ಕೃಷಿ ವಿವಿ ನಡೆಸಿದ ಆನ್ ಲೈನ್ ಪರೀಕ್ಷೆಗಳ ಫಲಿತಾಂಶವು ಜುಲೈ ಅಂತ್ಯಕ್ಕೆ ಪ್ರಕಟ: ಸಚಿವ ಬಿ.ಸಿ.ಪಾಟೀಲ್

Update: 2020-07-11 12:01 GMT

ಬೆಂಗಳೂರು, ಜು. 11: ಬಿಎಸ್ಸಿ ಅಗ್ರಿಕಲ್ಚರ್ ಹಾಗೂ ಬಿಟೆಕ್ ಇಂಜಿನಿಯರಿಂಗ್ ಸೇರಿದಂತೆ ಕೃಷಿ ವಿಶ್ವವಿದ್ಯಾಲಯದ ಎಲ್ಲ ಬಿಎಸ್ಸಿ ಅಂತಿಮ ಪದವಿ ಪರೀಕ್ಷೆಗಳು ಈಗಾಗಲೇ ಆನ್‍ಲೈನ್‍ನಲ್ಲಿ ಜು.8ರೊಳಗೆ ಮುಗಿದಿದ್ದು, ಈ ತಿಂಗಳ ಅಂತ್ಯದೊಳಗೆ ಬಿಎಸ್ಸಿ ಅಗ್ರಿ ಪದವಿ ಪ್ರಮಾಣಪತ್ರ ಮತ್ತು ಅಂಕಪಟ್ಟಿ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಜಯಮಹಲ್‍ನಲ್ಲಿರುವ ತನ್ನ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾರಕ ಕೊರೋನ ಸೋಂಕು ಆರಂಭವಾಗುವ ಹೊತ್ತಿಗೆ ಶೇ.90ರಷ್ಟು ಎಚ್‍ಓಟಿ(ಹ್ಯಾಂಡ್ಸ್ ಆನ್ ಟ್ರೈನಿಂಗ್ ಅಥವಾ ರೂರಲ್ ಎಕ್ಸ್ಟೆನ್ಷನ್ ಅಗ್ರಿಕಲ್ಚರ್ ಡೆವಲಪ್ಮೆಂಟ್ ಯೋಜನೆ) ಪ್ರಕಾರ ತರಗತಿಗಳು ಮುಗಿದಿದ್ದವು. ಗ್ರೂಪ್ ಡಿಸ್ಕಷನ್, ವರದಿ ಸಲ್ಲಿಕೆ ಬಾಕಿಯಿತ್ತು.

ಈಗ ವಿದ್ಯಾರ್ಥಿಗಳನ್ನು ಸಾಮೂಹಿಕ ಚರ್ಚೆ ವರದಿ ಸಲ್ಲಿಕೆಗೆ ಸೇರಿಸಲು ಕೋವಿಡ್‍ನಿಂದ ಸಾಧ್ಯವಾಗದ ಕಾರಣ ಶಿಕ್ಷಕರು ಈಗಾಗಲೇ ಆನ್‍ಲೈನ್ ಮೂಲಕ ಪರೀಕ್ಷೆಗಳನ್ನು ಮುಗಿಸಿರುತ್ತಾರೆ. ಗ್ರೇಡ್ ಅಂತಿಮಗೊಳಿಸಿ ಪರೀಕ್ಷಾ ಘಟಕಕ್ಕೆ ಜು.15ರೊಳಗೆ ಸಲ್ಲಿಸಬೇಕಿದ್ದು ಪ್ರಾವಿಝನಲ್ ಡಿಗ್ರಿ ಸರ್ಟಿಫಿಕೇಟ್ ಮತ್ತು ಅಂಕಪಟ್ಟಿ ಸಲ್ಲಿಕೆ ಜು.15ರ ಬಳಿಕ ಆರಂಭವಾಗಲಿದ್ದು, ಬಹುತೇಕ ಜುಲೈ ಅಂತ್ಯದೊಳಗೆ ಎಲ್ಲ ವಿದ್ಯಾರ್ಥಿಗಳಿಗೆ ಡಿಗ್ರಿ ಅಂಕಪಟ್ಟಿ ನೀಡಲಾಗುವುದು ಎಂದರು.

ಇನ್ನು ಅಂತಿಮ ವರ್ಷದ ಎಂಎಸ್ಸಿ ಹಾಗೂ ಪಿಎಚ್‍ಡಿ ಪದವಿ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಆಗಸ್ಟ್ 31ರೊಳಗೆ ಸಲ್ಲಿಸಬೇಕು. ಸೆಪ್ಟೆಂಬರ್ 15ರಿಂದ ಫಲಿತಾಂಶ ಮತ್ತು ಪ್ರಮಾಣಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸೆಪ್ಟೆಂಬರ್ 30ರೊಳಗೆ ಎಲ್ಲ ಎಂಎಸ್ಸಿ, ಪಿಎಚ್‍ಡಿ ವಿದ್ಯಾರ್ಥಿಗಳು ತಮ್ಮ ಪದವಿ ಮುಗಿಸಬಹುದಾಗಿದೆ. ಬಳಿಕ ಉನ್ನತ ಶಿಕ್ಷಣಕ್ಕೆ ತೆರಳಬಹುದು ಎಂದು ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.

ಸೋಂಕಿನೊಂದಿಗೆ ಜೀವನ: ತನ್ನ ಉಸ್ತುವಾರಿಯ ಕೊಪ್ಪಳ ಜಿಲ್ಲೆಯಲ್ಲಿ ಕೊರೋನ ಸೋಂಕು ಪರೀಕ್ಷೆಗೆ ಲ್ಯಾಬ್ ತೆರೆಯಲಾಗಿದ್ದು, ಪ್ರಯೋಗಾಲಯದಲ್ಲಿ ಪ್ರತಿದಿನ 500 ಮಂದಿಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 211 ಪಾಸಿಟಿವ್ ಬಂದಿದ್ದು, ಮುಂಬೈ, ಬಳ್ಳಾರಿಯ ಜಿಂದಾಲ್ ಹಾಗೂ ಆಂಧ್ರದ ಗಡಿ ಭಾಗದಿಂದ ಬರುವವರ ಸಂಖ್ಯೆ ಹೆಚ್ಚಾಗಿರುವ ಕಾರಣ ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದರು.

ಕೊರೋನ ಸೋಂಕಿನ ಜೊತೆ ಜೀವನ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್‍ಡೌನ್ ಮಾಡುವುದು ಸೋಂಕು ನಿಯಂತ್ರಣಕ್ಕೆ ಪರಿಹಾರವಲ್ಲ. ವಾರದಲ್ಲಿ ಎರಡೆರಡು ದಿನ ಲಾಕ್‍ಡೌನ್ ಮಾಡುವುದೂ ಪರಿಹಾರವಲ್ಲ. ಕರ್ನಾಟಕದಲ್ಲಿ ಅತಿಹೆಚ್ಚು ಪ್ರಯೋಗಲಾಯ ಸ್ಥಾಪಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. ಈಗ ರವಿವಾರ ಮಾತ್ರ ಲಾಕ್‍ಡೌನ್ ಮಾಡುತ್ತಿರುವುದು ಸರಿಯಿದೆ ಎಂದರು.

ಗ್ರಾಮೀಣ ಭಾಗದಲ್ಲೂ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಆ ಭಾಗದ ಜನ ಸ್ವಯಂ ಜಾಗೃತರಾಗಿ ಸಾಮಾಜಿಕ ಅಂತರ, ಸ್ಯಾನಿಟೈಜರ್, ಮಾಸ್ಕ್ ಬಳಸುತ್ತಿದ್ದಾರೆ. ಸೋಂಕು ದೃಢಪಟ್ಟ ಕೂಡಲೇ ಜನರು ಭಯಪಡುವುದಾಗಲೀ, ಆತಂಕ, ಗಾಬರಿಗೊಳಗಾಗುವುದು ಬೇಡ. ಆತ್ಮಸ್ಥೈರ್ಯ, ಆತ್ಮವಿಶ್ವಾಸ ತಂದುಕೊಂಡು ಎದುರಿಸುವುದು ಮುಖ್ಯ ಎಂದು ಅವರು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News