ಪೌರಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಎಐಎಂಎಸ್ಸೆಸ್ ಒತ್ತಾಯ

Update: 2020-07-12 12:50 GMT

ಬೆಂಗಳೂರು, ಜು.12: ರಾಜ್ಯ ಸರಕಾರ ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಈಡಾಗಿರುವ ಪೌರಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಎಐಎಂಎಸ್ಸೆಸ್ ಆಗ್ರಹಿಸಿದೆ.

ಬೆಂಗಳೂರು ನಗರದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿದ್ದು, ಕಂಟೈನ್‍ಮೆಂಟ್ ಪ್ರದೇಶಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಪೌರಕಾರ್ಮಿಕರು ಕೋವಿಡ್-19 ಸೋಂಕು ತಡೆಗಟ್ಟುವಲ್ಲಿ, ನಗರದ ಸ್ವಚ್ಛತಾ ಕಾರ್ಯದಲ್ಲಿ ಕೊರೋನ ವಾರಿಯರ್ಸ್‍ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಇವರಿಗೆ ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ಸರಕಾರ ನಿರ್ಲಕ್ಷಿಸುತ್ತಿದೆ.

ಕೋವಿಡ್ ಸೋಂಕಿತರು ಹಾಗೂ ಜನಸಾಮಾನ್ಯರು ಉಪಯೋಗಿಸಿರುವ ಮಾಸ್ಕ್ ವಿಲೇವಾರಿ, ಆಸ್ಪತ್ರೆಯ ತ್ಯಾಜ್ಯ ವಿಂಗಡಣೆ, ಕಂಟೈನ್‍ಮೆಂಟ್ ಪ್ರದೇಶಗಳ ಸ್ವಚ್ಛತೆ ಹೀಗೆ ಹತ್ತು ಹಲವಾರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಇವರಿಗೆ ಅಗತ್ಯವಾದ ಸುರಕ್ಷತಾ ಸಾಮಗ್ರಿಗಳಿಲ್ಲ, ಜೀವನ ಭದ್ರತೆಯೂ ಇಲ್ಲ. ಪ್ರತಿನಿತ್ಯವೂ ಪೌರಕಾರ್ಮಿಕರು ತಾವು ಹಾಗೂ ತಮ್ಮ ಕುಟುಂಬದ ಜೀವವನ್ನು ಕೈಯಲ್ಲಿ ಹಿಡಿದು ಕೆಲಸ ನಿರ್ವಹಿಸುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರು ದಕ್ಷಿಣ ಹಾಗೂ ಪಶ್ಚಿಮ ವಲಯದಲ್ಲಿ 94 ಪೌರಕಾರ್ಮಿಕರಿಗೆ ಕೋವಿಡ್ ಪರೀಕ್ಷಿಸಿದಾಗ ಇವರಲ್ಲಿ 23 ಕಾರ್ಮಿಕರಿಗೆ ಪಾಸಿಟಿವ್ ಬಂದು ಸೋಂಕು ದೃಢಪಟ್ಟಿದೆ. ಇದು ಆತಂಕದ ಬೆಳವಣಿಗೆಯಾಗಿದ್ದು, ಕೂಡಲೇ ರಾಜ್ಯ ಸರಕಾರ ಇವರಿಗೆ ಸುರಕ್ಷತಾ ಸಾಮಗ್ರಿಗಳಾದ ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಮತ್ತು ಸ್ಯಾನಿಟೈಸರ್ ಇತ್ಯಾದಿಗಳನ್ನು ಸಮರ್ಪಕವಾಗಿ ನೀಡಬೇಕು.

ಪೌರಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಬೇಕು. ಕೋವಿಡ್ ಪಾಸಿಟೀವ್ ಬಂದಿರುವವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಮತ್ತು ಚಿಕಿತ್ಸೆ ಅವಧಿಯಲ್ಲಿ ಸಂಪೂರ್ಣ ವೇತನವನ್ನು ನೀಡಬೇಕು. ಪೌರಕಾರ್ಮಿಕರಿಗೆ ದುಡಿಯುವ ಸ್ಥಳಗಳಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಆಹಾರ, ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಯನ್ನು ಒದಗಿಸಬೇಕೆಂದು ಪ್ರಕಟನೆಯ ಮೂಲಕ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News