ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಎಸೆಸೆಲ್ಸಿ ಮೌಲ್ಯಮಾಪನ ಮುಂದೂಡಿಕೆ: ಸಚಿವ ಸುರೇಶ್ ಕುಮಾರ್

Update: 2020-07-12 18:29 GMT

ಬೆಂಗಳೂರು, ಜು.12: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಹೊರತು ಪಡಿಸಿ ರಾಜ್ಯಾದ್ಯಂತ ಜು.13ರಿಂದ ಎಸೆಸೆಲ್ಸಿ ಮೌಲ್ಯಮಾಪನ ಪ್ರಾರಂಭವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜು.14ರಿಂದ 22ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಈ ಎರಡು ಜಿಲ್ಲೆಗಳಲಿ ಮಾತ್ರ ಮೌಲ್ಯಮಾಪನ ಮುಂದೂಡಲಾಗಿದೆ. ಉಳಿದಂತೆ ರಾಜ್ಯಾದ್ಯಂತ ನಾಳೆಯಿಂದಲೇ(ಜು.13) ಪ್ರಾರಂಭವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೌಲ್ಯಮಾಪನದ ಸಿದ್ಧತೆಗಳು: ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಒಟ್ಟಾರೆ 228 ಮೌಲ್ಯಮಾಪನ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿ 109 ಕಂಪ್ಯೂಟರ್ ಯೂನಿಟ್‍ಗಳನ್ನು ರಚಿಸಲಾಗಿದೆ. ಮೌಲ್ಯಮಾಪನಕ್ಕೆ ವಿವಿಧ ವಿಷಯವಾರು 71,154 ಮೌಲ್ಯಮಾಪಕರು ಹಾಜರಾಗಲು ನೇಮಕಾತಿ ಆದೇಶವನ್ನು ನೀಡಲಾಗಿದೆ.

-ಪ್ರತಿ ಮೌಲ್ಯಮಾಪನ ಕೇಂದ್ರದ 200 ಮೀಟರ್ ಸುತ್ತಾ ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳಿಂದ ಘೋಷಿಸಲಾಗಿದೆ. ಮೌಲ್ಯಮಾಪನ ಕಾರ್ಯ ಪ್ರಾರಂಭವಾಗುವ ಮೊದಲು ಸೋಂಕು ನಿವಾರಕ ದ್ರಾವಣದಿಂದ ಸ್ಯಾನಿಟೈಸ್ ಮಾಡಲು ಕ್ರಮ ವಹಿಸಲಾಗಿದೆ. ಮೌಲ್ಯಮಾಪನ ಮುಗಿದ ಬಳಿಕವೂ ಕೊಠಡಿಗಳು, ಪೀಠೋಪಕರಣಗಳನ್ನು ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದೆ.

-ಮೌಲ್ಯಮಾಪಕರು ತಮಗೆ ನಿಗದಿಪಡಿಸಿದ ಕೊಠಡಿಗಳಿಗೆ ದೈಹಿಕ ಅಂತರ ಕಾಯ್ದುಕೊಂಡು ತೆರಳಬೇಕು. ಯಾವ ಸಂದರ್ಭದಲ್ಲೂ ಗುಂಪುಗೂಡುವಿಕೆಗೆ ಅವಕಾಶ ಇರುವುದಿಲ್ಲ. ಪ್ರತಿ ಮೌಲ್ಯಮಾಪಕರು ನೀರಿ ಬಾಟಲ್, ವೈಯಕ್ತಿಕ ಸ್ಯಾನಿಟೈಸರ್, ಮಾಸ್ಕ್, ಛತ್ರಿ ಹಾಗೂ ಆಹಾರದ ಡಬ್ಬಿಯನ್ನು ಕಡ್ಡಾಯವಾಗಿ ತರಬೇಕು. ಆದಾಗ್ಯು ಕುಡಿಯುವ ನೀರಿನ ವ್ಯವಸ್ಥೆಯನ್ನು ಕೇಂದ್ರದಲ್ಲಿ ಮಾಡಲಾಗಿದೆ.

-ಮೌಲ್ಯಮಾಪನ ಕೇಂದ್ರಗಳಿಗೆ ಪ್ರವೇಶಿಸುವ ಎಲ್ಲ ಶಿಕ್ಷಕರು, ಅಧಿಕಾರಿಗಳು, ಸಿಬ್ಬಂದಿಗಳನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣಾ ಕೌಂಟರ್‍ನಲ್ಲಿ ತಪಾಸಣೆ ಒಳಪಡಿಸಲಾಗುತ್ತದೆ. ಈ ವೇಳೆ ಯಾರಿಗಾದರೂ ನಿಗದಿ ತಾಪಕ್ಕಿಂತ ಹೆಚ್ಚು ಕಂಡುಬಂದಲ್ಲಿ ಆರೋಗ್ಯ ಸಿಬ್ಬಂದಿಯು ಜಂಟಿ ಮುಖ್ಯ ಮೌಲ್ಯಮಾಪಕರ ಗಮನಕ್ಕೆ ತರಬೇಕು.

-ಕೋವಿಡ್-19 ಪಾಸಿಟಿವ್, ಕ್ವಾರಂಟೈನ್‍ಗೆ ಒಳಗಾಗಿದ್ದರೆ, ತಪಾಸಣೆಗೆ ಒಳಪಟ್ಟು ವರದಿಯ ನಿರೀಕ್ಷೆಯಲ್ಲಿರುವ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ಅನುಮತಿಸುವುದಿಲ್ಲ.

-ಒಂದು ಡೆಸ್ಕ್ ನಲ್ಲಿ ಇಬ್ಬರು ಶಿಕ್ಷಕರು ಮಾತ್ರ ಕುಳಿತುಕೊಳ್ಳಲು ಕ್ರಮ ವಹಿಸಲಾಗಿದೆ.

-ಒಂದು ಡೆಸ್ಕ್ ನಿಂದ ಮತ್ತೊಂದು ಡೆಸ್ಕ್ ಗೆ ಕನಿಷ್ಟ ಮೂರು ಅಡಿ ಅಂತರ ಇರುವಂತೆ ಜಾಗ್ರತೆ ವಹಿಸಲಾಗಿದೆ

-ಪ್ರತಿ ಮೌಲ್ಯಮಾಪಕರು ನೀರಿನ ಬಾಟಲ್, ಸ್ಯಾನಿಟೈಸರ್, ಮಾಸ್ಕ್ ಹಾಗೂ ಊಟದ ಡಬ್ಬಿಗಳನ್ನು ತರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News