ಕೋವಿಡ್ ಗೆದ್ದ ದೇಶದ ಅತಿ ಹಿರಿಯ ವ್ಯಕ್ತಿ ಈ ಅಜ್ಜಿ!

Update: 2020-07-15 04:08 GMT
ಫೋಟೊ ಕೃಪೆ: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್

ಕೋವಿಡ್ ಗೆದ್ದ ದೇಶದ ಅತಿ ಹಿರಿಯ ವ್ಯಕ್ತಿ ಈ ಅಜ್ಜಿ!
ಚೆನ್ನೈ, ಜು.15: ತಮಿಳುನಾಡಿನ ತಿರುಪತೂರ್ ಜಿಲ್ಲೆಯ 110 ವರ್ಷದ ಮಹಿಳೆ, ಕೊರೋನ ಸೋಂಕನ್ನು ಗೆದ್ದ ದೇಶದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೂ ಅವರ ಕುಟುಂಬ ಇನ್ನೂ ತಾರತಮ್ಯವನ್ನು ಎದುರಿಸಬೇಕಾಗಿದೆ.

ಅಂಬೂರಿನ ಪೆರಿವರಕ್ಕಾಂ ನಿವಾಸಿ ಹಮೀದಾಬಿ(11) ಅವರು ಜ್ವರ ಹಾಗೂ ನೆಗಡಿ ಸಮಸ್ಯೆ ಎದುರಿಸಿದರು. ಬಳಿಕ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ಆರೋಗ್ಯ ಪರೀಕ್ಷೆಯಿಂದ ದೃಢಪಟ್ಟಿತು.

ಜುಲೈ 1ರಂದು ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮಹಿಳೆಯನ್ನು ತಕ್ಷಣ ಅಂಬೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಕ್ವಾರಂಟೈನ್ ಚಿಕಿತ್ಸಾ ವ್ಯವಸ್ಥೆಯಲ್ಲಿ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸಿದರು ಎಂದು ಆರೋಗ್ಯ ನಿರೀಕ್ಷಕ ಡಿ.ಪ್ರೇಮಕುಮಾರ್ ವಿವರಿಸಿದರು.

ಮಹಿಳೆಗೆ 110 ವರ್ಷ ವಯಸ್ಸಾಗಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ಆದರೆ ಆಕೆಯ ವಯಸ್ಸು 130 ಎನ್ನುವುದು ಕುಟುಂಬದವರ ವಾದ. ಸಂಪೂರ್ಣ ಗುಣಮುಖರಾದ ಬಳಿಕ ಇದೀಗ ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಯಶಸ್ವಿಯಾಗಿ ಕೋವಿಡ್-19 ಸೋಂಕನ್ನು ಗೆದ್ದರೂ ಅವರ ಕುಟುಂಬ ಮಾತ್ರ ಇಡೀ ಸಮಾಜದಿಂದ ತಾರತಮ್ಯ ಎದುರಿಸಬೇಕಾಗಿದೆ. ಯಾವುದೇ ತಾರತಮ್ಯ ತೋರದಂತೆ ಆರೋಗ್ಯಾಧಿಕಾರಿಗಳು ನೆರೆಯವರಿಗೆ ಎಚ್ಚರಿಕೆ ನೀಡಿ ಹೋಗಿದ್ದರು. ಆದರೂ ನಮ್ಮನ್ನು ವಿನಾಕಾರಣ ನಿಂದಿಸುತ್ತಿದ್ದಾರೆ. ಮನೆ ಖಾಲಿ ಮಾಡಿಸಬೇಕು ಎನ್ನುವುದು ಅವರ ಹುನ್ನಾರ ಎಂದು ಹಮೀದಾಬಿಯವರ ಮೊಮ್ಮಗಳು ಸಮಾ ಆಪಾದಿಸುತ್ತಾರೆ.

ಸಮಾ ಅವರ ದುಡಿಮೆಯೇ ಕುಟುಂಬಕ್ಕೆ ಆಧಾರ. ಲಾಕ್‌ಡೌನ್ ಕಾರಣದಿಂದಾಗಿ ಅವರಿಗೂ ಆದಾಯ ಇಲ್ಲದೇ ಇದೀಗ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಸ್ಥಳೀಯ ಶೂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆ. ಲಾಕ್‌ಡೌನ್ ಬಳಿಕ ಉದ್ಯೋಗ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಶಾಸಕ ಎ.ಸಿ.ವಿಲ್ವನಾಥನ್ ಕುಟುಂಬಕ್ಕೆ 5 ಸಾವಿರ ರೂ. ನಗದು, ಒಂದು ಚೀಲ ಅಕ್ಕಿ ಮತ್ತು ದಿನಸಿ, ತರಕಾರಿಗಳನ್ನು ನೀಡಿ ನೆರವಾಗಿದ್ದಾರೆ.

ಈ ಹಿರಿಯ ಮಹಿಳೆಗೆ 13 ಮಂದಿ ಮಕ್ಕಳಿದ್ದು, 12 ಮಂದಿ ಎಳೆ ವಯಸ್ಸಿನಲ್ಲೇ ಮೃತಪಟ್ಟಿದ್ದರು. 58 ವರ್ಷದ ಮುಬಾರಕ್ ಮಾತ್ರ ಈಗ ಇರುವ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News