿ ಜೀವ ತೆತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಶುಕ್ರವಾರ ದಾಖಲೆ ಸಂಖ್ಯೆಯ (7,862) ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕ (2,313), ಆಂಧ್ರಪ್ರದೇಶ (1,608), ಉತ್ತರ ಪ್ರದೇಶ (1,347), ಬಂಗಾಳ (1,198), ಗುಜರಾತ್ (875), ಒಡಿಶಾ (755), ಕೇರಳ (416) ಮತ್ತು ಮಣಿಪುರ (147) ಕೂಡಾ ದಿನದ ಗರಿಷ್ಠ ಸಂಖ್ಯೆ ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News