ಅಯೋಧ್ಯೆಯಲ್ಲಿ ಬೌದ್ಧ ಭಿಕ್ಷುಗಳ ಉಪವಾಸ ಧರಣಿ, ಯುನೆಸ್ಕೋ ಉತ್ಖನನ ನಡೆಸಬೇಕೆಂದು ಆಗ್ರಹ

Update: 2020-07-15 07:09 GMT

ಅಯೋಧ್ಯೆ : ಅಯೋಧ್ಯೆಯಲ್ಲಿರುವ ರಾಮ ಜನ್ಮಭೂಮಿ ಬೌದ್ಧರ ಸ್ಥಳವಾಗಿದೆ ಹಾಗೂ  ಯುನೆಸ್ಕೋ ಇಲ್ಲಿ ಉತ್ಖನನ ನಡೆಸಬೇಕು ಹಾಗೂ ರಾಮ ಮಂದಿರ ನಿರ್ಮಾಣ ಕಾರ್ಯ ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ನಗರದಲ್ಲಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಹೊರಗೆ  ಬೌದ್ಧ ಭಿಕ್ಷುಗಳು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ರಾಮ ಜನ್ಮಭೂಮಿ  ಸ್ಥಳದಲ್ಲಿ  ನೆಲ ಸಮತಟ್ಟುಗೊಳಿಸುವ ಸಂದರ್ಭ ದೊರೆತ ವಸ್ತುಗಳ ಕುರಿತ ಮಾಹಿತಿ ಬಹಿರಂಗಪಡಿಸಬೇಕೆಂದೂ ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.

 ಇಲ್ಲಿ ನಿರ್ಮಾಣ ಉಸ್ತುವಾರಿ ಹೊತ್ತ ಟ್ರಸ್ಟ್ ನೀಡಿದ್ದ ಮಾಹಿತಿಯಂತೆ ಸ್ಥಳದಲ್ಲಿ ಶಿವಲಿಂಗ, ಏಳು ಕಪ್ಪು  ಸ್ಥಂಭಗಳು,  ಆರು ಕೆಂಪು ಮರಳುಗಲ್ಲು ಸ್ಥಂಭಗಳು, ನಾಲ್ಕು ತುಂಡಾದ ದೇವ, ದೇವತೆಗಳ ವಿಗ್ರಹ ಮೇ ತಿಂಗಳಲ್ಲಿ ದೊರಕಿದ್ದವು.

ಈ ಸ್ಥಳದಲ್ಲಿ ದೊರೆತ ವಸ್ತುಗಳು ಬೌದ್ಧ ಸಂಸ್ಕೃತಿಗೆ ಸಂಬಂಧಿಸಿದ್ದು ಎಂದು ಹೇಳಿರುವ ಬೌದ್ಧ ಭಿಕ್ಷುಗಳು ಉತ್ಖನನವನ್ನು ಯುನೆಸ್ಕೋ ನಡೆಸಬೇಕೆಂದು ಆಗ್ರಹಿಸಿದ್ದಾರೆ. ತಮ್ಮ ಮನವಿಯನ್ನು ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿ ಹಾಗೂ ಇತರ ಸಂಬಂಧಿತರಿಗೆ ಅಯೋಧ್ಯೆಯ ಆಡಳಿತದ ಮೂಲಕ ಕಳುಹಿಸಲಾಗಿದೆ ಎಂದೂ ಪ್ರತಿಭಟನಾನಿರತರು ಹೇಳಿದ್ದಾರಲ್ಲದೆ ತಮ್ಮ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸದೇ ಇದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುವ ಬೆದರಿಕೆಯೊಡ್ಡಿದ್ದಾರೆ.

ಪ್ರಾಚೀನ ಕಾಲದಲ್ಲಿ ಬೌದ್ಧ ಧರ್ಮದ ಕೇಂದ್ರವೆಂದು ಪರಿಗಣಿಸಲಾದ  ಸಾಕೇತ್ ನಗರವೇ ಅಯೋಧ್ಯೆ ಎಂದು ಬೌದ್ಧ ಧರ್ಮದ ಅನುಯಾಯಿಗಳು ನಂಬಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News