ಕೊರೋನ ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ದಾಖಲೆಯ ಹಾಲು ಉತ್ಪಾದನೆ

Update: 2020-07-12 18:33 GMT

ಬೆಂಗಳೂರು, ಜು. 12: ಕೊರೋನ ಸಂಕಷ್ಟದ ಕಾಲಘಟ್ಟದಲ್ಲಿಯೂ ಕರ್ನಾಟಕ ಹಾಲು ಮಹಾ ಮಂಡಳಿ ರಾಜ್ಯದಲ್ಲಿ ಕ್ಷೀರಕ್ರಾಂತಿಯನ್ನು ಮಾಡಿದ್ದು, ದಾಖಲೆ ಎನ್ನುವ ರೀತಿಯಲ್ಲಿ ಹಾಲು ಉತ್ಪಾದನೆಯಾಗಿದೆ.

ಸಂಕಷ್ಟದ ವೇಳೆಯಲ್ಲಿ ವ್ಯಾಪಾರ ವಹಿವಾಟು ನಷ್ಟದಲ್ಲಿರುವಾಗಲೇ ಕೆಎಂಎಫ್ ಮಹತ್ವದ ಸಾಧನೆ ಮಾಡಿದೆ. ಆದರೆ, ಹೆಚ್ಚುವರಿಯಾಗಿ ಉತ್ಪಾದನೆಯಾಗಿರುವ ಹಾಲಿನ ಮಾರಾಟದ ಚಿಂತೆ ಕಾಡಲಾರಂಭಿಸಿದೆ. ಈ ಹೆಚ್ಚುವರಿ ಹಾಲಿಗೆ ಮಾರುಕಟ್ಟೆ ಸೃಷ್ಟಿಸುವುದು ತಲೆನೋವಾಗಿ ಪರಿಣಮಿಸಿದೆ.

ಕೊರೋನ ಮಹಾಮಾರಿಯಿಂದ ಮುಕ್ತರಾಗಲು ನಗರಗಳಿಂದ ಹಳ್ಳಿಗಳಿಗೆ ಬಹುತೇಕರು ವಾಪಸ್ಸಾದ ಹಿನ್ನೆಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಲು ಕಾರಣ ಎಂದು ಹೇಳಲಾಗಿದ್ದು, ಗ್ರಾಮೀಣ ಭಾಗದಲ್ಲಿ ನಡೆದಿರುವ ಕ್ಷೀರಕ್ರಾಂತಿ ಕೆಎಂಎಫ್‍ಗೆ ಚಿಂತೆ ತಂದಿದೆ. ಕೆಎಂಎಫ್‍ನ ಇತಿಹಾಸದಲ್ಲೇ 88 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ದಾಖಲೆ ಬರೆದಿದೆ.

ಸಾಮಾನ್ಯವಾಗಿ ಸುಗ್ಗಿ ಕಾಲದಲ್ಲಿ ಹಾಲು ಉತ್ಪಾದನೆ ಹೆಚ್ಚಿರುತ್ತದೆ. ಪ್ರತಿವರ್ಷ ಸುಗ್ಗಿ ಕಾಲದಲ್ಲಿ 80 ಲಕ್ಷ ಲೀಟರ್ ಹಾಲು ಉತ್ಪಾದನೆ ಇರುತ್ತಿತ್ತು. ಆದರೆಜುಲೈ ತಿಂಗಳ ಆರಂಭದಲ್ಲೇ ಅತಿ ಹೆಚ್ಚು ಅಂದರೆ ದಿನಕ್ಕೆ 88. 2 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿದೆ. ಇದು ದಾಖಲೆ ಎಂದು ಕೆಎಂಎಫ್‍ನ ಎಂಡಿ ಸತೀಶ್ ತಿಳಿಸಿದ್ದಾರೆ.

ಇದುವರೆಗೂ 2018ರಲ್ಲಿ ಗರಿಷ್ಠ 84 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ದಾಖಲಾಗಿತ್ತು. ಆದರೆ ಈಗ ಜುಲೈ ತಿಂಗಳ ಆರಂಭದಲ್ಲಿ ದಿನಕ್ಕೆ 88 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿರುವುದು ಹೊಸ ದಾಖಲೆ ಎಂದು ಹೇಳಿದ್ದಾರೆ.

ಈ ಮೊದಲು ನೆರೆಯ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಹಾಲು ಸರಬರಾಜು ಆಗುತ್ತಿತ್ತು. ಲಾಕ್‍ಡೌನ್‍ನಿಂದ ನೆರೆ ರಾಜ್ಯಗಳಿಗೆ ಹಾಲು ಸರಬರಾಜು ಕಡಿಮೆಯಾಗಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಕೊರೋನ ಲಾಕ್‍ಡೌನ್‍ಗೆ ಮೊದಲು ಪ್ರತಿನಿತ್ಯ 12 ಲಕ್ಷ ಲೀಟರ್ ಹಾಲನ್ನು ಕೆಎಂಎಫ್ ಸರಬರಾಜು ಮಾಡುತ್ತಿತ್ತು. ಈಗ ಅದು 4 ಲಕ್ಷ ಲೀಟರ್‍ಗೆ ಇಳಿದಿದೆ.

ಹೆಚ್ಚುವರಿ ಲೀಟರ್ ಹಾಲನ್ನು ಉತ್ಪನ್ನವಾಗಿ ಮಾರ್ಪಡಿಸಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಗ್ರಾಮೀಣ ಭಾಗದಲ್ಲಿ ನಡೆದಿರುವ ಈ ಕ್ಷೀರಕ್ರಾಂತಿಗೆ ಕಾರಣ ಹಲವರು ನಗರ ಪ್ರದೇಶಗಳನ್ನು ತೊರೆದು ಗ್ರಾಮೀಣ ಭಾಗದಲ್ಲಿ ಡೈರಿ ಫಾರಂ, ಹಸು ಸಾಕಾಣಿಕೆಯಲ್ಲಿ ತೊಡಗಿರುವುದು ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News