ದೇಶದಲ್ಲಿ ಜುಲೈನಲ್ಲೇ ಆರು ಲಕ್ಷ ದಾಟಿದ ಕೊರೋನ ಪ್ರಕರಣ

Update: 2020-07-22 03:48 GMT

ಹೊಸದಿಲ್ಲಿ, ಜು.22: ಭಾರತದಲ್ಲಿ ಜುಲೈ ತಿಂಗಳ ಮೊದಲ ಮೂರು ವಾರದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಆರು ಲಕ್ಷವನ್ನು ದಾಟಿದ್ದು, ಜೂನ್ ಅಂತ್ಯದವರೆಗೆ ಹಿಂದಿನ ಎಲ್ಲ ತಿಂಗಳುಗಳಲ್ಲಿ ದಾಖಲಾದ 5.9 ಲಕ್ಷ ಪ್ರಕರಣಗಳಿಗಿಂತಲೂ ಇದು ಅಧಿಕ. ಅಂತೆಯೇ ಜುಲೈ ತಿಂಗಳಲ್ಲಿ ಸುಮಾರು 11 ಸಾವಿರ ಮಂದಿ ಮಾರಕ ವೈರಸ್‌ಗೆ ಬಲಿಯಾಗಿದ್ದು, ಇದು ಸೋಂಕಿನಿಂದ ಮೃತಪಟ್ಟ ಒಟ್ಟು ಸಂಖ್ಯೆಯ ಶೇಕಡ 40ರಷ್ಟಾಗಿದೆ.

ಭಾರತದಲ್ಲಿ ಮಂಗಳವಾರ 670 ಸೋಂಕಿತರು ಕೊನೆಯುಸಿರೆಳೆದಿದ್ದು, ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಕೋವಿಡ್ ಸೋಂಕಿತರು ಬಲಿಯಾದ ದೇಶಗಳ ಪೈಕಿ ಭಾರತ ಏಳನೇ ಸ್ಥಾನಕ್ಕೇರಿದೆ. ಇದುವರೆಗೆ 28,422 ಸಾವು ಸಂಭವಿಸಿದ ಸ್ಪೇನ್ ಏಳನೇ ಸ್ಥಾನದಲ್ಲಿತ್ತು. ಭಾರತದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 28,723.

ದೇಶದಲ್ಲಿ ಮಂಗಳವಾರ ಎರಡನೇ ಗರಿಷ್ಠ ಸಂಖ್ಯೆಯ ಪ್ರಕರಣಗಳು (38,444) ದಾಖಲಾಗಿದ್ದು, ಕಳೆದ ರವಿವಾರ ಮಾತ್ರ 40 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು. ಭಾರತದ ಒಟ್ಟು ಸೋಂಕಿತರ ಸಂಖ್ಯೆ 11.9 ಲಕ್ಷ ತಲುಪಿದೆ. 7.5 ಲಕ್ಷ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4.1 ಲಕ್ಷ ತಲುಪಿದೆ.

ಮೊಟ್ಟಮೊದಲ ಬಾರಿಗೆ ಗುಜರಾತ್‌ನಲ್ಲಿ ಒಂದೇ ದಿನ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಅಂತೆಯೇ ರಾಜಸ್ಥಾನ (983) ಹಾಗೂ ತ್ರಿಪುರಾ (202) ಇದುವರೆಗಿನ ಗರಿಷ್ಠ ಪ್ರಕರಣಗಳನ್ನು ಕಂಡಿವೆ. ತಮಿಳುನಾಡು (4,956), ಆಂಧ್ರಪ್ರದೇಶ (4,944), ಉತ್ತರ ಪ್ರದೇಶ (2,151), ಮಧ್ಯಪ್ರದೇಶ (785) ಮತ್ತು ಪಂಜಾಬ್ (381)ನಲ್ಲಿ ಎರಡನೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ಮಂಗಳವಾರ ದಾಖಲಾಗಿವೆ. ದಿಲ್ಲಿಯಲ್ಲಿ ಸೋಮವಾರ ಒಂದು ಸಾವಿರಕ್ಕಿಂತ ಪ್ರಕರಣಗಳು ದಾಖಲಾಗಿದ್ದವು. ಆದರೆ ಮಂಗಳವಾರ ಅಲ್ಪ ಏರಿಕೆ ಕಂಡುಬಂದಿದ್ದು, 1349 ಪ್ರಕರಣಗಳು ಹಾಗೂ 27 ಸಾವಿನ ಪ್ರಕರಣಗಳು ವರದಿಯಾಗಿವೆ.

ಸತತ ಆರನೇ ದಿನ ಮಹಾರಾಷ್ಟ್ರದಲ್ಲಿ 8 ಸಾವಿರಕ್ಕೂ ಅಧಿಕ ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಮಂಗಳವಾರ 8369 ಪ್ರಕರಣಗಳು ದಾಖಲಾಗಿದ್ದು, ಒಟ್ಟು 3,27,031 ಮಂದಿಗೆ ಸೋಂಕು ತಗುಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News