ಗ್ರಾಮ-ನಗರಗಳ ನಡುವೆ ಹೆಚ್ಚುತ್ತಿದೆ ಶಿಕ್ಷಣದ ಅಂತರ

Update: 2020-07-22 04:35 GMT

ಭಾರತ ತನ್ನೊಳಗೆ ಪೋಷಿಸಿಕೊಂಡು ಬಂದ ಸಾಮಾಜಿಕ ಅಂತರಗಳೇ ಇಲ್ಲಿ ಆರ್ಥಿಕ ಅಂತರಗಳನ್ನು ಸೃಷ್ಟಿಸಿತು. ಆಧುನಿಕ ದಿನಗಳಲ್ಲಿ ಈ ಅಂತರ ಇನ್ನಷ್ಟು ಹೆಚ್ಚುವ ಲಕ್ಷಣಗಳು ಕಾಣುತ್ತಿವೆ. ಅದಕ್ಕೆ ಮುಖ್ಯ ಕಾರಣ, ಶಿಕ್ಷಣ ಕ್ಷೇತ್ರದಲ್ಲಿ ಬೇರೆ ಬೇರೆ ರೂಪಗಳ ಮೂಲಕ ಹೆಚ್ಚುತ್ತಿರುವ ಅಂತರಗಳು. ಆರ್ಥಿಕತೆಯ ಹೆಸರಿನಲ್ಲಿ, ಭಾಷಾ ಮಾಧ್ಯಮಗಳ ಹೆಸರಿನಲ್ಲಿ, ನಗರ-ಗ್ರಾಮೀಣ ಪ್ರದೇಶಗಳ ಹೆಸರಿನಲ್ಲಿ ಶಿಕ್ಷಣದ ನಡುವೆ ಅಂತರ ಹೆಚ್ಚುತ್ತಲೇ ಹೋಗುತ್ತಿದೆ. ಇದು ಅಸಮಾನ ಭಾರತವೊಂದರ ಸೃಷ್ಟಿಗೆ ಕಾರಣವಾಗುತ್ತಿದೆ. ಕೊರೋನದ ದಿನಗಳಲ್ಲಿ ಜಾರಿಯಲ್ಲಿರುವ ಆನ್‌ಲೈನ್ ಶಿಕ್ಷಣ ಈ ಕಂದರವನ್ನು ಇನ್ನಷ್ಟು ಆಳ ಮತ್ತು ವಿಸ್ತಾರಗೊಳಿಸುತ್ತಿದೆ. ಇದು ಅಂತಿಮವಾಗಿ ನಗರ ಪ್ರದೇಶದ ಜನರಿಗಷ್ಟೇ ಶಿಕ್ಷಣ ಎನ್ನುವಲ್ಲಿಗೆ ಶಿಕ್ಷಣ ಕ್ಷೇತ್ರವನ್ನು ತಲುಪಿಸುತ್ತಿದೆ. ಡಿಜಿಟಲ್ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದವರಿಗಷ್ಟೇ ಶಿಕ್ಷಣ ಎನ್ನುವುದು ಈ ಆನ್‌ಲೈನ್ ಶಿಕ್ಷಣದ ನಿಜವಾದ ವ್ಯಾಖ್ಯಾನ. ಇದು ‘ಉಳ್ಳವರಿಗಷ್ಟೇ ಶಿಕ್ಷಣ’ ಎನ್ನುವುದರ ಇನ್ನೊಂದು ರೂಪವಾಗಿದೆ.

ನಗರ ಮತ್ತು ಗ್ರಾಮೀಣ ಶಿಕ್ಷಣದ ನಡುವಿನ ಅಂತರದ ಕುರಿತಂತೆ ಚರ್ಚೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಮಾತೃಭಾಷೆಯಲ್ಲಿ ಶಿಕ್ಷಣ ಎನ್ನುವ ಪದ ನಗರದಲ್ಲಿ ಸಂಪೂರ್ಣ ಅರ್ಥ ಕಳೆದುಕೊಂಡಿದೆ. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವ ಸರಕಾರಿ ಶಾಲೆಗಳು ಬಹುತೇಕ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಗ್ರಾಮೀಣ ಪ್ರದೇಶಗಳಲ್ಲಿ. ಪರಿಣಾಮವಾಗಿ ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಶಿಕ್ಷಣದ ವೆಚ್ಚದಲ್ಲೇ ಭಾರೀ ಅಂತರವಿದೆ. ಶಿಕ್ಷಣದ ಮೇಲಿನ ವೆಚ್ಚ ಹಾಗೂ ಡಿಜಿಟಲ್ ಸಂಪನ್ಮೂಲಗಳ ಲಭ್ಯತೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ವಿದ್ಯಾರ್ಥಿಗಳ ನಡುವೆ ಅಗಾಧವಾದ ಅಂತರವಿರುವುದನ್ನು ರಾಷ್ಟ್ರೀಯ ಅಂಕಿಅಂಶ ಕಾರ್ಯಾಲಯ (ಎನ್‌ಎಸ್‌ಒ) ನಡೆಸಿದ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.ಕಳೆದ ವಾರ ಬಿಡುಗಡೆಯಾದ ಈ ಸಮೀಕ್ಷೆಯಲ್ಲಿ 8 ಲಕ್ಷ ಹಳ್ಳಿಗಳು ಹಾಗೂ 6 ಸಾವಿರ ಪಟ್ಟಣ ಪ್ರದೇಶಗಳ 1.13 ಲಕ್ಷ ಕುಟುಂಬಗಳಿಗೆ ಸೇರಿದ ಒಟ್ಟು 1.52 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 2017ರ ಜುಲೈನಿಂದ 2018ರ ಜೂನ್ ನಡುವೆ ಈ ಸಮೀಕ್ಷೆಯನ್ನು ನಡೆಸಲಾಗಿತ್ತು.

ಗ್ರಾಮೀಣ ಕುಟುಂಬಗಳಲ್ಲಿ ಪ್ರೌಢ ಶಿಕ್ಷಣದವರೆಗೆ ಓರ್ವ ವಿದ್ಯಾರ್ಥಿಯ ಶಿಕ್ಷಣದ ವೆಚ್ಚವು ಸರಾಸರಿ 28,157 ರೂ.ಗಳಾಗಿದ್ದರೆ, ನಗರಪ್ರದೇಶದ ವಿದ್ಯಾರ್ಥಿಯಲ್ಲಿ ಆ ವೆಚ್ಚ ಸುಮಾರು 84,712 ರೂ.ಗಳಾಗಿವೆ. ಕೆಲವೊಮ್ಮೆ ಇದು ಲಕ್ಷ ರೂಪಾಯಿಯನ್ನು ದಾಟುತ್ತದೆ. ನಗರಪ್ರದೇಶಗಳ ಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣಕ್ಕೆ ಸರಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಿಗೆ ಆದ್ಯತೆ ನೀಡುತ್ತಿರುವುದು ಶಿಕ್ಷಣದ ಮೇಲಿನ ವೆಚ್ಚದಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ನಡುವೆ ಅಗಾಧವಾದ ವ್ಯತ್ಯಾಸವಿರಲು ಪ್ರಮುಖ ಕಾರಣವಾಗಿದೆ. ಸಮೀಕ್ಷೆಯ ಪ್ರಕಾರ, ಗ್ರಾಮಾಂತರ ಪ್ರದೇಶಗಳ ಶೇ.76.1ರಷ್ಟು ವಿದ್ಯಾರ್ಥಿಗಳು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಲಿಯುತ್ತಿದ್ದರೆ, ನಗರ ಪ್ರದೇಶಗಳಲ್ಲಿ ಆ ಸಂಖ್ಯೆ ಕೇವಲ 38 ಶೇಕಡ ಆಗಿದೆ. ನಗರ ಪ್ರದೇಶದಲ್ಲಿರುವ ಜನರ ಆರ್ಥಿಕ ಸಬಲತೆಯೂ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ. ನಗರ ಪ್ರದೇಶದಲ್ಲಿ ವಾಸಿಸುವ ಜೋಪಡಿವಾಸಿಗಳಷ್ಟೇ ಸರಕಾರಿ ಶಾಲೆಗಳನ್ನು ಆಶ್ರಯಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಡಿಜಿಟಲ್ ಶಿಕ್ಷಣದಲ್ಲಿಯೂ ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ಹಿನ್ನೆಲೆಯಲ್ಲಿ ಬಹುತೇಕ ಶಾಲೆಗಳು ಆನ್‌ಲೈನ್ ಶಿಕ್ಷಣಕ್ಕೆ ಮೊರೆ ಹೋಗಿರುವ ಸಂದರ್ಭದಲ್ಲಿ ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ.ಕೇವಲ 4 ಶೇಕಡದಷ್ಟು ಗ್ರಾಮೀಣ ಕುಟುಂಬಗಳು ಕಂಪ್ಯೂಟರ್‌ಗಳ ಲಭ್ಯತೆಯನ್ನು ಹೊಂದಿದ್ದರೆ, ನಗರಪ್ರದೇಶಗಳ ಶೇ.23ರಷ್ಟು ಕುಟುಂಬಗಳಲ್ಲಿ ಆ ಸೌಲಭ್ಯವಿದೆ. ಇದಕ್ಕಿಂತಲೂ ಹೆಚ್ಚಾಗಿ ಗ್ರಾಮಾಂತರ ಪ್ರದೇಶ ಶೇ.14 ಹಾಗೂ ನಗರ ಪ್ರದೇಶಗಳ ಶೇ.42 ಕುಟುಂಬಗಳು ಇಂಟರ್‌ನೆಟ್ ಸಂಪರ್ಕವನ್ನು ಹೊಂದಿವೆ. ಇಂಟರ್‌ನೆಟ್ ಸೌಲಭ್ಯ ಹೊಂದಿದಾಕ್ಷಣ, ಗ್ರಾಮೀಣ ಪ್ರದೇಶಕ್ಕೆ 24 ಗಂಟೆಯೂ ಸಂಪರ್ಕ ಸಿಗಬೇಕು ಎಂದಿಲ್ಲ. ಡಿಜಿಟಲ್ ತಂತ್ರಜ್ಞಾನವನ್ನು ನಿರ್ವಹಿಸಬಲ್ಲ ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ಜನಸಂಖ್ಯೆಯ ಪ್ರಮಾಣದ ಬಗ್ಗೆಯೂ ಸಮೀಕ್ಷೆಯು ಅವಲೋಕನ ನಡೆಸಿದೆ. ಗ್ರಾಮಾಂತರ ಕುಟುಂಬಗಳಲ್ಲಿ ಶೇ.9.9ರಷ್ಟು ವಿದ್ಯಾರ್ಥಿಗಳು ಮಾತ್ರವೇ ಡಿಜಿಟಲ್ ತಂತ್ರಜ್ಞಾನವನ್ನು ನಿರ್ವಹಿಸಲು ಸಮರ್ಥರಾಗಿದ್ದಾರೆ. ಶೇ.13ರಷ್ಟು ವಿದ್ಯಾರ್ಥಿಗಳು ಮಾತ್ರವೇ ಇಂಟರ್‌ನೆಟ್ ಬಳಸಲು ಸಮರ್ಥರಾಗಿದ್ದಾರೆ.ಇದೇ ಮಾನದಂಡದಲ್ಲಿ ನಗರ ಪ್ರದೇಶಗಳ ಕುಟುಂಬಗಳ ಶೇ.32.3ರಷ್ಟು ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನವನ್ನು ನಿರ್ವಹಿಸಲು ಶಕ್ತರಾಗಿದ್ದು, ಶೇ.32.4 ವಿದ್ಯಾರ್ಥಿಗಳು ಇಂಟರ್‌ನೆಟ್ ಬಳಸುವ ಸಾಮರ್ಥ್ಯ ಹೊಂದಿದ್ದಾರೆ ಹಾಗೂ ಕಳೆದ 30 ದಿನಗಳಲ್ಲಿ 33.8 ಶೇಕಡ ವಿದ್ಯಾರ್ಥಿಗಳು ಇಂಟರ್‌ನೆಟ್ ಬಳಸಿದ್ದಾರೆ.

ಡಿಜಿಟಲ್ ತಂತ್ರಜ್ಞಾನ ಬಳಕೆಯಲ್ಲಿ ಲಿಂಗ ಅಸಮಾನತೆ ಕೂಡಾ ಇರುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳು ಡಿಜಿಟಲ್ ತಂತ್ರಜ್ಞಾನ ಬಳಕೆಯಲ್ಲಿ ಅತ್ಯಂತ ಹಿಂದುಳಿದಿದ್ದಾರೆ. ಕೇವಲ 7 ಶೇಕಡ ಗ್ರಾಮೀಣ ವಿದ್ಯಾರ್ಥಿನಿಯರು ಮಾತ್ರವೇ ಡಿಜಿಟಲ್ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಅವರಲ್ಲಿ ಇಂಟರ್‌ನೆಟ್ ಸಂಪರ್ಕ ಹೊಂದಿದವರ ಸಂಖ್ಯೆ 10.8 ಶೇಕಡ ಆಗಿದ್ದರೆ, ಕಳೆದ 30 ದಿನಗಳಲ್ಲಿ ಕೇವಲ 6.6 ಶೇಕಡ ವಿದ್ಯಾರ್ಥಿನಿಯರು ಮಾತ್ರವೇ ಇಂಟರ್‌ನೆಟ್ ಬಳಸಿದ್ದಾರೆ.ಆದಾಗ್ಯೂ, ಮಾಧ್ಯಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿದ ವಿದ್ಯಾರ್ಥಿಗಳ ಪ್ರಮಾಣವು ಗ್ರಾಮೀಣ ಹಾಗೂ ನಗರಪ್ರದೇಶದ ಕುಟುಂಬಗಳಲ್ಲಿ ಹೆಚ್ಚುಕಡಿಮೆ ಸರಿಸಮಾನವಾಗಿರುವುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ಗ್ರಾಮಾಂತರ ಪ್ರದೇಶಗಳ ಶೇ.92.7ರಷ್ಟು ಕುಟುಂಬಗಳಿಗೆ 1 ಕಿ.ಮೀ. ವ್ಯಾಪ್ತಿಯೊಳಗೆ ಪ್ರಾಥಮಿಕ ಶಾಲೆಯಿದ್ದರೆ, ನಗರಪ್ರದೇಶಗಳ 87.2 ಶೇಕಡ ಕುಟುಂಬಗಳು 1 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆಯನ್ನು ಹೊಂದಿವೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅರ್ಧದಲ್ಲೇ ಶಾಲಾಶಿಕ್ಷಣವನ್ನು ತೊರೆದಿರುವ ಪ್ರಮಾಣ ಗಣನೀಯವಾಗಿರುವುದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ವಿಶೇಷವಾಗಿ ಹಿರಿಯ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಮಟ್ಟದಲ್ಲಿ ಈ ಅಂತರ ಎದ್ದು ಕಾಣುತ್ತಿದೆ. ಹಿರಿಯ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಅರ್ಧದಲ್ಲೇ ತೊರೆದ ವಿದ್ಯಾರ್ಥಿಗಳ ಸಂಖ್ಯೆ ಗ್ರಾಮಾಂತರ ಪ್ರದೇಶದಲ್ಲಿ ಕ್ರಮವಾಗಿ ಶೇ.18 ಹಾಗೂ ಶೇ. 20 ಆಗಿದ್ದರೆ, ನಗರ ಪ್ರದೇಶದಲ್ಲಿ ಅದು ಕ್ರಮವಾಗಿ ಶೇ.15 ಹಾಗೂ ಶೇ.17 ಆಗಿದೆ. ಈ ಎಲ್ಲ ಅಂಶಗಳು, ಕೊರೋನೋತ್ತರ ಭಾರತದಲ್ಲಿ ಶಿಕ್ಷಣ ಹೇಗೆ ಮುಖ್ಯವಾಗಿ ನಗರ ಪ್ರದೇಶ, ಆ ಬಳಿಕ ಶ್ರೀಮಂತರನ್ನಷ್ಟೇ ಕೇಂದ್ರವಾಗಿಸಿ ಮುಂದುವರಿಯಲಿದೆ ಎನ್ನುವುದನ್ನು ಬಹಿರಂಗ ಪಡಿಸುತ್ತದೆ. ಈಗಾಗಲೇ ನಗರ ಪ್ರದೇಶದಲ್ಲಿ ಆನ್‌ಲೈನ್ ಮೂಲಕ ಬಹುತೇಕ ಖಾಸಗಿ ಶಾಲೆಗಳು ತೆರೆದುಕೊಂಡಿದ್ದರೆ, ಸರಕಾರಿ ಶಾಲೆಗಳ ಮಕ್ಕಳು ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಭವಿಷ್ಯದ ಕುರಿತಂತೆ ಆತಂಕ, ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಭಾರತದ ಸಾಮಾಜಿಕ ಮತ್ತು ಆರ್ಥಿಕ ಅಂತರಗಳ ಮೇಲೆ ಇದು ಭವಿಷ್ಯದಲ್ಲಿ ಇನ್ನಷ್ಟು ದುಷ್ಪರಿಣಾಮ ಬೀರಲಿವೆ. ಅಭಿವೃದ್ಧಿ ಹೊಂದಿದ ಭಾರತದ ಕೊಂಡಿಯಿಂದ ಗ್ರಾಮೀಣ ಜನರು ಇನ್ನಷ್ಟು ದೂರ ಸರಿಯುವ ಅಪಾಯ ಎದ್ದು ಕಾಣುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News