ಬಿಜೆಪಿ ಸೇರಿ 45ನೇ ವಯಸ್ಸಿಗೇ ಪ್ರಧಾನಿಯಾಗುವ ಆಸೆಯೇ?: ಪೈಲಟ್‍ ಗೆ ಕುಟುಕಿದ ಕಾಂಗ್ರೆಸ್

Update: 2020-07-20 04:57 GMT

ಹೊಸದಿಲ್ಲಿ: ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್‍ಗೆ ಏಕಿಷ್ಟು ಆತುರ? ಬಿಜೆಪಿ ಸೇರುವ ಮೂಲಕ 45ನೇ ವಯಸ್ಸಿಗೇ ಪ್ರಧಾನಿಯಾಗುವ ಆಸೆಯೇ ಎಂದು ರಾಜಸ್ಥಾನದ ಮಾಜಿ ರಾಜ್ಯಪಾಲೆ ಹಾಗೂ ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಕುಟುಕಿದ್ದಾರೆ.

ರಾಜ್ಯದಲ್ಲಿ ಪಕ್ಷದ ವಿರುದ್ಧ ಬಂಡಾಯದ ಬಾವುಟ ಬೀಸಿರುವ ಸಚಿನ್ ಮೇಲೆ ವಾಗ್ದಾಳಿ ನಡೆಸಿದ ಅವರು, “ಇಡೀ ದೇಶ ಕೋವಿಡ್-19 ಸಾಂಕ್ರಾಮಿಕ ಹಾಗೂ ಚೀನಾದ ಗಡಿ ಉದ್ವಿಗ್ನತೆಯ ವಿರುದ್ಧ ಹೋರಾಡುತ್ತಿದ್ದರೆ, ಸಚಿನ್ ರಾಜಸ್ಥಾನದ ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ.

ಸಚಿನ್ ಪೈಲಟ್ 26ನೇ ವಯಸ್ಸಿಗೇ ಸಂಸದರಾಗಿ ಕೇಂದ್ರ ಸಚಿವರೂ ಆದರು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ್ದು ಮಾತ್ರವಲ್ಲದೇ ಉಪಮುಖ್ಯಮಂತ್ರಿ ಹುದ್ದೆಯನ್ನೂ ಪಡೆದರು ಎಂದು ಅವರು ವಿವರಿಸಿದ್ದಾರೆ.

ಅಷ್ಟು ಆತುರದಲ್ಲಿ ಎಲ್ಲಿಗೆ ತಲುಪಲು ಬಯಸಿದ್ದೀರಿ? ಬಿಜೆಪಿ ಸೇರುವ ಮೂಲಕ 43ನೇ ವರ್ಷಕ್ಕೇ ಮುಖ್ಯಮಂತ್ರಿಯಾಗಲು, 45ನೇ ವರ್ಷಕ್ಕೆ ಪ್ರಧಾನಿಯಾಗಲು ಹೊರಟಿದ್ದೀರಾ” ಎಂದು 42 ವರ್ಷ ವಯಸ್ಸಿನ ಪೈಲಟ್ ಅವರನ್ನು ಪ್ರಶ್ನಿಸಿದ್ದಾರೆ.

ತಾನು ಬಿಜೆಪಿ ಸೇರುವುದಿಲ್ಲ ಎಂದು ಸಚಿನ್ ಸ್ಪಷ್ಟಪಡಿಸಿದ್ದರೂ, ಗೆಹ್ಲೋಟ್ ಸರ್ಕಾರವನ್ನು ಬೀಳಿಸಲು ಸಚಿನ್ ಬಿಜೆಪಿ ನೆರವು ಪಡೆದಿದ್ದಾರೆ ಎಂದು ಕಾಂಗ್ರೆಸ್ ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News