ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 15 ಕೋಟಿ ರೂ. ಆಫರ್, ಸರಕಾರ ಉರುಳಿಸಲು ಯತ್ನ: ಗೆಹ್ಲೋಟ್ ಆರೋಪ

Update: 2020-07-11 09:55 GMT

ಜೈಪುರ್: ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಬಿಜೆಪಿಯು ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿಸಲು ಮುಂದಾಗಿದೆ ಹಾಗೂ ಶಾಸಕರಿಗೆ 15 ಕೋಟಿ ರೂ. ತನಕ ಆಫರ್ ಮಾಡುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದೂರಿದ್ದಾರೆ.

ತಮ್ಮ ಸರಕಾರ ಉರುಳಿಸಲು ಶಾಸಕರಿಗೆ ಹಣದ ಆಫರ್ ಜತೆಗೆ ನಿಷ್ಠೆ ಬದಲಾಯಿಸಲು  ಕೆಲವೊಂದು ಆಮಿಷಗಳನ್ನು ಒಡ್ಡಲಾಗುತ್ತಿದೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.

``ರಾಜ್ಯ ಸರಕಾರ ಕೋವಿಡ್-19 ಸಂದರ್ಭದಲ್ಲಿ ಜನರಿಗಾಗಿ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಸಮಸ್ಯೆ ಸೃಷ್ಟಿಸುವುದನ್ನು ಮುಂದುವರಿಸಿದೆ'' ಎಂದು ಗೆಹ್ಲೋಟ್ ಹೇಳಿದ್ದಾರೆ.

``ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರವು ತನ್ನ ವಿರೋಧಿಗಳ ಸಹಿತ ಎಲ್ಲರನ್ನು ವಿಶ್ವಾಸಕ್ಕೆ ಪಡೆಯುತ್ತಿದ್ದರೆ ಬಿಜೆಪಿ ಎಲ್ಲಾ ಎಲ್ಲೆಯನ್ನೂ ಮೀರುತ್ತಿದೆ. ಅವರು ನನ್ನ ಸರಕಾರವನ್ನು ಉರುಳಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ'' ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿ ಕಳೆದ ವರ್ಷ ಮೈತ್ರಿ ಸರಕಾರವನ್ನು ಉರುಳಿಸಿರುವುದು ಹಾಗೂ ಕಳೆದ ತಿಂಗಳು ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರವನ್ನು ಉರುಳಿಸಿರುವುದನ್ನು ಗೆಹ್ಲೋಟ್ ಉಲ್ಲೇಖಿಸಿದ್ದಾರೆ.

“ಅವರು 2014ರಲ್ಲಿ ಗೆದ್ದಂದಿನಿಂದ ಅವರ ನಿಜ ಮುಖ ಅನಾವರಣಗೊಂಡಿದೆ. ಹಿಂದೆ ಗುಟ್ಟಾಗಿ ಮಾಡುತ್ತಿದ್ದುದನ್ನು ಈಗ ಬಹಿರಂಗವಾಗಿ ಮಾಡುತ್ತಿದ್ದಾರೆ. ಗೋವಾದಲ್ಲಿ, ಮಧ್ಯ ಪ್ರದೇಶದಲ್ಲಿ ಹಾಗೂ ಈಶಾನ್ಯ ರಾಜ್ಯದಲ್ಲಿ ಇದನ್ನು ನೋಡಿದ್ದೀರಿ'' ಎಂದ ಗೆಹ್ಲೋಟ್ ಬಿಜೆಪಿ ಕಳೆದ ತಿಂಗಳು ರಾಜ್ಯಸಭಾ ಚುನಾವಣೆ ಗೆಲ್ಲಲು ಗುಜರಾತ್‍ ನಲ್ಲಿ ಏಳು ಶಾಸಕರನ್ನು ಖರೀದಿಸಿತ್ತು ಎಂದರು.

``ಅವರು ರಾಜಸ್ಥಾನದಲ್ಲೂ ಇದೇ ರೀತಿ ಮಾಡಲು ಯತ್ನಿಸಿದ್ದಾರೆ, ಆದರೆ ನಾವು ಅವರನ್ನು ತಡೆದಿದ್ದೇವೆ ಹಾಗೂ ಅವರಿಗೆ ಬಹುಕಾಲ ನೆನಪಿನಲ್ಲಿರುವಂತಹ ಪಾಠ ಕಲಿಸಿದ್ದೇವೆ,'' ಎಂದು ಗೆಹ್ಲೋಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News