ಸಿಲಿಕಾನ್ ಸಿಟಿ ತೊರೆದ ಲಕ್ಷಾಂತರ ಜನರು: ಆರ್ಥಿಕತೆ ಕುಸಿತದ ಕಡೆಗೆ ಬೆಂಗಳೂರು

Update: 2020-07-12 12:48 GMT

ಬೆಂಗಳೂರು, ಜು.12: ರಾಜ್ಯದ ರಾಜಧಾನಿ, ಶಕ್ತಿ ಕೇಂದ್ರವಾದ ಬೆಂಗಳೂರು ನಗರದಲ್ಲಿ ದಿನನಿತ್ಯವೂ ಗರಿಷ್ಠ ಪ್ರಮಾಣದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನೆಲೆಸಿದ್ದ ಸಾವಿರಾರು ಜನರು ಸಿಟಿಯನ್ನು ತೊರೆದು ತಮ್ಮ ಸ್ವಂತ ಊರುಗಳತ್ತ ಮುಖ ಮಾಡಿದ್ದು, ಅದರ ಪ್ರಮಾಣ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ಅಧಿಕ ಸಂಖ್ಯೆಯ ಜನರು ನಗರವನ್ನು ತೊರೆಯುತ್ತಿರುವುದರ ಪರಿಣಾಮ ರಾಜ್ಯದ ಆರ್ಥಿಕ ಪ್ರಗತಿಯ ಮೇಲೆ ಗಾಢವಾದ ಪರಿಣಾಮ ಬೀರುವ ಸಾಧ್ಯತೆಯೂ ಹೆಚ್ಚಾಗತೊಡಗಿದೆ. ರಾಜ್ಯದ ಜಿಡಿಪಿಯಲ್ಲಿ ಬೆಂಗಳೂರು ನಗರದ ಪಾಲು ಶೇ.60 ರಷ್ಟಿದೆ ಎಂದು ಅಂದಾಜಿಸಲಾಗಿದೆ.

ದೇಶದ ಐಟಿ-ಬಿಟಿ ಕ್ಷೇತ್ರದಲ್ಲಿನ ಉತ್ಪಾದನೆ ಶೇ.30 ಕ್ಕೂ ಅಧಿಕ ಪಾಲು ಬೆಂಗಳೂರು ನಗರದಲ್ಲಿ ನಡೆಯುತ್ತದೆ. ಅಲ್ಲದೆ, ಆಟೋ ಮೊಬೈಲ್ಸ್ ಸೇರಿ ಮತ್ತಿತರೆ ಉತ್ಪನ್ನಗಳ ಉತ್ಪಾದನೆಯಲ್ಲಿಯೂ ಬೆಂಗಳೂರು ತನ್ನದೇ ಪಾಲನ್ನು ಹೊಂದಿದೆ. ಆದರೆ, ಕೊರೋನ ಸೋಂಕಿನ ಭೀತಿಯಿಂದಾಗಿ ಇಲ್ಲಿದ್ದವರೆಲ್ಲರೂ ತಮ್ಮ ಊರುಗಳಗಳ ಕಡೆಗೆ ಹೊರಟಿದ್ದಾರೆ. ಇದರಿಂದ ನಗರದಲ್ಲಿ ಉತ್ಪಾದನೆ ಪ್ರಮಾಣ ಕುಸಿದು, ಆರ್ಥಿಕತೆಯೂ ಕುಸಿಯುವ ಸಾಧ್ಯತೆ ಗಾಢವಾಗಿದೆ.

ಜಿಡಿಪಿಯಲ್ಲಿ ಬೆಂಗಳೂರಿನ ಪಾಲು: ರಾಜ್ಯ ಸರಕಾರ ಕೆಲವು ತಿಂಗಳು ಹಿಂದೆಯಷ್ಟೇ ವರ್ಷದ ಆಯವ್ಯಯವನ್ನು ಮಂಡಿಸಿದೆ ಹಾಗೂ 2018-19 ನೇ ಸಾಲಿನಲ್ಲಿ ರಾಜ್ಯದ ಜಿಡಿಪಿ ಗಾತ್ರ 15 ಲಕ್ಷ ಕೋಟಿ ರೂ. ಗೂ ಹೆಚ್ಚಿದೆ. ಇವುಗಳನ್ನು ಗಮನಿಸಿದರೆ ರಾಜ್ಯದ ಒಟ್ಟಾರೆ ಜಿಡಿಪಿಯಲ್ಲಿ ಬೆಂಗಳೂರು ನಗರದ ಪಾಲು ಶೇ.60ರಷ್ಟಿದೆ. ಅದರಲ್ಲಿಯೂ ಮುಖ್ಯವಾಗಿ ಐಟಿ-ಬಿಟಿ, ಕೈಗಾರಿಕೆ, ಏರೋಸ್ಪೇಸ್ ಹಾಗೂ ಶಿಕ್ಷಣ ವಲಯದಿಂದ ಆದಾಯ ಅಧಿಕವಾಗಿದೆ.

ಕೊರೋನ ಎಫೆಕ್ಟ್ ನಿಂದ ಕುಸಿತ: ಎಲ್ಲೆಡೆ ಕೊರೋನ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಮಾರ್ಚ್, ಎಪ್ರಿಲ್ ಹಾಗೂ ಮೇ ಮೂರು ತಿಂಗಳ ಕಾಲ ಲಾಕ್‍ಡೌನ್‍ಅನ್ನು ಘೋಷಿಸಿದರ ಪರಿಣಾಮದಿಂದಾಗಿ ಈಗಾಗಲೇ ಬೆಂಗಳೂರಿನ ಆದಾಯ ಕುಸಿದಿದೆ. ಇದೀಗ ಬೆಂಗಳೂರಿನಲ್ಲಿದ್ದ ಜನತೆ ತಮ್ಮ ಊರುಗಳತ್ತ ವಲಸೆ ಹೊರಟಿರುವುದರ ಪರಿಣಾಮ ಮತ್ತಷ್ಟು ಬಿಗಡಾಯಿಸಲಿದೆ ಎಂದು ಅಂದಾಜಿಸಲಾಗಿದೆ.

ನಗರ ಬಿಟ್ಟ ಲಕ್ಷಾಂತರ ಜನ: ಲಾಕ್‍ಡೌನ್ ಅವಧಿಯಲ್ಲಿ ಅಂದಾಜು ಐದು ಲಕ್ಷಕ್ಕೂ ಅಧಿಕ ಜನರು ಬೆಂಗಳೂರು ನಗರವನ್ನು ತೊರೆದಿದ್ದರು. ಅನಂತರ ಲಾಕ್‍ಡೌನ್ ಸಡಿಲಿಕೆಯಾದ ಬಳಿಕ ತಂಡೋಪತಂಡಗಳಾಗಿ ಜನರು ಬೆಂಗಳೂರು ನಗರವನ್ನು ತೊರೆದು ತಮ್ಮತಮ್ಮ ಗ್ರಾಮಗಳತ್ತ ಪ್ರಯಾಣಿಸಿದ್ದರು. ಅದರಲ್ಲಿ ಶೇ.50 ರಷ್ಟು ವಲಸೆ ಕಾರ್ಮಿಕರೇ ಆಗಿದ್ದರು. ಇದೀಗ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದ್ದರಿಂದ ಭಯಭೀತಗೊಂಡಿರುವ ಜನರು ನಗರದಿಂದ ಹೊರನಡೆಯುತ್ತಿದ್ದು, ಅಂದಾಜು ಇದುವರೆಗೂ ಎಲ್ಲ ಸೇರಿ 20 ಲಕ್ಷದಷ್ಟು ಜನರು ನಗರದಿಂದ ನಿರ್ಗಮಿಸಿದ್ದಾರೆ. ಅಲ್ಲದೆ, ಮುಂದೆಯೂ ದಿನಕ್ಕೆ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News