ಕೋವಿಡ್ ಚಿಕಿತ್ಸೆಗೆ ಸಜ್ಜಾಗದ ಖಾಸಗಿ ಆಸ್ಪತ್ರೆಗಳ ಲೈಸನ್ಸ್ ರದ್ದು, ಕ್ರಿಮಿನಲ್ ಕೇಸ್: ಡಾ.ಸುಧಾಕರ್ ಎಚ್ಚರಿಕೆ

Update: 2020-07-13 16:59 GMT

ಬೆಂಗಳೂರು, ಜು. 13: ನಾಲ್ಕು ತಿಂಗಳ ಹಿಂದೆಯೇ ಸ್ಪಷ್ಟ ಅದೇಶಗಳನ್ನು ನೀಡಿದ್ದರೂ ಇದುವರೆಗೆ ಕೋವಿಡ್-19 ಸೋಂಕು ಎದುರಿಸಲು ಸಜ್ಜಾಗದ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಅನುಮತಿ ರದ್ದು ಪಡಿಸಲು ಸರಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಕೋವಿಡ್ ಲ್ಯಾಬ್ ಸ್ಥಾಪಿಸದ, ಹಾಸಿಗೆಗಳನ್ನು ಮೀಸಲಿಡದ, ಚಿಕಿತ್ಸೆ ನಿರಾಕರಿಸುತ್ತಿರುವ ಮತ್ತು ಅಗತ್ಯ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸದ ಖಾಸಗಿ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಸಾರ್ವಜನಿಕರ ರಕ್ಷಣೆಯ ವಿಚಾರದಲ್ಲಿ ಇಂತಹ ವೈಫಲ್ಯಗಳನ್ನು ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರ ಸಂಪೂರ್ಣ ಲಾಕ್‍ಡೌನ್ ಇರಲಿದ್ದು ಅಗತ್ಯ ಸೇವೆಗಳಿಗೆ ಮಾತ್ರ ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ರಿಯಾಯಿತಿ ಇರಲಿದೆ. ಈ ಸಂಬಂಧ ಮಾರ್ಗಸೂಚಿ ಬಿಡುಗಡೆಯಾಗಿದೆ. ಇದು ಬೆಂಗಳೂರಿನ ಜನರ ಜೀವ ರಕ್ಷಣೆಗಾಗಿ ತೆಗೆದುಕೊಂಡಿರುವ ಸ್ಪಷ್ಟ ನಿರ್ಧಾರ ಎಂದರು.

ಬೂತ್ ಮಟ್ಟದ ಕಾರ್ಯಪಡೆ: ಬೂತ್ ಮಟ್ಟದ ಕಾರ್ಯಪಡೆಯ ಸದಸ್ಯರು ಪ್ರತಿ ಮನೆಗಳಿಗೂ ಭೇಟಿ ನೀಡಲಿದ್ದು ರಿವರ್ಸ್ ಐಸೊಲೇಶನ್ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇದರಿಂದ ಸೋಂಕು ಇಲ್ಲದವರನ್ನು ರಕ್ಷಿಸಲು ಸಾಧ್ಯವಾಗುವುದಲ್ಲದೆ, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರ ಪತ್ತೆ ಹಚ್ಚಲು ನೆರವಾಗುವುದು.

ಅಲ್ಲದೆ, ಐಎಲ್‍ಐ ಮತ್ತು ಎಸ್‍ಎಆರ್‍ಐ ಲಕ್ಷಣ ಇರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಪರೀಕ್ಷೆ ಮಾಡಿಸುವುದು ಮತ್ತು ಕ್ವಾರಂಟೈನ್ ಮಾಡಿಸುವ ನಿಟ್ಟಿನಲ್ಲಿ ನೆರವಾಗಲಿದ್ದಾರೆ. ಸೋಂಕಿನ ಲಕ್ಷಣ ಇರುವವರಿಗೆ ಆಂಬುಲೆನ್ಸ್, ಆಸ್ಪತ್ರೆಗೆ ದಾಖಲು ಮಾಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕಾರ್ಯಪಡೆ ನಿರ್ವಹಿಸಲಿದೆ ಎಂದು ಸಚಿವ ಸುಧಾಕರ್ ಅವರು ತಿಳಿಸಿದರು.

ಗೆಲ್ಲುವ ಉಪಾಯಗಳು: ಕೊರೋನ ವಿರುದ್ಧದ ಹೋರಾಟದಲ್ಲಿ ಆಸ್ಪತ್ರೆ, ಆಂಬುಲೆನ್ಸ್, ಬೆಡ್, ವೆಂಟಿಲೇಟರ್ ಮುಂತಾದ ಅಂಕಿ ಸಂಖ್ಯೆಗಳ ಬಗ್ಗೆ ಯೋಚಿಸಿದಿರಿ. ಅದರ ವ್ಯವಸ್ಥೆಯನ್ನು ಸರಕಾರ ಮಾಡುತ್ತದೆ. ನೀವು ಧೈರ್ಯದಿಂದ, ಆತ್ಮವಿಶ್ವಾಸದಿಂದ ಕೊರೋನ ಎದುರಿಸಿ. ಸರಕಾರದ ಮೇಲೆ ವಿಶ್ವಾಸವಿಡಿ. ಜನ ಆತಂಕಕ್ಕೊಳಗಾಗದೆ ಧೈರ್ಯದಿಂದ ಇದ್ದರೆ ಈ ಯುದ್ಧದಲ್ಲಿ ಕೊರೋನ ಮಣಿಸಬಹುದು ಎಂದು ಸುಧಾಕರ್ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News