ಆಶಾ ಕಾರ್ಯಕರ್ತೆಯರ ಕಷ್ಟಕ್ಕೆ ಸರಕಾರ ಸ್ಪಂದಿಸುತ್ತಿಲ್ಲ: ರಾಮಲಿಂಗಾರೆಡ್ಡಿ

Update: 2020-07-22 13:45 GMT

ಬೆಂಗಳೂರು, ಜು.22: ಕೋವಿಡ್-19 ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಅವರ ಕಷ್ಟಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಿದ್ದಾರೆ. ಕೂಡಲೇ ಸರಕಾರ ಅವರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಕನಿಷ್ಠ 6 ಸಾವಿರ ರೂಪಾಯಿ ವೇತನ ನೀಡಿದ್ದು, ಇದೀಗ ಇದನ್ನು ಹೆಚ್ಚಿಸಲೇಬೇಕಿದೆ. ಅಲ್ಲದೆ, ಆಶಾ ಕಾರ್ಯಕರ್ತೆಯರನ್ನು ಕೊರೋನ ಸೈನಿಕರೆಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಹೇಳಿರುವಾಗ ವೇತನದ ವಿಚಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ ಎಂದರು.

ಇಂದು ಕೊರೋನ ನಿಯಂತ್ರಣ ವಿಚಾರದಲ್ಲಿ ನೆರೆಯ ಕೇರಳ ಮಾದರಿ ರಾಜ್ಯವಾಗಿದೆ. ಆದರೆ, ನಮ್ಮ  ಸರಕಾರಕ್ಕೆ ಮತ್ತು ಮಂತ್ರಿಗಳಿಗೆ ಇಚ್ಛಾಶಕ್ತಿ ಕೊರತೆ ಇದೆ. ಅಧಿಕಾರಿಗಳನ್ನು ಸರಿಯಾಗಿ ಬಳಸಿಕೊಂಡು ಕೆಲಸ ಮಾಡುತ್ತಿಲ್ಲ. ಅಷ್ಟೇ ಅಲ್ಲದೆ, ಈ ಸರಕಾರ ಒಂದು ವರ್ಷದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಸಾಧನೆ ಮಾಡಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News