ಕೋವಿಡ್ ಕೆಲಸಕ್ಕೆ ಕೈಕೊಟ್ಟ ವೈದ್ಯರು, ನರ್ಸ್ ಗಳ ಲೈಸನ್ಸ್ ಅಮಾನತು: ಡಿಸಿಎಂ ಅಶ್ವಥ್ ನಾರಾಯಣ ಎಚ್ಚರಿಕೆ

Update: 2020-07-15 17:42 GMT

ಬೆಂಗಳೂರು, ಜು.15: ಬೆಂಗಳೂರಿನಲ್ಲಿಯೇ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಉಂಟಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ, ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡದೇ ತಪ್ಪಿಸಿಕೊಂಡಿರುವ ವೈದ್ಯರು ಮತ್ತು ನರ್ಸ್ ಗಳ ಲೈಸೆನ್ಸ್ ಮತ್ತು ನೋಂದಣಿಯನ್ನು ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ನಗರದಲ್ಲಿರುವ ಕೋವಿಡ್ ಕೇರ್ ಕೇಂದ್ರಗಳ ವ್ಯವಸ್ಥೆ, ಅವುಗಳ ವಿವಿಧ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

ಕೆಲಸದಿಂದ ಪಲಾಯನ ಮಾಡಿರುವ ವೈದ್ಯರು ಜತೆಗೆ ನರ್ಸುಗಳನ್ನು ಗುರುತಿಸಿ ಅವರನ್ನು ಕೂಡಲೇ ವೃತ್ತಿಯಿಂದ ಬಿಡುಗಡೆ ಮಾಡಲು ಈಗಾಗಲೇ ಸರಕಾರವು ಮೆಡಿಕಲ್ ಕೌನ್ಸಿಲ್ ಹಾಗೂ ನಸಿರ್ಂಗ್ ಕೌನ್ಸಿಲ್‍ಗೆ ಕರಾರುವಾಕ್ಕಾದ ಸೂಚನೆ ನೀಡಿದೆ ಎಂದು ಅವರು ಹೇಳಿದರು.

ಇದು ಸೋಂಕಿನ ಕಾಯಿಲೆ. ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಸಮರೋಪಾದಿಯಲ್ಲಿ ಚಿಕಿತ್ಸೆ ನೀಡಬೇಕಾದ ಹೊಣೆಗಾರಿಕೆ ವೈದ್ಯರ ಮೇಲಿದೆ. ನಿಯಂತ್ರಣಕ್ಕಾಗಿ ಹರಸಾಹಸ ಮಾಡುತ್ತಿರುವ ವೇಳೆಯಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿರುವುದು ಅಮಾನವೀಯ. ಮುಂದೆ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂಬ ಪರಿಜ್ಞಾನವೂ ಇಲ್ಲದಿದ್ದರೆ ಹೇಗೆ? ಎಂದು ಉಪ ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದರು.

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಈ ಕ್ಲಿಷ್ಟ ಸಮಯದಲ್ಲಿ ಖಾಸಗಿ ವೈದ್ಯರು ಹೆದರಿ ಹಿಂದೆ ಸರಿಯುತ್ತಿರುವುದು ಸರಿಯಲ್ಲ. ವೈದ್ಯರು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಅದನ್ನು ಬಿಟ್ಟು ವೃತ್ತಿಗೆ ದ್ರೋಹ ಬಗೆಯುವುದನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ. ಕೂಡಲೇ ಸೇವೆಗೆ ಹಾಜರಾಗದ ವೈದ್ಯರು, ನರ್ಸುಗಳು ಹಾಗೂ ಪೂರಕ ಸಿಬ್ಬಂದಿಯ ಹೆಸರುಗಳ ಸಮೇತ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಪ್ರಸ್ತುತ ಬೆಂಗಳೂರು ನಗರದ ಕೋವಿಡ್ ಕೇರ್ ಕೇಂದ್ರಗಳಲ್ಲಿ 2,624 ಹಾಸಿಗೆಗಳಿದ್ದು, ಅಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೇಂದ್ರಗಳಿಗೆ ಒಟ್ಟಾರೆ 86 ವೈದ್ಯರ ಅಗತ್ಯವಿದ್ದರೆ, 61 ವೈದ್ಯರು ಮಾತ್ರ ನಮಗೆ ಲಭ್ಯವಿದ್ದಾರೆ. ಇನ್ನು 134 ನರ್ಸುಗಳು ನಮಗೆ ಅಗತ್ಯವಿದ್ದು, ಕೇವಲ 54 ಜನ ಲಭ್ಯರಿದ್ದಾರೆ. 80 ನರ್ಸುಗಳ ಕೊರತೆ ಇದೆ. ಇದು ನಿಜಕ್ಕೂ ಕಳವಳಕಾರಿ ಎಂದು ಅವರು ತಿಳಿಸಿದರು.

ಪ್ರತಿ ಕೋವಿಡ್ ಸೆಂಟರ್ ನಲ್ಲಿಯೂ ತುರ್ತು ನಿಗಾ ಘಟಕವನ್ನು ಸ್ಥಾಪಿಸಲಾಗಿದೆ. ಒಟ್ಟಾರೆ ನಗರದಲ್ಲಿರುವ ಹಾಸಿಗೆಗಳ ಪೈಕಿ ಶೇ.5ರಷ್ಟು ಹಾಸಿಗೆಗಳಿಗೆ ಆಮ್ಲಜನಕದ ವ್ಯವಸ್ಥೆ ಮಾಡಲಾಗುವುದು. 24/7 ಆಂಬುಲೆನ್ಸ್, ಪೂರಕ ಸಿಬ್ಬಂದಿ, ವೈದ್ಯರು ಮತ್ತು ನರ್ಸುಗಳು ಸಜ್ಜಾಗಿರುವ ಹಾಗೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಈ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಿ 100 ರೋಗಿಗಳಿಗೆ ಒಬ್ಬ ವೈದ್ಯರು, ಇಬ್ಬರು ನರ್ಸುಗಳ ಅಗತ್ಯವಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಈ ಸಿಬ್ಬಂದಿಯನ್ನು ಒದಗಿಸಬೇಕು. ಇನ್ನು, ಔಷಧಿ, ಪಿಪಿಇ ಕಿಟ್ ಗಳು, ಎನ್-95 ಮಾಸ್ಕುಗಳು, ಪಲ್ಸ್ ಆಕ್ಸಿ ಮೀಟರ್ ಮತ್ತಿತರೆ ಪರಿಕರಗಳನ್ನು ಸಕಾಲಕ್ಕೆ ಒದಗಿಸುವಂತೆ ಆರೋಗ್ಯ ಇಲಾಖೆಯನ್ನು ಕೋರಲಾಗಿದೆ ಎಂದು ಅವರು ತಿಳಿಸಿದರು.

ಇದರ ಜತೆಗೆ, ಈ ಕೇಂದ್ರಗಳಲ್ಲಿ ಬಯೋಮೆಡಿಕಲ್ ವೇಸ್ಟ್ ವಿಲೇವಾರಿ, ಊಟ, ಹೌಸ್ ಕೀಪಿಂಗ್ ಮತ್ತಿತರೆ ವಿಷಯಗಳ ಬಗ್ಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ಸಣ್ಣ ಅನಾನುಕೂಲವೂ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಡಿಸಿಎಂ ವಿವರಿಸಿದರು.

ಸಭೆಯಲ್ಲಿ ಕೋವಿಡ್ ಉಸ್ತುವಾರಿ ಕೇಂದ್ರಗಳ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News