ಲಾಕ್‍ಡೌನ್‍ಗೆ ಪೊಲೀಸ್ ಸಿಬ್ಬಂದಿಯ ಕೊರತೆ: ಪೊಲೀಸ್ ಆಯುಕ್ತ ಭಾಸ್ಕರ್ ರಾವ್

Update: 2020-07-14 18:35 GMT

ಬೆಂಗಳೂರು, ಜು.14: ರಾಜಧಾನಿ ಬೆಂಗಳೂರಿನ ಕೊರೋನ ಸೋಂಕಿನ ಪ್ರಕರಣ ದಿನನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆ ತಡೆಯುವ ಉದ್ದೇಶಕ್ಕಾಗಿ ಜಾರಿಗೊಳಿಸಿರುವ ಲಾಕ್‍ಡೌನ್ ಸಂಬಂಧ ಕರ್ತವ್ಯ ನಿರ್ವಹಿಸಲು ಪೊಲೀಸ್ ಸಿಬ್ಬಂದಿಯ ಕೊರತೆ ಉಂಟಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನುಡಿದರು.

ಮಂಗಳವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದಿನ ಲಾಕ್‍ಡೌನ್ ಪ್ರಕ್ರಿಯೆ ವೇಳೆ ಕಾರ್ಯ ನಿರ್ವಹಿಸಲು ಯಾವುದೇ ರೀತಿಯ ಸಿಬ್ಬಂದಿ ಕೊರತೆ ಇರಲಿಲ್ಲ. ಆದರೆ, ಈ ಬಾರಿ ಉಂಟಾಗಿದ್ದು, ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುವುದೆಂದರು.

ಕಳೆದ ಮೂರುವರೇ ತಿಂಗಳಿನಿಂದ ಸೋಂಕು ಬೆಳೆದಿದೆ. ಅದೇ ರೀತಿ, ವಲಸೆ ಕಾರ್ಮಿಕರ ಸಾಗಾಟ, ಲಾಕ್‍ಡೌನ್ ಕರ್ತವ್ಯದಲ್ಲಿ ಕಾರ್ಯ ನಿರ್ವಹಿಸಿದ ಅನೇಕ ಸಿಬ್ಬಂದಿ ಕೊರೋನ ಸೋಂಕಿಗೆ ತುತ್ತಾಗಿದ್ದು, ಮತ್ತಷ್ಟು ಮಂದಿ ಕ್ವಾರಂಟೈನ್ ಪ್ರಕ್ರಿಯೆಗೆ ಒಳಗಾಗಿದ್ದಾರೆ. ಹೀಗಾಗಿ, ಪೊಲೀಸ್ ಸಿಬ್ಬಂದಿ ಕೊರತೆ ಕಾಣುತ್ತಿದೆ ಎಂದರು.

ಈ ಹಿಂದೆ ಬೆಂಗಳೂರು ವ್ಯಾಪ್ತಿಯಲ್ಲಿ 40 ಇದ್ದ ಕಂಟೈನ್‍ಮೆಂಟ್ ಝೋನ್, ಇದೀಗ 2 ಸಾವಿರ ದಾಟಿದೆ. ಇಂತಹ ಪ್ರದೇಶಗಳಲ್ಲಿ ಹೆಚ್ಚಾಗಿ ಪೊಲೀಸರು ಕಾರ್ಯ ನಿರ್ವಹಿಸಬೇಕು. ಈ ಕಾರಣಕ್ಕಾಗಿ ಸ್ವಯಂ ಸೇವಕರ ಅಗತ್ಯವೂ ಇದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News