ಭಾರತದಲ್ಲಿ 9 ಲಕ್ಷದ ಮೈಲುಗಲ್ಲು ತಲುಪಿದ ಕೊರೋನ

Update: 2020-07-14 03:44 GMT

ಹೊಸದಿಲ್ಲಿ, ಜು.14: ದೇಶದಲ್ಲಿ ಎಂಟು ಲಕ್ಷ ಕೋವಿಡ್-19 ಪ್ರಕರಣಗಳು ದಾಖಲಾದ ಮೂರೇ ದಿನಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಮತ್ತೊಂದು ಮೈಲುಗಲ್ಲು ದಾಟಿದೆ. ಸೋಮವಾರ 28,600 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ ಒಂಬತ್ತು ಲಕ್ಷ ದಾಟಿದೆ. ಈ ಮಧ್ಯೆ ಒಂದೇ ದಿನ ಸೋಂಕಿಗೆ 538 ಮಂದಿ ಬಲಿಯಾಗಿದ್ದಾರೆ.

ಜುಲೈ 6ರಿಂದ 12ರವರೆಗೆ ದೇಶದಲ್ಲಿ 1.83 ಲಕ್ಷ ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, 3,466 ಮಂದಿ ಮೃತಪಟ್ಟಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 26,100 ಹೊಸ ಪ್ರಕರಣಗಳು ಮತ್ತು 495 ಸಾವು ವರದಿಯಾಗಿದೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,97,041ಕ್ಕೇರಿದ್ದು, 23,695 ಮಂದಿ ಬಲಿಯಾಗಿರುವುದು ರಾಜ್ಯಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ದೇಶದಲ್ಲಿ ಒಟ್ಟು 3.12 ಲಕ್ಷ ಸಕ್ರಿಯ ಪ್ರಕರಣಗಳಿದ್ದು, 5.7 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ರವಿವಾರ (29,291)ಕ್ಕೆ ಹೋಲಿಸಿದರೆ ಸೋಮವಾರ ವರದಿಯಾದ ಪ್ರಕರಣಗಳು ತುಸು ಕಡಿಮೆ. ಆದಾಗ್ಯೂ ಆಂಧ್ರಪ್ರದೇಶ (1,935), ಉತ್ತರ ಪ್ರದೇಶ (1,664), ಗುಜರಾತ್ (908), ಮಧ್ಯಪ್ರದೇಶ (575), ಪಂಜಾಬ್ (357) ಮತ್ತು ಛತ್ತೀಸ್‌ಗಢ (184) ಹೀಗೆ ಎಂಟು ರಾಜ್ಯಗಳಲ್ಲಿ ಇದುವರೆಗಿನ ಗರಿಷ್ಠ ಪ್ರಕರಣಗಳು ಸೋಮವಾರ ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 6,497 ಹೊಸ ಪ್ರಕರಣ ಸೇರ್ಪಡೆಯೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2,60,924ಕ್ಕೇರಿದೆ. ದಿಲ್ಲಿಯಲ್ಲಿ ಸೋಂವಾರ 1,246 ಪ್ರಕರಣಗಳು ವರದಿಯಾಗಿವೆ.

ಕರ್ನಾಟಕದಲ್ಲಿ 2,738 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, 73 ಮಂದಿ ಒಂದೇ ದಿನ ಸೋಂಕಿಗೆ ಬಲಿಯಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ ಗರಿಷ್ಠ ಅಂದರೆ 47 ಮಂದಿ ಜೀವ ಕಳೆದುಕೊಂಡಿದ್ದಾರೆ. ತಮಿಳುನಾಡಿನಲ್ಲಿ 66 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News