ಬೆಂಗಳೂರು ನಗರ-ಗ್ರಾಮಾಂತರ ಜಿಲ್ಲೆಗಳು ಒಂದು ವಾರ ಸಂಪೂರ್ಣ ಸ್ತಬ್ಧ

Update: 2020-07-14 17:45 GMT

ಬೆಂಗಳೂರು, ಜು. 14: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ದೃಷ್ಟಿಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‍ಡೌನ್ ಘೋಷಣೆ ಮಾಡಿದ್ದು, ಉಭಯ ಜಿಲ್ಲೆಗಳ ಚಟುವಟಿಕೆಗಳು ಒಂದು ವಾರಗಳ ಕಾಲ ಸಂಪೂರ್ಣ ಸ್ತಬ್ಧವಾಗಲಿದೆ.

ಆಸ್ಪತ್ರೆ, ಔಷಧಿ ಅಂಗಡಿಗಳು, ಆಂಬ್ಯುಲೆನ್ಸ್, ಹಾಲು, ದಿನಸಿ, ಹಣ್ಣು-ತರಕಾರಿ ಸಹಿತ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ನಿನ್ನೆ(ಜು.14)ರಾತ್ರಿ 8ಗಂಟೆಯಿಂದ ಜು.22ರ ಬೆಳಗಿನ ಜಾವ 5ಗಂಟೆಯ ವರೆಗೆ ಸಂಪೂರ್ಣ ಬಂದ್ ಆಗಲಿವೆ. ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ, ಸರಕಾರಿ ಕಚೇರಿಗಳು ಕೋವಿಡ್ ನಿರ್ವಹಣೆ ಹಿನ್ನೆಲೆಯಲ್ಲಿ ಶೇ.50ರಷ್ಟು ಸಿಬ್ಬಂದಿ ಬಳಸಿಕೊಂಡು ಕಾರ್ಯ ನಿರ್ವಹಿಸಲಿವೆ.

ರಾಜ್ಯ ಸರಕಾರ ಎರಡು ಜಿಲ್ಲೆಗಳಲ್ಲಿ ಲಾಕ್‍ಡೌನ್‍ಗೆ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿ ಹೊರಡಿಸಿದ್ದು, ದಿನಸಿ ಅಂಗಡಿಗಳ ವಹಿವಾಟಿಗೂ ಸಮಯ ನಿಗದಿಪಡಿಸಲಾಗಿದೆ. ಕೆಎಸ್ಸಾಟಿಸಿ, ಬಿಎಂಟಿಸಿ, ಆಟೋರಿಕ್ಷಾ, ಟ್ಯಾಕ್ಸಿ ಸೇರಿದಂತೆ ಇನ್ನಿತರ ಯಾವುದೇ ಸಾರಿಗೆ ಸಂಚಾರ ಇರುವುದಿಲ್ಲ. ಕೊರೋನ ಸೋಂಕಿನ ಭೀತಿ ಹಾಗೂ ಒಂದು ವಾರಗಳ ಕಾಲ ಲಾಕ್‍ಡೌನ್ ಘೋಷಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿದ್ದ ಕೂಲಿ ಕಾರ್ಮಿಕರು ಸೇರಿದಂತೆ ಸಾವಿರಾರು ಮಂದಿ ನಗರವನ್ನು ತೊರೆದು ಹಳ್ಳಿಗಳಿಗೆ ವಲಸೆ ಹೊರಟಿದ್ದಾರೆ. ಲಾಕ್‍ಡೌನ್‍ನಿಂದಾಗಿ ಸೂಪರ್ ಮಾರ್ಕೆಟ್ ಮತ್ತು ದಿನಸಿ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ದೃಶ್ಯ ಕಂಡುಬಂತು.

ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಚಟುವಟಿಕೆ ಮತ್ತು ಅನಗತ್ಯ ಸಂಚಾರ ನಿರ್ಬಂಧಕ್ಕೆ ಈಗಾಗಲೇ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಕಲಂ-144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ತುರ್ತು ಆರೋಗ್ಯ ಸೇವೆ, ಅಗತ್ಯ ವಸ್ತುಗಳ ಖರೀದಿಯನ್ನು ಹೊರತುಪಡಿಸಿ ಜನಸಾಮಾನ್ಯರು ಯಾವುದೇ ಕಾರಣಕ್ಕೂ ಮನೆಗಳಿಂದ ಹೊರವರುವಂತಿಲ್ಲ ಎಂದು ಕಟ್ಟಪ್ಪಣೆ ಮಾಡಲಾಗಿದೆ.

ಲಾಕ್‍ಡೌನ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ಮನಸೋ ಇಚ್ಛೆ ಸಂಚರಿಸುವವರ ವಿರುದ್ಧ ಪೊಲೀಸರು ತಪಾಸಣೆ ನಡೆಸಿ ದಂಡ ವಿಧಿಸುವುದಲ್ಲದೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಿದ್ದು, ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ. ಹೀಗಾಗಿ ಸಾರ್ವಜನಿಕರು ಸೋಂಕು ತಡೆಗಟ್ಟುವ ದೃಷ್ಟಿಯಿಂದ ಒಂದು ವಾರ ಕಾಲ ಮನೆಗಳಲ್ಲೇ ಇರುವುದು ಅನಿವಾರ್ಯವಾಗಿದೆ.

ಗಡಿ ಬಂದ್: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ಸಂಪರ್ಕಿಸುವ ಹೊಸೂರು ರಸ್ತೆ, ಹಳೆ ಮದ್ರಾಸ್ ರಸ್ತೆ, ಮೈಸೂರು ರಸ್ತೆ, ಕೋಲಾರ ರಸ್ತೆ ಹಾಗೂ ತುಮಕೂರು ರಸ್ತೆ ಸೇರಿದಂತೆ ಎಲ್ಲ ಗಡಿಗಳನ್ನು ಮುಚ್ಚಲಾಗಿದ್ದು, ಅಗತ್ಯ ಮತ್ತು ಅನಿವಾರ್ಯತೆಯನ್ನು ಹೊರತುಪಡಿಸಿ ಹೊರಗಿನಿಂದ ಒಳ ಬರುವ ಮತ್ತು ಇಲ್ಲಿಂದ ಹೊರ ಹೋಗುವ ಎಲ್ಲ ವಾಹನಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್: ತುರ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಇರುವುದಿಲ್ಲ. 50 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿಗೆ ರಜೆ ನೀಡಿದ್ದು, 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆಯಾಗದಂತೆ 6 ತಿಂಗಳ ಅವಧಿಗೆ ಈಗಾಗಲೇ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದು, ಗಡಿಭಾಗಗಳು ಸೇರಿದಂತೆ ಎರಡೂ ಜಿಲ್ಲೆಗಳಲ್ಲಿಯೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಏನಿರುತ್ತೆ: ಆಸ್ಪತ್ರೆ, ನರ್ಸಿಂಗ್ ಹೋಮ್, ಕ್ಲಿನಿಕ್, ಲ್ಯಾಬ್‍ಗಳು, ಔಷಧಿ ಅಂಗಡಿಗಳು, ಆಂಬ್ಯುಲೆನ್ಸ್, ಹಾಲು, ಮಾಂಸದ ಅಂಗಡಿಗಳು, ದಿನಸಿ, ಹಣ್ಣು-ತರಕಾರಿ, ಪೊಲೀಸ್, ಗೃಹ ರಕ್ಷಕ ದಳ, ವಿಧಾನಸೌಧ, ವಿಕಾಸಸೌಧ ಸಹಿತ ಕೇಂದ್ರ ಹಾಗೂ ರಾಜ್ಯ ಸರಕಾರದ ಸರಕಾರಿ ಕಚೇರಿಗಳು, ಕೋರ್ಟ್ ಕಚೇರಿಗಳು, ಅಂಚೆ ಕಚೇರಿ, ಬ್ಯಾಂಕುಗಳು, ಎಟಿಎಂ, ಹೊಟೇಲ್ ಮತ್ತು ಮದ್ಯದಂಗಡಿಗಳು(ಪಾರ್ಸಲ್‍ಗೆ ಮಾತ್ರ ಅವಕಾಶ).

ಏನಿರುವುದಿಲ್ಲ: ಕೆಎಸ್ಸಾಟಿಸಿ, ಬಿಎಂಟಿಸಿ, ಆಟೋ ರಿಕ್ಷಾ, ಟ್ಯಾಕ್ಸಿ, ಕಾರು, ಬೈಕ್ ಸಂಚಾರ(ತುರ್ತು ಸಂದರ್ಭಗಳಲ್ಲಿ ಬಳಸುವುದನ್ನು ಹೊರತುಪಡಿಸಿ)ಕ್ಕೆ ನಿರ್ಬಂಧ. ಶಾಪಿಂಗ್ ಮಾಲ್‍ಗಳು, ಉದ್ಯಾನವನ, ಧಾರ್ಮಿಕ ಕೇಂದ್ರಗಳು, ಶಾಲಾ-ಕಾಲೇಜುಗಳು, ಸಿನಿಮಾ ಮಂದಿರಗಳು, ಕ್ರೀಡಾ ಸಂಕೀರ್ಣಗಳು, ಹೊಟೇಲ್, ರೆಸ್ಟೋರೆಂಟ್, ಬಾರ್ ಗಳು ಇರುವುದಿಲ್ಲ.

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ

ನಗರದಲ್ಲಿ ಕೊರೋನ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಮಂಗಳವಾರ ರಾತ್ರಿಯಿಂದ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿ ದೃಶ್ಯಗಳು ಎಲ್ಲೆಡೆ ಕಂಡುಬಂತು.

ಅಗತ್ಯ ವಸ್ತುಗಳ ಖರೀದಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸರಕಾರ ಮನವರಿಕೆ ಮಾಡಿದರೂ ಜನತೆ ಮಾತ್ರ ಒಂದು ವಾರಗಳ ಕಾಲ ಇಡೀ ಬೆಂಗಳೂರು ಸಂಪೂರ್ಣ ಸ್ತಬ್ಧವಾಗಲಿದೆ ಎಂಬ ಭಾವನೆಯಿಂದ ಮಂಗಳವಾರದಂದು ಅಗತ್ಯ ವಸ್ತುಗಳ ಖರೀದಿ ಮಾಡಿದ್ದಾರೆ.

ಮಂಗಳವಾರದಂದು ದಿನಸಿ ಅಂಗಡಿ ಮುಂಗಟ್ಟುಗಳ ಮುಂದೆ ಬಹುತೇಕ ಜನರು ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಯ್ದುಕೊಳ್ಳದೇ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದ್ದು, ಸರಕಾರದ ಲಾಕ್‍ಡೌನ್ ಅಸ್ತ್ರ ಫಲಕೊಡುವುದೇ ಎಂದು ಕಾದು ನೋಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News