ದ.ಕ. ಜಿಲ್ಲೆಯಲ್ಲಿ ಆಮ್ಲಜನಕಯುಕ್ತ ಹಾಸಿಗೆಗಳನ್ನು ಹೆಚ್ಚಿಸಲು ಡಿಸಿಎಂ ಅಶ್ವತ್ಥ ನಾರಾಯಣ ಸೂಚನೆ

Update: 2020-07-17 18:38 GMT

ಬೆಂಗಳೂರು, ಜು.17: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಸ್ಪತ್ರೆ, ತಾಲೂಕು ಹಾಗೂ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕಯುಕ್ತ ಹಾಸಿಗೆಗಳ ಸಂಖ್ಯೆಯನ್ನು ಕೂಡಲೆ ಹೆಚ್ಚಿಸಬೇಕು ಎಂದು ಜಿಲ್ಲಾಡಳಿತಕ್ಕೆ ಉಪ ಮುಖ್ಯಮಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೂಚಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲಾಸ್ಪತ್ರೆ ವೆನ್‍ಲಾಕ್ ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನೇಟೆಡ್ ಬೆಡ್‍ಗಳನ್ನು ಕೂಡಲೇ ಹೆಚ್ಚಿಸಬೇಕು. ದಿನೇದಿನೇ ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡುವುದು ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು.

ವೆನ್‍ಲಾಕ್ ಆಸ್ಪತ್ರೆಯಲ್ಲಿ ಈಗಾಗಲೇ 150 ಹಾಸಿಗೆಗಳಿಗೆ ಆಮ್ಲಜನಕ ವ್ಯವಸ್ಥೆ ಇರುವ ಅಂಶವನ್ನು ಜಿಲ್ಲಾಧಿಕಾರಿ ಡಿಸಿಎಂ ಗಮನಕ್ಕೆ ತಂದರು. ಸದ್ಯಕ್ಕೆ ಇಷ್ಟು ಪ್ರಮಾಣದ ಆಕ್ಸಿಜನೇಟೆಡ್ ಬೆಡ್ ಗಳು ಸಾಕಾಗುವುದಿಲ್ಲ. ಈ ಪ್ರಮಾಣವನ್ನು 450ಕ್ಕೆ ಹೆಚ್ಚಿಸಿ. ಕೂಡಲೇ ಈ ಕುರಿತ ಪ್ರಸ್ತಾವನೆಯನ್ನು ಆರೋಗ್ಯ ಇಲಾಖೆ ಆಯುಕ್ತರಿಗೆ ಕಳಿಸುವಂತೆ ಸೂಚಿಸಿದ ಅವರು, ಇದರ ಜತೆಗೆ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಇಂಥ ಬೆಡ್ ನ ವ್ಯವಸ್ಥೆ ಆಗಲೇಬೇಕು ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.

ಬೆಡ್ ಪಡೆಯಲು ಸೂಚನೆ: ಜಿಲ್ಲೆಯಲ್ಲಿ 8 ವೈದ್ಯಕೀಯ ಕಾಲೇಜುಗಳಿವೆ. ಸಾಕಷ್ಟು ಖಾಸಗಿ ಆಸ್ಪತ್ರೆಗಳಿವೆ. ಹೀಗೆ ಕಾಲೇಜು, ಸರಕಾರಿ-ಖಾಸಗಿ ಆಸ್ಪತ್ರೆ ಸೇರಿ ಎಲ್ಲೆಡೆ ಕನಿಷ್ಠ 8 ಸಾವಿರಕ್ಕೂ ಹೆಚ್ಚು ಬೆಡ್ಡುಗಳಿವೆ. ಕೂಡಲೇ ಇವರಿಂದ ಅವುಗಳನ್ನು ಸರಕಾರದ ವಶಕ್ಕೆ ಪಡೆದುಕೊಳ್ಳಬೇಕು. ತತ್‍ಕ್ಷಣವೇ ಆಯಾ ಆಡಳಿತ ಮಂಡಳಿಗಳ ಜತೆ ಮಾತನಾಡಿ ಒಪ್ಪಂದ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗೆ ಅಶ್ವತ್ಥ ನಾರಾಯಣ ಸೂಚಿಸಿದರು.

ಸರಕಾರಿ, ಖಾಸಗಿ ಯಾವುದೇ ಆಸ್ಪತ್ರೆ ಇರಲಿ, ಸರಕಾರದಿಂದ ಶಿಫಾರಸ್ಸಾದ ರೋಗಿಗಳಿಗೆ ಚಿಕಿತ್ಸೆ ಸಂಪೂರ್ಣ ಉಚಿತ. ಖಾಸಗಿ ಆಸ್ಪತ್ರೆಗಳಿಗೆ ಆ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ಯಾರೂ ಕೂಡ ರೋಗಿಗಳಿಂದ ಹಣ ಪಡೆಯುವಂತಿಲ್ಲ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ರೋಗಿಗಳನ್ನು ನೇರವಾಗಿ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗಳಿಗೇ ಕಳಿಸಬೇಕು. ವಿನಾಕಾರಣ ರೋಗಿಯನ್ನು ಸುತ್ತಿಸಬಾರದು ಎಂದು ಅವರು ತಾಕೀತು ಮಾಡಿದರು.

ಆಸ್ಪತ್ರೆಗೆ ಬರುವ ರೋಗಿಗೆ ಕೂಡಲೇ ಬೆಡ್ ಹಂಚಿಕೆಯಾಗಬೇಕು. ಇದೇ ವೇಳೆ ಜಿಲ್ಲೆಯ ಕೋವಿಡ್ ಕೇರ್ ಸೆಂಟರುಗಳಲ್ಲಿ 250 ಹಾಸಿಗೆಗಳು ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿ 3,800 ಹಾಸಿಗೆಗಳು ಲಭ್ಯವಾಗಲಿವೆ ಎಂಬ ಅಂಶವನ್ನು ಜಿಲ್ಲಾಧಿಕಾರಿ ಉಪ ಮುಖ್ಯಮಂತ್ರಿ ಗಮನಕ್ಕೆ ತಂದರು.

ಡ್ಯಾಶ್ ಬೋರ್ಡ್ ವ್ಯವಸ್ಥೆಗೆ ಸೂಚನೆ: ಕೋವಿಡ್ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಬೇಕಾದರೆ ಡ್ಯಾಶ್ ಬೋರ್ಡ್ ವ್ಯವಸ್ಥೆಯನ್ನು ಉತ್ತಮವಾಗಿ ಮಾಡಿಕೊಳ್ಳಬೇಕು. ಎಲ್ಲಿ ಬೆಡ್ಡುಗಳಿವೆ? ರೋಗಿಗಳು ಎಷ್ಟಿದ್ದಾರೆ? ಮೂಲಸೌಕರ್ಯಗಳ ವ್ಯವಸ್ಥೆ ಇತ್ಯಾದಿ ಸೇರಿದಂತೆ ಎಲ್ಲ ಮಾಹಿತಿ ಈ ಡ್ಯಾಶ್ ಬೋರ್ಡ್‍ನಲ್ಲೇ ಸಿಗಬೇಕು ಎಂದು ಅವರು ಹೇಳಿದರು.

ಯಾವುದೇ ವ್ಯಕ್ತಿಗೆ ಸೋಂಕು ಪಾಸಿಟೀವ್ ಬಂದರೆ ಆ ವಿಷಯವನ್ನು ಜನರಿಗೆ ತಿಳಿಸಿ. ಆಗ ಜನರಲ್ಲಿ ಆತಂಕ, ಗೊಂದಲ ತಪ್ಪುತ್ತದೆ. ಜತೆಯಲ್ಲೇ ನಾನ್ ಕೋವಿಡ್ ರೋಗಿಗಳಿಗೆ  ಆದ್ಯತೆಯ ಮೇರೆಗೆ ಚಿಕಿತ್ಸೆ ಸಿಗುವಂತೆ ಆಗಬೇಕು. ಸೆಂಟ್ರಲೈಸ್ಡ್ ರಿಪೋರ್ಟಿಂಗ್ ಸಿಸ್ಟಂ ಅನ್ನು ಅಳವಡಿಸಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಜಿಲ್ಲೆಯಲ್ಲಿ ಸದ್ಯಕ್ಕೆ 59 ಆಂಬುಲೆನ್ಸುಗಳಿದ್ದು, ಮತ್ತಷ್ಟು ಖರೀದಿಸಿ, ಹೆಚ್ಚುವರಿಯಾಗಿ ಚಾಲಕರನ್ನು ನೇಮಿಸಿಕೊಳ್ಳಿ. ಊಟ, ಔಷಧಿ, ಪಿಪಿಇ ಕಿಟ್ಟುಗಳು ಕೊರತೆಯಾಗದಂತೆ ನೋಡಿಕೊಳ್ಳಿ. ಹೋಮ್ ಕೇರ್ ಬಗ್ಗೆ ಮತ್ತಷ್ಟು ಅರಿವು ಮೂಡಿಸಿ ಎಂದು ಅವರು ಸೂಚಿಸಿದರು.

ಈಗಾಗಲೇ ಜಿಲ್ಲೆಯಾದ್ಯಂತ 430 ಜನರು ಹೋಮ್ ಕೇರ್ ಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕರು ತಮ್ಮ ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುವ ಒಲವು ತೋರುತ್ತಿದ್ದಾರೆಂದು ಜಿಲ್ಲಾಧಿಕಾರಿ ಸಿಂಧೂ ಮಾಹಿತಿ ನೀಡಿದರು. ಇದರ ಜತೆಯಲ್ಲೇ ಸೋಂಕಿತರ ಪರೀಕ್ಷೆಯ ಪ್ರಮಾಣವನ್ನು ಹೆಚ್ಚು ಮಾಡುವಂತೆ ಅಶ್ವತ್ಥ ನಾರಾಯಣ ತಿಳಿಸಿದರು. ಸದ್ಯಕ್ಕೆ ದಿನವೊಂದಕ್ಕೆ 750 ಟೆಸ್ಟ್ ಆಗುತ್ತಿದೆ. ಈವರೆಗೂ 38 ಸಾವಿರ ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ವಿಡಿಯೋ ಸಂವಾದದಲ್ಲಿ ಉಪ ಮುಖ್ಯಮಂತ್ರಿ ಜೊತೆ ದ.ಕ.ಜಿಲ್ಲಾ ಉಸ್ತುವಾರಿ ಹಾಗೂ ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜಾ, ಪಾಲ್ಗೊಂಡಿದ್ದರು. ಮಂಗಳೂರಿನಿಂದ ಜಿಲ್ಲಾಧಿಕಾರಿಯ ಜತೆ ಶಾಸಕರಾದ ಯು.ಟಿ.ಖಾದರ್, ವೇದವ್ಯಾಸ ಕಾಮತ್ ಭಾಗಿಯಾಗಿದ್ದರು. ಜತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News