ರೈಲು ಅವಘಡ ತಪ್ಪಿಸಿ ನೂರಾರು ಮಂದಿಯ ಪ್ರಾಣ ಉಳಿಸಿದ್ದ ಅನುಜಿತ್ ಅಪಘಾತಕ್ಕೆ ಬಲಿ

Update: 2020-07-22 15:48 GMT

ತಿರುವನಂತಪುರಂ, ಜು.22: 10 ವರ್ಷದ ಹಿಂದೆ ರೈಲು ಅಪಘಾತವನ್ನು ತಪ್ಪಿಸಿ ನೂರಾರು ಜನರ ಪ್ರಾಣ ಉಳಿಸಿದ್ದ ಕೇರಳದ ಅನುಜಿತ್ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದು, ಅವರ ಕೊನೆಯಾಸೆಯಂತೆ ದೇಹದ 8 ಅಂಗಗಳನ್ನು ಕುಟುಂಬಸ್ಥರು ಅಗತ್ಯವಿದ್ದವರಿಗೆ ದಾನ ಮಾಡಿದ್ದಾರೆ.

2010ರ ಆಗಸ್ಟ್‌ನಲ್ಲಿ , ಆಗ ಕೊಟ್ಟಾರಕ್ಕಾರದಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದ ಅನುಜಿತ್ ತನ್ನ ಸ್ನೇಹಿತರೊಂದಿಗೆ ರೈಲು ಹಳಿಯ ಬಳಿ ನಡೆದು ಹೋಗುತ್ತಿದ್ದಾಗ ಒಂದೆಡೆ ಹಳಿ ಬಿರುಕು ಬಿಟ್ಟಿರುವುದು ಕಣ್ಣಿಗೆ ಬಿದ್ದಿದೆ. ಅದೇ ಸಂದರ್ಭ ಆ ಹಳಿಯಲ್ಲಿ ರೈಲೊಂದು ಆಗಮಿಸುತ್ತಿರುವುದನ್ನು ಕಂಡ ಅನುಜಿತ್, ಅಪಾಯದ ಸೂಚನೆ ಅರಿತು ತಮ್ಮ ಕೆಂಪು ಬಣ್ಣದ ಶಾಲಾ ಬ್ಯಾಗನ್ನು ಧ್ಜಜದಂತೆ ಎತ್ತಿ ಬೀಸುತ್ತಾ ಚಾಲಕನಿಗೆ ಅಪಾಯದ ಸಂಕೇತ ರವಾನಿಸಿದರು. ಇದನ್ನು ಗಮನಿಸಿದ್ದ ಚಾಲಕ ರೈಲು ನಿಲ್ಲಿಸಿದ್ದು ನೂರಾರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು.

ಆದರೆ ಕಳೆದ ಜುಲೈ 14ರಂದು ಕೊಟ್ಟಾರಕ್ಕಾರ ಪ್ರದೇಶದಲ್ಲೇ ಅನುಜಿತ್ ಚಲಾಯಿಸುತ್ತಿದ್ದ ಬೈಕ್ ಅಪಘಾತಕ್ಕೆ ಈಡಾಗಿ ಅನುಜಿತ್ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು, ಬಳಿಕ ತಿರುವನಂತಪುರಂನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೆ 27 ವರ್ಷದ ಅನುಜಿತ್ ಮೃತಪಟ್ಟಿದ್ದು ಅವರ ಕೊನೆಯಾಸೆಯಂತೆ ಹೃದಯ, ಕಿಡ್ನಿಗಳು, ಕಣ್ಣುಗಳು, ಸಣ್ಣ ಕರುಳು ಹಾಗೂ ಕೈಗಳನ್ನು ಅಗತ್ಯವಿರುವವರಿಗೆ ದಾನ ಮಾಡುವಂತೆ ಅನುಜಿತ್ ಪತ್ನಿ ಪ್ರಿನ್ಸಿ ಮತ್ತು ಸಹೋದರಿ ಅಜಲ್ಯ ವೈದ್ಯರಿಗೆ ಹೇಳಿದ್ದಾರೆ.

ಅಂಗ ದಾನ ಪ್ರಕ್ರಿಯೆ ‘ಕೇರಳ ನೆಟ್‌ವರ್ಕ್ ಫಾರ್ ಆರ್ಗನ್ ಶೇರಿಂಗ್(ಕೆಎನ್‌ಒಎಸ್) ಮೂಲಕ ನಡೆದಿದ್ದು ಅನುಜಿತ್ ಹೃದಯವನ್ನು ತ್ರಿಪುನಿಥುರದ 55 ವರ್ಷದ ವ್ಯಕ್ತಿಗೆ ಅಳವಡಿಸಲು ನಿರ್ಧರಿಸಲಾಗಿದೆ. ರಾಜ್ಯ ಸರಕಾರ ಒದಗಿಸಿರುವ ಹೆಲಿಕಾಪ್ಟರ್ ಮೂಲಕ ಹೃದಯವನ್ನು ರವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ. ಅನುಜಿತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ರಾಜ್ಯದ ಆರೋಗ್ಯ ಸಚಿವೆ ಕೆಕೆ ಶೈಲಜಾ, ಸಾವಿನಲ್ಲೂ ಸಾರ್ಥಕ್ಯ ಮೆರೆದಿರುವ ಅನುಜಿತ್ ಮಾದರಿ ವ್ಯಕ್ತಿ ಎಂದು ಹೇಳಿದ್ದಾರೆ.

 ಖಾಸಗಿ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅನುಜಿತ್, ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದ ಕಾರಣ ಸೇಲ್ಸ್‌ಮ್ಯಾನ್ ಕೆಲಸಕ್ಕೆ ಸೇರಿದ್ದರು. ದಂಪತಿಗೆ 3 ವರ್ಷದ ಮಗುವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News