ಹಾಸಿಗೆ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಡಿಸಿಎಂ ಡಾ.ಅಶ್ವಥ್ ನಾರಾಯಣ

Update: 2020-07-11 17:12 GMT

ಬೆಂಗಳೂರು, ಜು. 11: ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಪೈಕಿ ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್-19 ಸೋಂಕಿತರಿಗಾಗಿ ಸರಕಾರದ ವಶಕ್ಕೆ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ನಗರದ ಕೋವಿಡ್ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಇಂದಿಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಬೆಂಗಳೂರಿನ ಪಶ್ಚಿಮ ವಲಯದ ಶಾಸಕರು, ಬಿಬಿಎಂಪಿ ಸದಸ್ಯರು ಮತ್ತು ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲ ಖಾಸಗಿ ಆಸ್ಪತ್ರೆಗಳು ಸರಕಾರದ ಸೂಚನೆಗಳನ್ನು ಪಾಲಿಸದಿರುವುದು ಮತ್ತು ಕೋವಿಡ್-19 ಸೋಂಕಿನ ಬಗ್ಗೆ ನಿರ್ಲಕ್ಷ್ಯ ತಾಳಿರುವುದು ಕಂಡು ಬಂದಿದೆ. ಅಂತಹ ಆಸ್ಪತ್ರೆಗಳು ಕಾನೂನು ಕ್ರಮ ಎದುರಿಸುವುದು ಖಚಿತ ಎಂದು ಗುಡುಗಿದರು.

ಚಿಕಿತ್ಸೆ ನೀಡಬೇಕು: ಕೋವಿಡ್-19 ಹಾಗೂ ಕೋವಿಡ್-19 ಹೊರತಾದ ರೋಗಿಗಳಿಗೆ ಸಮಾನ ಮಹತ್ವ ಕೊಟ್ಟು ಚಿಕಿತ್ಸೆ ನೀಡಬೇಕು. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಕೂಡಲೇ ಅವರು ಎಚ್ಚೆತ್ತುಕೊಳ್ಳದಿದ್ದರೆ ಅಂತಹ ಆಸ್ಪತ್ರೆಗಳ ವಿರುದ್ಧ ಮುಲಾಜಿಲ್ಲದೆ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಕೋವಿಡ್ ಸೋಂಕು ಅನಿರೀಕ್ಷಿತವಾಗಿ ರಾಜ್ಯದ ಮೇಲೆರಗಿದ ಸಾಂಕ್ರಾಮಿಕ ಪೀಡೆ. ಇದನ್ನು ಯುದ್ಧೋಪಾದಿಯಲ್ಲಿ ಎದುರಿಸಲು ಪ್ರತಿಯೊಬ್ಬರು ಸರಕಾರದ ಜತೆ ಕೈಜೋಡಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಸರಿಯಲ್ಲ. ಜನರಿಗಿಂತ ಯಾರೂ ಹೆಚ್ಚಲ್ಲ ಎಂಬ ಸಂಗತಿಯನ್ನು ಮರೆಯಬಾರದು. ಎಲ್ಲರೂ ಯೋಧರಂತೆ ಕೆಲಸ ಮಾಡಬೇಕು ಎಂದು ಖಾಸಗಿ ಆಸ್ಪತ್ರೆಗಳ ಮಾಲಕರಿಗೆ ಅಶ್ವಥ್ ನಾರಾಯಣ ಕಿವಿಮಾತು ಹೇಳಿದರು.

ಕಾಲ್ ಸೆಂಟರ್: ಪಶ್ಚಿಮ ವಿಭಾಗದಲ್ಲಿ ಕೋವಿಡ್ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಹಾಗೂ ಕೋವಿಡ್ ಕೇರ್ ಕೇಂದ್ರಗಳು, ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ನಡುವೆ ನೇರ ಸಂಪರ್ಕ ಸೇತುವೆಯಾಗಿ ದಿನದ 24 ಗಂಟೆ ಕೆಲಸ ಮಾಡುವ ಕಾಲ್ ಸೆಂಟರೊಂದನ್ನು ತೆರೆಯಲಾಗುತ್ತಿದೆ ಎಂದ ಅವರು, ಇದರಿಂದ ಈ ವಿಭಾಗದ ಎಲ್ಲ ಮಾಹಿತಿ ಅಂಗೈನಲ್ಲೇ ಇರುತ್ತದೆ. ಸೋಂಕಿತರ ಪರೀಕ್ಷೆ, ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವುದು, ಕ್ವಾರಂಟೈನ್, ಹೋಮ್ ಕೇರ್ ಸೇರಿ ಎಲ್ಲ ಸಂಗತಿಗಳ ಬಗ್ಗೆ ಇಲ್ಲಿ ಮಾಹಿತಿ ಲಭ್ಯವಾಗುತ್ತದೆ ಎಂದರು.

ಲಾಕ್‍ಡೌನ್ ಚರ್ಚೆ ಇಲ್ಲ: ಸಭೆಯಲ್ಲಿ ಲಾಕ್‍ಡೌನ್ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಬದಲಿಗೆ ಇರುವ ವ್ಯವಸ್ಥೆಯನ್ನೇ ಮತ್ತಷ್ಟು ಉತ್ತಮಪಡಿಸುವುದು, ಜನರಿಗೆ ಹೆಚ್ಚು ಅನುಕೂಲ ಮಾಡಿಕೊಡುವುದು ಹೇಗೆ ಎಂಬ ಬಗ್ಗೆ ಮಾತುಕತೆ ನಡೆಯಿತು. ಆ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವ ಕೆ.ಗೋಪಾಲಯ್ಯ ಸೇರಿ ಎಲ್ಲ ಶಾಸಕರು ಮತ್ತು ಪಾಲಿಕೆ ಸದಸ್ಯರು ಸಲಹೆಗಳನ್ನು ನೀಡಿದರು.

ವೀಕೆಂಡ್ ಲಾಕ್‍ಡೌನ್ ಬಗ್ಗೆಯೂ ಚರ್ಚೆ ಆಗಲಿಲ್ಲ. ಈಗಲೂ ಶನಿವಾರ ಸಂಜೆಯಿಂದ ಸೋಮವಾರ ಮುಂಜಾನೆವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಜತೆಗೆ, ರವಿವಾರ ಸಂಪೂರ್ಣ ಲಾಕ್‍ಡೌನ್ ಇದೆ. ಮುಂದಿನ ದಿನಗಳ ಸ್ಥಿತಿಗತಿ ಹಾಗೂ ಸೋಂಕಿತರ ಪ್ರಮಾಣ ನೋಡಿಕೊಂಡು ಆ ಬಗ್ಗೆ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆಂದ ಅವರು, ಸೋಂಕು ನಿವಾರಣೆಗೆ ಲಾಕ್‍ಡೌನ್ ಉತ್ತಮ ಪರಿಹಾರ ಎನ್ನುವುದರಲ್ಲಿ ಅನುಮಾನ ಇಲ್ಲ. ಆದರೆ ಅನಂತರದ ಸವಾಲುಗಳು ಜಾಸ್ತಿ. ಜೀವದ ಜತೆಗೆ ಜೀವನೋಪಾಯವೂ ಮುಖ್ಯ. ಸದ್ಯಕ್ಕೆ ವೈರಸ್ ತೀವ್ರತೆ ಕಡಿಮೆಯಾಗಿದೆ. ಅದನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ ಎಂದರು

ಅಭಿವೃದ್ಧಿ ಹಣ ಬಳಕೆ: ಕೋವಿಡ್ ಹಿನ್ನಲೆಯಲ್ಲಿ ಎಲ್ಲೂ ಹಣಕಾಸು ಕೊರತೆ ಆಗದಂತೆ ಎಚ್ಚರ ವಹಿಸಲಾಗಿದೆ. ಅಕಸ್ಮಾತ್ ಕೊರತೆ ಉಂಟಾದರೆ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಾದ ಹಣವನ್ನು ಬಳಸುವಂತೆ ಎಲ್ಲ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನರಿಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಸರಕಾರ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಸಚಿವ ಗೋಪಾಲಯ್ಯ, ಶಾಸಕ ಝಮೀರ್ ಅಹ್ಮದ್, ಐಎಎಸ್ ಅಧಿಕಾರಿ ಹಾಗೂ ಪಶ್ಚಿಮ ವಲಯದ ಕೋವಿಡ್ ಉಸ್ತುವಾರಿ ಉಜ್ವಲ್ ಕುಮಾರ್ ಘೋಷ್, ಪಾಲಿಕೆಯ ವಿಶೇಷ ಆಯುಕ್ತ ಬಸವರಾಜು, ಜಂಟಿ ಆಯುಕ್ತ ಚಿದಾನಂದ ಸಭೆಯಲ್ಲಿ ಹಾಜರಿದ್ದರು.

ಎಲ್ಲ ವಾರ್ಡುಗಳಲ್ಲಿ ತುರ್ತು ಕ್ಲಿನಿಕ್

ಕೋವಿಡ್ ಸೋಂಕು ರಹಿತ ರೋಗಿಗಳಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡಬೇಕೆಂದು ಎಲ್ಲ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಪ್ರತಿ ಉಪವಿಭಾಗದಲ್ಲಿಯೂ ಬಿಬಿಎಂಪಿ ಆಸ್ಪತ್ರೆಗಳು ಹಾಗೂ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದರ ಜತೆಗೆ ಎಲ್ಲ ವಾರ್ಡುಗಳಲ್ಲಿ ಫೀವರ್ ಕ್ಲಿನಿಕ್‍ಗಳಿಗೆ ಪರ್ಯಾಯವಾಗಿ ತುರ್ತು ಕ್ಲಿನಿಕ್‍ಗಳನ್ನು ತೆರೆಯಲಾಗುತ್ತಿದೆ'

-ಡಾ.ಅಶ್ವಥ್ ನಾರಾಯಣ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News