ಲಾಕ್‍ಡೌನ್ ವಿಸ್ತರಿಸುವ ಉದ್ದೇಶವಿಲ್ಲ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

Update: 2020-07-20 17:43 GMT

ಬೆಂಗಳೂರು, ಜು.20: ನಗರದಲ್ಲಿ ಲಾಕ್‍ಡೌನ್ ಮುಂದುವರಿಸುವ ಉದ್ದೇಶ ನಮ್ಮಲ್ಲಿ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಮ್ ಐಸೋಲೇಷನ್ ಇರುವಂತವರಿಗೆ ವಿಧಾನ ಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೋನ ಔಷಧಿ ಕಿಟ್ ನೀಡುವಂತಹ ಯೋಚನೆ ಇದೆ ಎಂದು ತಿಳಿಸಿದರು.

ದಿನೇ ದಿನೇ ಹೆಚ್ಚು ಕೊರೋನ ಟೆಸ್ಟ್ ಮಾಡುತ್ತಿದ್ದೇವೆ. 40 ಸಾವಿರ ಜನರನ್ನು ಮನೆಯಲ್ಲಿ ಇರುವಂತವರನ್ನು ಗುರುತಿಸಿದ್ದೇವೆ. ಅವರಿಗೆ ಟೆಸ್ಟ್ ಮಾಡಿಸಬೇಕಿದೆ. ಎ ಸಿಸ್ಟಮ್ ಇರುವಂತವರಿಗಾಗಿ ಕೋವಿಡ್ ಕೇರ್ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೊರೋನ ಟೆಸ್ಟ್ ಮಾಡಿದಷ್ಟು ಪಾಸಿಟಿವ್ ಬರುತ್ತಾ ಇದ್ದು, ಅದಕ್ಕೆ ನಾವು ಭಯ ಪಡುವಂತಹ ಅಗತ್ಯವಿಲ್ಲ. ಪಾಸಿಟಿವ್‍ನಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಎ ಸಿಸ್ಟಮ್‍ನವರು ಇದ್ದಾರೆ. ನಗರದ 149 ಕಡೆ 5 ಸಾವಿರ ಕಿಟ್‍ಗಳಿಂದ ಟೆಸ್ಟಿಂಗ್ ನಡೆಯುತ್ತಿದೆ ಎಂದು ತಿಳಿಸಿದರು.

ಬಿಬಿಎಂಪಿಯಿಂದ ಕನ್ಸಲ್ಟೇಷನ್ ತಂಡವನ್ನ ರಚಿಸಲಾಗುವುದು. ತಂಡಕ್ಕೆ ಚಿತ್ರ ನಟ ರಮೇಶ್ ಅರವಿಂದ್ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗುವುದು. ಟೆಸ್ಟಿಂಗ್  ಮಾಡುವುದು ಹಾಗೂ ಐಸೋಲೇಟ್ ಮಾಡುವುದರ ಜತೆಗೆ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ಕೊರೋನ ಮಾಹಿತಿ ಪಡೆದ ಆಯುಕ್ತರು

ನಗರದಲ್ಲಿ ಕೊರೋನ ನಿಯಂತ್ರಣ ತರಲು ಈಗಾಗಲೇ ಕಾರ್ಯಚರಣೆಗೆ ಇಳಿದಿರುವ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು, ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ ರೂಮ್‍ಗಳ ಮುಖ್ಯಸ್ಥರೊಂದಿಗೆ ವಿಡಿಯೋ ಸಂವಾದ ನಡೆಸಿ ಈವರೆಗಿನ ಅಂಕಿ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ನಗರದಲ್ಲಿ ವಾರ್ ರೂಮ್ ಆರಂಭವಾದಾಗಿನಿಂದ ಎಷ್ಟು ಕೋವಿಡ್ ಪ್ರಕರಣಗಳು ದಾಖಲಾಗಿವೆ. ಎಷ್ಟು ಜನರು ಮೃತಪಟ್ಟಿದ್ದಾರೆ. ವಾರದಿಂದ ವಾರಕ್ಕೆ ಎಷ್ಟು ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಎಷ್ಟು ಜನರು ಗುಣಮುಖರಾಗಿದ್ದಾರೆ. ಪ್ರತಿ ದಿನವೂ ಸೋಂಕಿತರು ಯಾವ ಪ್ರಮಾಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದಕ್ಕೆ ಕಾರಣಗಳೇನು ಎಂಬುದು ಸೇರಿದಂತೆ ವಾರ್ ರೂಮ್‍ನಲ್ಲಿ ದಿನ ದಾಖಲಾಗುತ್ತಿರುವ ಅಂಕಿ ಅಂಶಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಗರದ ಯಾವ ವಲಯದಲ್ಲಿ ಹೆಚ್ಚು ಕೊರೋನ ಸೋಂಕು ಹರಡುತ್ತಿದೆ. ಅದಕ್ಕೆ ಕಾರಣಗಳೇನು ಅಲ್ಲಿ ಕೊರೋನ ತಡೆಗಟ್ಟಲು ಯಾವ ಕ್ರಮ ಕೈ ಗೊಳ್ಳಬೇಕು ಎಂಬ ಬಗ್ಗೆ ಅವರು ಅದಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News