ಈ ಬಾರಿಯ ಐಪಿಎಲ್ ಟೂರ್ನಿ ಯುಎಇಯಲ್ಲಿ ನಡೆಸಲು ಬಿಸಿಸಿಐ ನಿರ್ಧಾರ

Update: 2020-07-18 03:50 GMT

ಹೊಸದಿಲ್ಲಿ: ಪ್ರಸಕ್ತ ಋತುವಿನ ಐಪಿಎಲ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ.

ಶುಕ್ರವಾರ ನಡೆದ ನಾಲ್ಕು ಗಂಟೆಗಳ ಆನ್‍ಲೈನ್ ಮ್ಯಾರಥಾನ್ ಸಭೆಯಲ್ಲಿ ಬಿಸಿಸಿಐ ಪದಾಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದು, ಕಾನೂನು ತೊಡಕಿನಿಂದಾಗಿ ಈ ನಿರ್ಧಾರವನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಕಾರ್ಯದರ್ಶಿ ಜಯ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಯುಎಇನಲ್ಲಿ ಟೂರ್ನಿ ನಡೆಸುವ ಬಗ್ಗೆ ಒಮ್ಮತಕ್ಕೆ ಬರಲಾಗಿದೆ.

ಅತ್ಯಾಧುನಿಕ ಸೌಲಭ್ಯಗಳು ಇರುವ ಕಾರಣದಿಂದ ಬಹುತೇಕ ಎಲ್ಲ ಸದಸ್ಯರು ಯುಎಇ ಆತಿಥ್ಯಕ್ಕೆ ಸಮ್ಮತಿ ಸೂಚಿಸಿದರು. ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ-20 ವಿಶ್ವಕಪ್ ಟೂರ್ನಿ ರದ್ದಾದಲ್ಲಿ ಅಕ್ಟೋಬರ್- ನವೆಂಬರ್ ನಲ್ಲಿ ಐಪಿಎಲ್ ಟೂರ್ನಿ ನಡೆಯುವ ನಿರೀಕ್ಷೆ ಇದೆ. ಶ್ರೀಲಂಕಾದಲ್ಲಿ ಟೂರ್ನಿ ನಡೆಸುವ ಪ್ರಸ್ತಾವದ ಬಗ್ಗೆಯೂ ಚರ್ಚೆ ನಡೆಯಿತು. ಆದರೆ ಉತ್ತಮ ಸೌಲಭ್ಯ ಇರುವ ಹಿನ್ನೆಲೆಯಲ್ಲಿ ಮತ್ತು ಜೈವಿಕ ಸುರಕ್ಷಾ ಪರಿಸರದ ಹಿನ್ನೆಲೆಯಲ್ಲಿ ಯುಎಇಯನ್ನು ಅಂತಿಮಪಡಿಸಲಾಯಿತು ಎಂದು ತಿಳಿದುಬಂದಿದೆ.

ಶ್ರೀಲಂಕಾದಲ್ಲಿ ಟೂರ್ನಿ ನಡೆಸಿದರೆ ಕನಿಷ್ಠ ಮೂರು ಸ್ಥಳಗಳಲ್ಲಿ ಪಂದ್ಯಗಳು ನಡೆಯಬೇಕು. ಒಂದೆಡೆಯಿಂದ ಮತ್ತೊಂದು ಕಡೆಗೆ ವಿಮಾನದಲ್ಲಿ ಪ್ರಯಾಣಿಸಬೇಕು. ಆದರೆ ಯುಎಇಯಲ್ಲಿ ನಡೆದರೆ ಅಬುಧಾಬಿ, ದುಬೈ ಹಾಗೂ ಶಾರ್ಜಾ ಹೀಗೆ ಮೂರು ಕಡೆಗಳಿಗೂ ರಸ್ತೆ ಮೂಲಕ ಪ್ರಯಾಣಿಸಬಹುದು. ಎಲ್ಲರಿಗೂ ವಾಸ್ತವ್ಯಕ್ಕೆ ಕೂಡಾ ಸುಲಭವಾಗಿ ವ್ಯವಸ್ಥೆ ಮಾಡಬಹುದು ಎಂಬ ಕಾರಣಕ್ಕೆ ಯುಎಇ ಆಯ್ಕೆ ಮಾಡಲಾಯಿತು ಎಂದು ಸಭೆಯಲ್ಲಿ ಭಾಗವಹಿಸಿದ ಸದಸ್ಯರೊಬ್ಬರು ವಿವರಿಸಿದ್ದಾರೆ.

ಮುಂದಿನ ವಾರ ಬಿಸಿಸಿಐ, ಐಪಿಎಲ್ ಆಡಳಿತ ಮಂಡಳಿ ಜತೆ ಸಭೆ ನಡೆಸಲಿದೆ. ಅಧಿಕೃತ ಘೋಷಣೆಗೆ ಮುನ್ನ ಎಂಟೂ ಫ್ರಾಂಚೈಸಿಗಳನ್ನೂ ಮಾತುಕತೆಗೆ ಆಹ್ವಾನಿಸಲಾಗುವುದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News