ಬೆಳ್ತಂಗಡಿ: ಕೊರೋನ ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮಾಲೋಚನಾ ಸಭೆ

Update: 2020-07-11 13:07 GMT

ಬೆಳ್ತಂಗಡಿ: ತಾಲೂಕಿನಲ್ಲಿ ಕೊರೋನ ಪ್ರರಕರಣಗಳು ಹೆಚ್ಚಾಗುತ್ತಿದ್ದು ಅದನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಹಾಗೂ ಲಾಕ್ ಡೌನ್ ಜಾರಿ ಮಾಡುವ ಕುರಿತು 48 ಗ್ರಾ.ಪಂ ವ್ಯಾಪ್ತಿ ಪ್ರತಿನಿಧಿಗಳ ಜೊತೆ ಸಮಾಲೋಚನಾ ಸಭೆ ಶನಿವಾರ ಬೆಳ್ತಂಗಡಿಯ ಎಸ್.ಡಿ.ಎಮ್ ಸಭಾಂಗಣದಲ್ಲಿ ಜರುಗಿತು.

ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿದ್ದರು. ತಾಲೂಕನ್ನು ಕೊರೋನ ಮುಕ್ತ ತಾಲೂಕು ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಪ್ರಯತ್ನ ಅಗತ್ಯ. ಕೊರೋನ ಹೆಚ್ಚಾಗದಂತೆ ಪ್ರತಿಯೊಬ್ಬರೂ ಸ್ವಯಂ ಜಾಗೃತೆ ವಹಿಸಬೇಕು ಹಾಗೂ ಇತರರಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿ ಬೂತ್ ನಲ್ಲಿ ಕೊರೋನ ಸೈನಿಕರ ತಂಡವನ್ನು ರಚಿಸಬೇಕು, ತಾಲೂಕಿನಲ್ಲಿ ಲಾಕ್ ಡೌನ್ ಜಾರಿ ಮಾಡುವ ಬಗ್ಗೆ ಅಭಿಪ್ರಾಯ ತಿಳಿಸಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ತಹಶೀಲ್ದಾರ್ ಮಹೇಶ್ ಜೆ, ಕಾರ್ಯನಿರ್ವಾಹಣಾಧಿಕಾರಿ ಜಯರಾಮ್, ನ.ಪಂ ಮುಖ್ಯಾಧಿಕಾರಿ ಸುಧಾಕರ್, ಜಿ.ಪಂ ಸದಸ್ಯ ಕೊರಗಪ್ಪ, ಆರೋಗ್ಯಾಧಿಕಾರಿ ಡಾ.ಕಲಾಮಧು ಉಪಸ್ಥಿತರಿದ್ದರು.

ಮದ್ಯಾಹ್ನದ ಬಳಿಕ ಸ್ವಯಂ ಪ್ರೇರಿತ ಬಂದ್ ಗೆ ನಿರ್ಧಾರ

ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ  ಜನರ ಅಭಿಪ್ರಾಯದಂತೆ  ಜು. 14 ರಿಂದ ಮದ್ಯಾಹ್ನ 2ಗಂಟೆಯ ಬಳಿಕ ಸ್ವಯಂ ಲಾಕ್ ಡೌನ್ ನಡೆಸಲು ನಿರ್ಧರಿಸಲಾಯಿತು.ಪ್ರತಿ ದಿನ ಮಧ್ಯಾಹ್ನ ಎರಡು ಗಂಟೆಯ ವರೆಗೆ  ಮಾತ್ರ ಅಂಗಡಿ ಗಳನ್ನು ತೆರೆಯುವುದು ಎಂಬ ತಿರ್ಮಾನ ತೆಗೆದುಕೊಳ್ಳಲಾಯಿತು. 

ಈ ಬಗ್ಗೆ ಧ್ವನಿವರ್ಧಕಗಳ ಮೂಲಕವಾಗಿ ಜನರಿಗೆ ಮಾಹಿತಿ ನೀಡುವುದಾಗಿ ಶಾಸಕರು ತಿಳಿಸಿದರು. ಇದು ತಾಲೂಕು ಆಡಳಿತದಿಂದ ಮಾಡುವ ಕಾರ್ಯವಲ್ಲ. ಈ ಬಗ್ಗೆ ಜನರೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಯಿತು. ಇದರೊಂದಿಗೆ ತಾಲೂಕಿನ ಎಲ್ಲ ಅಂಗಡಿ ಮಾಲಕರುಗಳು ವಾಹನ ಚಾಲಕರುಗಳು ಸಹಕರಿಸುವಂತೆ ಶಾಸಕರು ವಿನಂತಿಸಿದ್ದಾರೆ. 

ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ನಿಂದ ತಲಾ ಇಬ್ಬರು ಪ್ರತಿನಿಧಿಗಳು, ನ.ಪಂ, ತಾ.ಪಂ, ಜಿ.ಪಂ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News