ಕೊರೋನ ಚಿಕಿತ್ಸಾ ತ್ಯಾಜ್ಯ ವಿಲೇವಾರಿಗೆ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಬೆಂಗಳೂರು ವಿದ್ಯಾರ್ಥಿಗಳು

Update: 2020-07-11 13:09 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.11: ಕೊರೋನ ಚಿಕಿತ್ಸೆಗೆ ಉಪಯೋಗಿಸಿದ ಪಿಪಿಇ ಕಿಟ್ ಹಾಗೂ ಮತ್ತಿತರೆ ತ್ಯಾಜ್ಯಗಳ ವಿಲೇವಾರಿ ಸಮಸ್ಯೆ ಬಗೆಹರಿಸುವ ಸಂಬಂಧ ಬೆಂಗಳೂರು ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಕೊರೋನ ಸೋಂಕಿತರ ಚಿಕಿತ್ಸೆಗಾಗಿ ಬಳಕೆ ಮಾಡುವ ಪಿಪಿಇ ಕಿಟ್, ಸಿರಿಂಜ್, ಟ್ಯೂಬ್ ಸೇರಿ ಇತರೆ ತ್ಯಾಜ್ಯ ವಿಲೇವಾರಿ ಮಾಡುವುದೇ ಸಮಸ್ಯೆಯಾಗುವ ಸಾಧ್ಯತೆ ಅಧಿಕವಾಗುತ್ತಿದೆ. ಪ್ರತಿದಿನ ಭಾರೀ ಪ್ರಮಾಣದ ತ್ಯಾಜ್ಯ ಸಂಗ್ರಹವಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದ್ದಾರೆ. ಇದು ಚಿಕಿತ್ಸೆಯಲ್ಲಿ ಬಳಸಿದ ಪಿಪಿಇ ಸೇರಿ ಪ್ಲಾಸ್ಟಿಕ್ ಉಪಕರಣಗಳ ತ್ಯಾಜ್ಯ ವಿಲೇವಾರಿಗೆ ಆಶಾಕಿರಣ ಎನಿಸಿದೆ. ಇದಕ್ಕೆ 'ಪಿಪಿಇ ರಿಸೈಕ್ಲಿಂಗ್ ಮೆಷಿನ್' ಎಂದು ಹೆಸರಿಸಲಾಗಿದೆ.

ವಿದ್ಯಾರ್ಥಿಗಳು ಈ ತಂತ್ರಜ್ಞಾನದ ಆಧಾರವನ್ನಾಗಿಸಿ ಪಿಪಿಇ ಕಿಟ್‍ಗಳನ್ನು ಒಳಗೊಂಡು ಎಲ್ಲ ರೀತಿಯ ವೈದ್ಯಕೀಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಕರಗಿಸಿ ಪುಟ್ಟ ಪುಟ್ಟ ಬಿಲ್ಲೆಗಳನ್ನಾಗಿಸಲಾಗಿದೆ. ಈ ಕ್ರಿಯೆಯಲ್ಲಿ ಎಲ್ಲ ಬಗೆಯ ವೈರಸ್‍ಗಳು ನಾಶವಾಗುತ್ತವೆ. ಈ ಸಾಧನವನ್ನು ಆಸ್ಪತ್ರೆ ಹಾಗೂ ಇತರೆ ಕಡೆಗಳಲ್ಲಿಯೂ ಸುಲಭವಾಗಿ ನಿಭಾಯಿಸಬಹುದು ಎಂದು ತಂತ್ರಜ್ಞಾನ ರೂಪಿಸಿದ ವಿದ್ಯಾರ್ಥಿ ಆಶಿಕ್ ನುಡಿದಿದ್ದಾರೆ.

ಆಶಿಕ್, ಪ್ರವೀಣ್ ಮೌನಭಾರ್ಗವ್ ಮತ್ತು ಶೀತಲ್ ಬಳಕ್ಕುರಾಯ ಅವರು ಪ್ರಾಧ್ಯಾಪಕ ಡಾ.ಬಿ.ಇ.ನವೀನ್ ಮಾರ್ಗದರ್ಶನದಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News