ಲಾಕ್‍ಡೌನ್: ವಿಧಾನಸಭೆ ಸಚಿವಾಲಯದ ಅಧಿಕಾರಿ, ನೌಕರರಿಗೆ ವಿನಾಯಿತಿ

Update: 2020-07-14 19:01 GMT

ಬೆಂಗಳೂರು, ಜು.14: ಬೆಂಗಳೂರು ಪ್ರದೇಶದಲ್ಲಿ ಕಳೆದು ಎರಡು ವಾರಗಳಂದೀಚೆಗೆ ಕೋವಿಡ್-19 ಸೋಂಕು ಹರಡುವಿಕೆಯ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗುತ್ತಿರುವುದರಿಂದ ಬಿಬಿಎಂಪಿ ಪ್ರದೇಶ, ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜು.14ರ ರಾತ್ರಿ 8 ಗಂಟೆಯಿಂದ ಜು.22ರ ಬೆಳಗ್ಗೆ 5 ಗಂಟೆಯವರೆಗೆ ಲಾಕ್‍ಡೌನ್ ಜಾರಿಗೊಳಿಸಲಾಗಿದೆ.

ಸರಕಾರದ ಆದೇಶದ ಮಾರ್ಗಸೂಚಿಯಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿರುವ ಕಚೇರಿಗಳು ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಲಾಗಿದೆ ಎಂದು ರಾಜ್ಯ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.

ಈ ಸಚಿವಾಲಯದ ಯಾವುದೆ ಶಾಖೆಯ ಕಾರ್ಯಗಳಲ್ಲಿ ಬಾಕಿ ಉಳಿದಿರುವ ಅಥವಾ ತುರ್ತು ಸಂದರ್ಭವಿರುವ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ನಿರ್ವಹಿಸಬೇಕು. ಅವಶ್ಯವಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿ, ನೌಕರರು ಕಚೇರಿಗೆ ಹಾಜರಾಗಿ ಅಂತಹ ಕಾರ್ಯಗಳನ್ನು ಪೂರ್ಣಗೊಳಿಸಬೇಕೆ ಹೊರತು, ಯಾವುದೆ ಕಾರ್ಯಗಳನ್ನು ಬಾಕಿ ಉಳಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಮನೆಯಿಂದ ಕಾರ್ಯನಿರ್ವಹಿಸುವಂತಹ ಶಾಖೆಯ ಕೆಲಸಗಳನ್ನು ಸಂಬಂಧಪಟ್ಟ ಶಾಖೆಯವರು ಮನೆಯಿಂದ ನಿರ್ವಹಿಸಲು ಅನುಮತಿ ನೀಡಲಾಗಿದೆ. ಈ ಷರತ್ತಿಗೊಳಪಟ್ಟು ಎಲ್ಲ ಅಧಿಕಾರಿ, ನೌಕರರಿಗೆ ಜು.15 ರಿಂದ 21ರವರೆಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.

ಈ ಸಚಿವಾಲಯದ ಎಲ್ಲ ಅಧಿಕಾರಿಗಳು, ನೌಕರರು ಕೇಂದ್ರ ಸ್ಥಾನದಲ್ಲಿ ಲಭ್ಯವಿದ್ದು ಹಾಗೂ ತುರ್ತು ಕಾರಣಗಳಿದ್ದಾಗ ಮೇಲಾಧಿಕಾರಿಗಳು ಸೇವೆಯನ್ನು ಬಯಸಿದ್ದಲ್ಲಿ ಅಧಿಕಾರಿ, ನೌಕರರು ಯಾವುದೆ ಕಾರಣ ನೀಡದೆ ಕಚೇರಿಗೆ ಹಾಜರಾಗಬೇಕು. ಶಾಸಕರ ಭವನದ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಅಲ್ಲಿನ ಅಧಿಕಾರಿ, ನೌಕರರು ಅಲ್ಲಿನ ಕಾರ್ಯಗಳ ಅಗತ್ಯತೆಗೆ ಅನುಗುಣವಾಗಿ ಕ್ಷೇತ್ರಾಧಿಕಾರಿಗಳು ನಿಯೋಜಿಸಿದಂತೆ ಕಾರ್ಯನಿರ್ವಹಿಸಬೇಕು ಎಂದು ಸ್ಪೀಕರ್ ಆದೇಶ ಮಾಡಿರುವುದಾಗಿ ವಿಶಾಲಾಕ್ಷಿ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News