ಈ ಕುಗ್ರಾಮದ ಬುಡಕಟ್ಟು ಮಕ್ಕಳಿಗೆ ಮೊದಲ ಪಾಠದ ಅನುಭವ..

Update: 2020-07-15 04:19 GMT

ಹೈದರಾಬಾದ್, ಜು.15: ತೆಲಂಗಾಣದ ಮುಲುಗು ಜಿಲ್ಲೆಯ ದಟ್ಟ ಅರಣ್ಯದ ನಡುವಿನ ಪುಟ್ಟ ಉಪಗ್ರಾಮ ನೀಲಮ್ ತೋಗುವಿನಲ್ಲಿ ವಾಸಿಸುವ ಸುಮಾರು 50 ಮಕ್ಕಳು ಜೀವನದಲ್ಲಿ ಮೊದಲ ಬಾರಿಗೆ ಶಾಲೆಯ ಮೆಟ್ಟಿಲು ತುಳಿದು, ಪಾಠದ ಅನುಭವ ಪಡೆಯುತ್ತಿದ್ದಾರೆ.

ಹೈದರಾಬಾದ್‌ನಿಂದ ಸುಮಾರು 200 ಕಿಲೋಮೀಟರ್ ದೂರದ ಈ ಪುಟ್ಟ ಹಳ್ಳಿಯಲ್ಲಿ ಗುಡಿಸಲು ಶಾಲೆ ಆರಂಭಿಸುವ ಮೂಲಕ ಉಸ್ಮಾನಿಯಾ ವಿಶ್ವವಿದ್ಯಾನಿಲಯದ 26 ವರ್ಷ ವಯಸ್ಸಿನ ವಿದ್ಯಾರ್ಥಿ ಎಸ್ರಾಂ ಸಂತೋಷ್ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.

ಕೊರೋನಾ ಸಾಂಕ್ರಾಮಿಕ ವ್ಯಾಪಿಸಿದಾಗ ಈ ಗ್ರಾಮದ ಗುತ್ತಿ ಕೋಯಾ ಬುಡಕಟ್ಟು ಜನಾಂಗದವರ ಜೀವನಾಧಾರಕ್ಕೇ ಪೆಟ್ಟು ಬಿತ್ತು. ಸೀಮಿತ ಸಂಪನ್ಮೂಲದಿಂದಾಗಿ ಒಂದು ಹೊತ್ತಿನ ಊಟಕ್ಕೂ ತತ್ವಾರವಾಯಿತು. ವಿವಿ ಮುಚ್ಚಿದ ಬಳಿಕ ಮುಲುಗು ಜಿಲ್ಲೆಯ ನರ್ಲಾಪುರ ಗ್ರಾಮಕ್ಕೆ ಆಗಮಿಸಿದ್ದ ಸೈಬರ್ ಕಾನೂನು ವಿದ್ಯಾರ್ಥಿ ಸಂತೋಷ್, ಅಗತ್ಯ ಪರಿಹಾರ ಸಾಮಗ್ರಿಗಳೊಂದಿಗೆ ತೆರಳಿದರು. ಗ್ರಾಮಕ್ಕೆ ಕಾಲಿಟ್ಟಾಗ ಇಲ್ಲಿನ ಜನರಿಗೆ ಶಿಕ್ಷಣದ ಗಂಧ ಗಾಳಿಯೂ ಇಲ್ಲದಿರುವುದು ಸಂತೋಷ್ ಗಮನಕ್ಕೆ ಬಂತು. ತಮ್ಮ ಜೀವನದಲ್ಲಿ ಶಾಲೆಯ ಮೆಟ್ಟಲು ತುಳಿಯದ ಮಕ್ಕಳು ಇರುವುದನ್ನು ಗಮನಿಸಿದ ಅವರು ಗ್ರಾಮದಲ್ಲಿ ಗುಡಿಸಲು ಶಾಲೆಯೊಂದನ್ನು ತೆರೆದರು. ಭೀಮ್ ಮಕ್ಕಳ ಸಂತಸ ಕೇಂದ್ರ ಹೆಸರಿನ ಈ ಗುಡಿಸಲು ಶಾಲೆಯಲ್ಲಿ ಮಕ್ಕಳಿಗೆ ಮೂಲ ಇಂಗ್ಲಿಷ್, ಗಣಿತ ಮತ್ತು ತೆಲುಗು ಬೋಧಿಸಲಾಗುತ್ತದೆ.

ಇದುವರೆಗೆ ಮಕ್ಕಳು ತಮ್ಮ ಬಾಲ್ಯವನ್ನು ಅರಣ್ಯದಲ್ಲಿ ಆಟವಾಡುವ ಮೂಲಕ ಕಳೆದಿದ್ದರು. ಇಲ್ಲಿ ಶಾಲೆ ಆರಂಭವಾಗಿರುವುದರಿಂದ ನಮ್ಮ ಬವಣೆಯನ್ನೇ ಮಕ್ಕಳು ಅನುಭವಿಸಬೇಕಾಗಿಲ್ಲ ಎನ್ನುವ ಹೊಸ ನಿರೀಕ್ಷೆ ನಮ್ಮಲ್ಲಿ ಮೂಡಿದೆ ಎಂದು ಮೇಸ್ತ್ರಿ ಕೆಲಸ ಮಾಡುತ್ತಿರುವ ಎಂ.ಪರಮೇಶ್ ಹೇಳುತ್ತಾರೆ.

ಲಾಕ್‌ಡೌನ್‌ಗಿಂತ ಮೊದಲು ಇಲ್ಲಿನ ಬಹಳಷ್ಟು ಮಂದಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಇದೀಗ ಬೆರ್ರಿ ಹಣ್ಣುಗಳನ್ನು ಕಾಡಿನಲ್ಲಿ ಸಂಗ್ರಹಿಸಿ ಮಾರುಕಟ್ಟೆಗೆ ಒಯ್ದು ದಿನಕ್ಕೆ 300-400 ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಮಕ್ಕಳು ಸಮಯ ವ್ಯರ್ಥ ಮಾಡದೇ ಕಲಿಯುತ್ತಿರುವುದು ಸಂತೋಷದ ವಿಚಾರ. ಅವರ ಭವಿಷ್ಯದಲ್ಲಿ ಬೆಳಕು ಕಾಣಿಸುತ್ತಿದೆ ಎಂದು ಪದ್ದಮ್ ಸಂಧ್ಯಾ ಎಂಬ ಮಹಿಳೆ ಹೇಳುತ್ಥಾರೆ.

ಸಂತೋಷ್ ಪಯಣವೇನೂ ಹೂವಿನ ಹಾದಿಯಾಗಿರಲಿಲ್ಲ. ಕಳೆದ ಒಂದು ತಿಂಗಳಲ್ಲಿ ಪ್ರತಿ ದಿನ 10 ಕಿಲೋಮೀಟರ್ ಬೈಕ್‌ನಲ್ಲಿ ಮತ್ತೆ ಐದು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ತೆರಳಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ''ಒಂದಷ್ಟು ಕಷ್ಟವಾಗುತ್ತಿದೆ; ಆದರೆ ಹತ್ತಾರು ಮಕ್ಕಳ ಬದುಕಿನಲ್ಲಿ ಬೆಳಕು ಕಾಣಿಸುತ್ತಿರುವುದು ಸಂತಸ ತಂದಿದೆ'' ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News