ಬೆಂಗಳೂರು: ಕೋವಿಡ್ ಶಂಕಿತ ರೋಗಿಗೆ 10 ದಿನಗಳ ಚಿಕಿತ್ಸೆಗೆ 9 ಲಕ್ಷ ರೂ. ಬಿಲ್ ನೀಡಿದ ಖಾಸಗಿ ಆಸ್ಪತ್ರೆ !

Update: 2020-07-16 07:20 GMT

ಬೆಂಗಳೂರು: ಕೋವಿಡ್-19 ಶಂಕಿತ ವ್ಯಕ್ತಿಯೊಬ್ಬರಿಗೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆ 10 ದಿನಗಳ ವೆಂಟಿಲೇಟರ್ ಸಹಿತ ಐಸಿಯು ಚಿಕಿತ್ಸೆಗೆ ರೂ 9,09,000 ಬಿಲ್ ನೀಡಿರುವ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಡಲಾದ ಒಂದು ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಈ ನಿರ್ದಿಷ್ಟ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಆರೋಗ್ಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ನೀಡಿದ್ದಾರೆ. 

ಆಸ್ಪತ್ರೆಯ ಒಟ್ಟು ಬಿಲ್ ಮೊತ್ತದಲ್ಲಿ ವೆಂಟಿಲೇಟರ್ ಶುಲ್ಕವೆಂದು 1.4 ಲಕ್ಷ ರೂ. ನಮೂದಿಸಲಾಗಿತ್ತು. ಸರಕಾರ ಖಾಸಗಿ ಆಸ್ಪತ್ರೆಗಳಿಗೆ ನಿಗದಿ ಪಡಿಸಿದ ಚಿಕಿತ್ಸಾ ದರದಂತೆ ವೆಂಟಿಲೇಟರ್ ಸಹಿತ ಐಸಿಯು ಶುಲ್ಕ ದಿನಕ್ಕೆ ರೂ 25,000 ಆಗಿದೆ.

‘‘ಅಚ್ಚರಿ ಇದು ಬಹಾಮಾಸ್ ಗೆ ತೆರಳುವ 7-ಸ್ಟಾರ್ ವಿಲಾಸಿ ಹಡಗಿನ ಶುಲ್ಕವೇ ಅಥವಾ ಚಿಕಿತ್ಸಾ ಶುಲ್ಕವೇ, ದಯವಿಟ್ಟು ಈ ಹಗಲು ದರೋಡೆಗೆ ವಿವರಣೆ ನೀಡಿ,’’ ಎಂದು ಫತಾಹೀನ್ ಮಿಸ್ಬಾ ಎಂಬವರು ಟ್ವೀಟ್ ಮಾಡಿ ಆಸ್ಪತ್ರೆ ಬಿಲ್ ನ ಚಿತ್ರ ಪೋಸ್ಟ್ ಮಾಡಿದ್ದರು.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಡಾ.ಚೈತನ್ಯ ಪಠಾನಿಯಾ ‘‘ಸಯ್ಯದ್ ಬಶೀರುದ್ದೀನ್ ಎಂಬ ಹಿರಿಯ ರೋಗಿಯೊಬ್ಬರು ಆಸ್ಪತ್ರೆಗೆ ಜುಲೈ 13ರ ಅಪರಾಹ್ನ 2.30ಕ್ಕೆ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ದಾಖಲಾಗಿದ್ದರು. ಅವರಿಗೆ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಯೂ ಇತ್ತು. ವೈರಲ್ ಅಥವಾ ಬ್ಯಾಕ್ಟೀರಿಯಲ್ ಕಾರಣದಿಂದ ಉಂಟಾದ ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಂ ಅವರಿಗಿದೆಯೆಂದು ತಪಾಸಣೆ ನಡೆಸಿದ ವೈದ್ಯರು ಕಂಡುಕೊಂಡಿದ್ದರು. ಆ ಹಂತದಲ್ಲಿ ಅದೊಂದು ಕೋವಿಡ್ ಪ್ರಕರಣವಾಗಿರಲಿಲ್ಲ ಹಾಗೂ ಅವರನ್ನು ಸರಕಾರ ನಮ್ಮ ಆಸ್ಪತ್ರೆಗೆ ರೆಫರ್ ಮಾಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ರೋಗಿಗೆ ಅಂದಾಜು ಚಿಕಿತ್ಸಾ ವೆಚ್ಚದ ಕುರಿತು ಹೇಳಲಾಗುತ್ತದೆ. ಕೋವಿಡ್ ಪಾಸಿಟಿವ್ ಆಗಿರುವ ಎಲ್ಲಾ ರೋಗಿಗಳಿಗೆ ಸರಕಾರದ ನೀತಿಯಂತೆಯೇ ಚಿಕಿತ್ಸೆ ನೀಡಲಾಗುತ್ತದೆ’’ ಎಂದು ಹೇಳಿದ್ದಾರೆ.

ಕೋವಿಡ್ ಚಿಕಿತ್ಸೆ ದೊರೆಯುವ ತನಕ ಸರಕಾರವು ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಿದ ರೋಗಿಗಳಿಗೆ ಸರಕಾರ ಸೂಚಿಸಿದ ದರಗಳಲ್ಲಿಯೇ ಚಿಕಿತ್ಸೆ ನೀಡಬೇಕು ಎಂದು ಬಿಬಿಎಂಪಿ ಆಯುಕ್ತರು ಹಾಗೂ ಆರೋಗ್ಯ ಆಯುಕ್ತರು ಮಂಗಳವಾರ ಹೊರಡಿಸಿದ ಸುತ್ತೋಲೆ ತಿಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News