ಕರ್ಫ್ಯೂ ಉಲ್ಲಂಘಿಸಿದ ಗುಜರಾತ್ ಸಚಿವರ ಪುತ್ರನನ್ನು ತಡೆದ ಮಹಿಳಾ ಪೊಲೀಸ್‍ ವರ್ಗಾವಣೆ

Update: 2020-07-13 04:55 GMT

ಸೂರತ್: ಗುಜರಾತ್‍ನ ಆರೋಗ್ಯ ಸಚಿವ ಕುಮಾರ್ ಕನಾನಿ ಪುತ್ರ ಪ್ರಕಾಶ್ ಕನಾನಿ ಹಾಗೂ ಆತನ ಸ್ನೇಹಿತರನ್ನು ಲಾಕ್‍ಡೌನ್ ಉಲ್ಲಂಘಿಸಿದ್ದಕ್ಕಾಗಿ ತಡೆದು ಪ್ರಶ್ನಿಸಿ, ಸುದ್ದಿಯಾಗಿದ್ದ ಮಹಿಳಾ ಪೊಲೀಸ್ ಸುನೀತಾ ಯಾದವ್ ಅವರನ್ನು ಪೊಲೀಸ್ ಕೇಂದ್ರ ಕಚೇರಿಗೆ ವರ್ಗಾಯಿಸಲಾಗಿದೆ. ಈ ವರ್ಗಾವಣೆ ಇದೀಗ ಹೊಸ ವಿವಾದ ಹುಟ್ಟುಹಾಕಿದ್ದು, ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಇಡೀ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಪ್ರಕಾಶ್ ಕನಾನಿ ಹಾಗೂ ಆತನ ಸ್ನೇಹಿತರು ರಾತ್ರಿ 10.30ರ ವೇಳೆಗೆ ಕರ್ಫ್ಯೂ ಉಲ್ಲಂಘಿಸಿ ತಿರುಗಾಡುತ್ತಿದ್ದುದು ಮಾತ್ರವಲ್ಲದೇ ಮಾಸ್ಕ್ ಧರಿಸಿಲ್ಲ ಎಂಬುದನ್ನು ಪತ್ತೆ ಮಾಡಿದ್ದ ಸುನೀತಾ ಯಾದವ್, ಅವರನ್ನು ತಡೆದು ಪ್ರಶ್ನಿಸಿದ್ದರು. ಆಗ ನಡೆದ ವಾಗ್ವಾದದ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಘಟನೆ ಹಿನ್ನೆಲೆಯಲ್ಲಿ ಪ್ರಕಾಶ್ ಹಾಗೂ ಇತರ ಇಬ್ಬರನ್ನು ಬಂಧಿಸಲಾಗಿತ್ತು. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಸೂರತ್ ಪೊಲೀಸ್ ಆಯುಕ್ತ ಆರ್.ಬಿ.ಬ್ರಹ್ಮಭಟ್ ಹೇಳಿದ್ದಾರೆ. ಸುನೀತಾ ಯಾದವ್ ಅನಾರೋಗ್ಯ ಕಾರಣ ರಜೆ ಹಾಕಿದ್ದಾರೆ. ವರ್ಗಾವಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ಅವರಿಂದ ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News