ಬೆಂಗಳೂರಿನಿಂದ ಊರಿಗೆ ಹೋಗುವವರು ಸೋಮವಾರವೇ ಹೊರಡಿ: ಸಚಿವ ಆರ್.ಅಶೋಕ್

Update: 2020-07-12 15:20 GMT

ಬೆಂಗಳೂರು, ಜು. 12: ಮಾರಕ ಕೊರೋನ ಸೋಂಕು ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜು.14ರ ರಾತ್ರಿ 8ರಿಂದ ಒಂದು ವಾರ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್‍ಡೌನ್ ಸಂಬಂಧಿಸಿದಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಇಂದು ಮಾರ್ಗಸೂಚಿ ಬಿಡುಗಡೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ರವಿವಾರ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಅಧಿಕಾರಿಗಳು ಮತ್ತು ಸಚಿವರೊಂದಿಗಿನ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೇರೆ ಊರುಗಳಿಗೆ ಹೋಗುವವರಿಗೆ ಅನುಕೂಲ ಆಗಲಿ ಎಂದು ಸೋಮವಾರ(ಜು.13) ಬಿಡುವು ನೀಡಲಾಗಿದ್ದು, ಅಗತ್ಯ ವಸ್ತುಗಳ ಖರೀದಿಸಲು ಜನರಿಗೆ ತೊಂದರೆ ಆಗದಂತೆ ಸರಕಾರ ಕ್ರಮ ವಹಿಸಿದೆ ಎಂದರು.

ಲಾಕ್‍ಡೌನ್ ಅವಧಿಯಲ್ಲಿ ವೈದ್ಯಕೀಯ ಉಪಕರಣಗಳು ಸೇರಿದಂತೆ ಅದಕ್ಕೆ ಸಂಬಂಧಿಸಿದ ಕಾರ್ಖಾನೆಗಳಿಗೆ ವಿನಾಯಿತಿ ನೀಡಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎಂದ ಸಚಿವ ಅಶೋಕ್, ಮಂಗಳವಾರ(ಜು.14) ರಾತ್ರಿ 8ಗಂಟೆಯಿಂದ ಲಾಕ್‍ಡೌನ್ ಜಾರಿಗೆ ಬರಲಿದೆ. ಕೊರೋನ ಸೋಂಕು ಹರಡುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಂಡಿದ್ದು, ಲಾಕ್‍ಡೌನ್ ವಿಸ್ತರಣೆ ಬಗ್ಗೆ ತಜ್ಞರ ವರದಿ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕೊರೋನ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇದೆ. ಆದರೆ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಹಾಸಿಗೆಗಳ ಸಮಸ್ಯೆ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಸರಿಪಡಿಸಿದರೆ ಸಮಸ್ಯೆ ಇರುವುದಿಲ್ಲ ಎಂದ ಅಶೋಕ್, ಕೊರೋನ ಸೋಂಕು ನಿಯಂತ್ರಣ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳು ಸಹಕಾರ ನೀಡಬೇಕು ಎಂದು ಇದೇ ವೇಳೆ ಮನವಿ ಮಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿಂದು ನಡೆಯಲಿರುವ ಜಿಲ್ಲಾಧಿಕಾರಿಗಳೊಂದಿಗಿನ ವಿಡಿಯೋ ಸಂವಾದಲ್ಲಿ ಲಾಕ್‍ಡೌನ್ ಇತರೆ ಜಿಲ್ಲೆಗಳಿಗೂ ವಿಸ್ತರಣೆ ಸಂಬಂಧ ಎಲ್ಲ ಅಧಿಕಾರಿಗಳ ಅಭಿಪ್ರಾಯ ಪಡೆದು ಸಿಎಂ ತೀರ್ಮಾನ ಮಾಡಲಿದ್ದಾರೆ ಎಂದ ಅವರು, ಸೋಂಕು ದೃಢಪಟ್ಟ ಜಿಲ್ಲೆಗಳಲ್ಲಿನ ಪ್ರದೇಶಗಳನ್ನಷ್ಟೇ ಸೀಲ್‍ಡೌನ್ ಮಾಡಲು ಸೂಚನೆ ನೀಡಿದೆ ಎಂದರು.

ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರು ಸೇರಿ ಅಗತ್ಯ ಸೇವಾ ಸಿಬ್ಬಂದಿ ಹೊರತುಪಡಿಸಿ ಉಳಿದವರು ಮನೆಯಲ್ಲೇ ಇರುವುದು ಒಳ್ಳೆಯದು. ಇದರಿಂದ ಸೋಂಕು ತಡೆಗಟ್ಟಲು ಅನುಕೂಲವಾಗಲಿದೆ. ಮಂಗಳವಾರ ರಾತ್ರಿಯಿಂದ ಲಾಕ್‍ಡೌನ್ ಜಾರಿಗೆ ಬರಲಿದ್ದು, ಊರುಗಳಿಗೆ ಹೋಗುವವರು ಸೋಮವಾರವೇ ಹೊರಡಬಹುದು ಎಂದು ಅವರು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News