ಬೆಂಗಳೂರು: ಒಂದೇ ದಿನ ಕೊರೋನ ಸೋಂಕಿಗೆ 23 ಮಂದಿ ಮೃತ, 1,533 ಪ್ರಕರಣಗಳು ದೃಢ

Update: 2020-07-11 17:21 GMT

ಬೆಂಗಳೂರು, ಜು.11: ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಶನಿವಾರ ಒಂದೆ ದಿನಕ್ಕೆ 1,533 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಸೋಂಕಿಗೆ 23 ಜನರು ಮೃತಪಟ್ಟಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 16,862ಕ್ಕೆ ಏರಿಕೆಯಾಗಿದ್ದು, 322 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 12,793 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 229 ಜನರು ಸೋಂಕಿಗೆ ಬಲಿಯಾಗಿದ್ದು, 404 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 22,099 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

ಕೆಪಿಸಿಸಿ ಕಚೇರಿ ಸೀಲ್ ಡೌನ್

ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಓಡಾಡಿದ ಶಾಸಕರಿಗೆ ಮತ್ತು ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಚೇರಿಯನ್ನು ಬಿಬಿಎಂಪಿ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.

ಕೆಪಿಸಿಸಿಯ ಹಳೆ ಮತ್ತು ಹೊಸ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಧಿಕಾರಿಗಳು ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛಗೊಳಿಸಿದ್ದಾರೆ. ಕಾಂಗ್ರೆಸ್‍ನ ಐವರು ಶಾಸಕರಿಗೆ ಈಗಾಗಲೇ ಸೋಂಕು ದೃಢಪಟ್ಟಿದೆ. ಅಲ್ಲದೆ, ಕೆಪಿಸಿಸಿ ಕಚೇರಿಯ ನಾಲ್ವರು ಸಿಬ್ಬಂದಿಗೂ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

ರಸ್ತೆಯಲ್ಲಿ ಬಿದ್ದಿವೆ ಪಿಪಿಇ ಕಿಟ್

ಕೆ.ಆರ್.ಪುರಂನ ರಸ್ತೆ ಬದಿಯಲ್ಲಿ ಪಿಪಿಇ ಕಿಟ್ ಹಾಗೂ ವೈದ್ಯಕೀಯ ತ್ಯಾಜ್ಯವನ್ನು ಬಿಸಾಡಲಾಗಿದೆ. ಅಲ್ಲದೇ, ಕೆರೆಯ ಬಳಿಯೂ ಸಹ ಬಳಸಿದ ಪಿಪಿಇ ಕಿಟ್‍ಗಳು ಪತ್ತೆಯಾಗಿದೆ ಎನ್ನಲಾಗಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳದ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ ಆ್ಯಂಡ್ ಟಿಯ 85 ಕಾರ್ಮಿಕರಿಗೆ ಕೊರೋನ

ಬಾಗಲೂರಿನ ಕಣ್ಣೂರು ಬಳಿಯಿರುವ ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 85 ಕಾರ್ಮಿಕರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸೊಂಕಿತರನ್ನು ಜಿಕೆವಿಕೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಸೊಂಕಿತರ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚುವ ಕೆಲಸ ಆರಂಭವಾಗಿದ್ದು. ಸದ್ಯಕ್ಕೆ ಎಲ್ ಆ್ಯಂಡ್ ಟಿ ಕಂಪನಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಉಳಿದ ಕಾರ್ಮಿಕರು ಕೆಲ ದಿನಗಳವರೆಗೆ ಹೋಂ ಕ್ವಾರಂಟೈನಲ್ಲಿರಬೇಕೆಂದು ಕಂಪನಿಯು ಕಾರ್ಮಿಕರಲ್ಲಿ ಮನವಿ ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News